ಗಂಗಾವತಿ: ಎಳ್ಳಮಾವಾಸ್ಯೆ ದಿನ ನಾಡಿನಾದ್ಯಂತ ಅನ್ನದಾತರು ಭೂಮಿ ತಾಯಿಗೆ ಚರಗ ಚಲ್ಲಿ ಪೂಜೆ ಸಲ್ಲಿಸಿ ಕುಟುಂಬ ಸಮೇತವಾಗಿ ಹೊಲದಲ್ಲಿ ಊಟ ಸವಿದರು.
ಅನ್ನದಾತರಿಗೆ ಎಳ್ಳಮಾವಾಸ್ಯೆ ದಿನದಂದು ರೈತಾಪಿವರ್ಗದವರು ತಮ್ಮ ಹೊಲಗದ್ದೆಗೆ ಕುಟುಂಬ ಸಮೇತ ಪೂಜಾ ಸಾಮಾನು ವಿವಿಧ ಬಗೆಯ ಎಳ್ಳಚ್ಚಿದ ರೊಟ್ಟಿ, ಸಜ್ಜೆರೊಟ್ಟೆ,ಸೇಂಗಾದೊಳಿಗೆ ಜೋಳದರೊಟ್ಟಿ ಸೇರಿ ವಿವಿಧ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಮೊದಲಿಗೆ ಭೂಮಿತಾಯಿಗೆ ಪೂಜೆ ಮಾಡಿ ತೆಗೆದುಕೊಂಡು ಹೋದ ಆಹಾರ ಪದಾರ್ಥಗಳನ್ನು ಇಡೀ ಹೊಲದ ಸುತ್ತ ಚರಗ ಚಲ್ಲುತ್ತಾರೆ. ನಂತರ ಕೆಲ ಹೊತ್ತು ಹೊಲದಲ್ಲಿ ಕಳೆದು ನಂತರ ಸಂಜೆ ಮನೆಗೆ ಮರಳುತ್ತಾರೆ.
ಜಾಗತಿಕರಣದ ಪರಿಣಾಮ ಪ್ರಸ್ತುತ ಗ್ರಾಮಗಳಲ್ಲಿ ಎತ್ತು ಬಂಡಿ ಸಂಖ್ಯೆ ಇಳಿಮುಖವಾಗಿದ್ದು ಟ್ರ್ಯಾಕ್ಟರ್ ಇತರೆ ವಾಹನಗಳಲ್ಲಿ ರೈತರು ಹೊಲ ಗದ್ದೆಗೆ ತೆರಳುತ್ತಾರೆ. ರೈತರ ಆದಾಯ ದುಪ್ಪಟ್ಟು ಮಾಡುವ ಸರಕಾರಗಳ ಭರವಸೆ ಹಾಗೇ ಇದ್ದರೂ ರೈತರು ಮಾತ್ರ ಈ ಜಗತ್ತಿಗೆ ಅನ್ನ ಹಾಕುವ ಪವಿತ್ರ ವೃತ್ತಿಯನ್ನು ಬಿಟ್ಟಿಲ್ಲ.