Advertisement
ವೈಕುಂಠ ಏಕಾದಶಿ ಅಂಗವಾಗಿ ಉದ್ಯಾನನಗರಿಯ ವಿವಿಧೆಡೆಯ ವಿಷ್ಣು , ವೆಂಕಟೇಶ್ವರ, ಶ್ರೀನಿವಾಸ, ಶ್ರೀರಾಮ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಅಲಂಕಾರ, ಪೂಜೆ, ನಾದ ಸಂಗೀತ ಮೇಳೈಸಿದವು. ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಜನ ನಸುಕಿನಲ್ಲೇ ಎದ್ದು ಸ್ನಾನ, ಮಡಿ, ಉಪವಾಸ ಆಚರಣೆಯೊಂದಿಗೆ ದೇವಾಲಯಗಳಿಗೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ರಾತ್ರಿ 11 ಗಂಟೆವರೆಗೂ ದೇವಾಲಯಗಳಲ್ಲಿ ವೈಕುಂಠದ ವೈಭವ ಅದ್ಧೂರಿಯಾಗಿ ನೆರವೇರಿತು.
Related Articles
Advertisement
ಇದಲ್ಲದೆ, ನಗರದ ಉತ್ತರಾಧಿ ಮಠದಲ್ಲಿ ವೈಕುಂಠ ಏಕಾದರ್ಶಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿಷ್ಣುಪಾದ ಪೂಜೆ, ಪಂಚಾಮೃತ, ಸರ್ವಮೂಲ ಪಾರಾಯಣ, ಭಜನೆ, ಅಷ್ಟೋತ್ತರ, ಮೂಲರಾಮದೇವರ ಪೂಜೆ, ಮಂಗಳ ಮಹೋತ್ಸವ ನೆರವೇರಿದವು. ರಾಜಾಜಿನಗರದ 5ನೇ ಬ್ಲಾಕ್‌ನ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಶ್ರೀನಿವಾಸ ಸ್ವಾಮಿಗೆ ಮಹಾಭಿಷೇಕ, ಪಂಚಾಮೃತ ಅಭಿಷೇಕ, ಸುಪ್ರಭಾತ ಸೇವೆ, ಮಹಾಮಂಗಳರಾತಿ ನಡೆದವು.
ಶ್ರೀರಾಮಪುರದ ರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಗಾಯನ, ವೈಯಾಲಿಕಾವಲ್‌ನ ತಿರುಮಲ ತಿರುಪತಿ ದೇವಾಲಯದಲ್ಲಿ ಸತೀಶ್ ಶರ್ಮಾ ಹಾಗೂ ಕಿರಣ್ ಶರ್ಮಾ ಅವರಿಂದ ವೇದಪಾರಾಯಣ, ವಿದ್ವಾನ್ ಬಿ.ಹರಿಪ್ರಸಾದ್ ಅವರಿಂದ ನಾದಸ್ವರ, ವಾಸವಿ ಮಹಿಳಾ ಮಂಡಳಿಯಿಂದ ವಿಷ್ಣುಪಾರಾಯಣ, ವಿದ್ವಾನ್ ಉಮಾ ಕುಮಾರ್ ಅವರಿಂದ ಭಕ್ತಿ ಸಂಗೀತ, ಭಾರತಿ ತೀರ್ಥ ಭಜನ ಮಂಡಳಿಯಿಂದ ಭಜನೆ, ಎಸ್.ಎನ್.ಸುರೇಶ್ ದಾಸ್ ಅವರಿಂದ ಹರಿಕಥೆ ಆಯೋಜಿಸಲಾಗಿತ್ತು.
ಅದೇ ರೀತಿ ವೈಕುಂಠ ಏಕಾದಶಿ ಪ್ರಯುಕ್ತ ಪಾಂಡುರಂಗ ವಿಷ್ಣುಸಹಸ್ರನಾಮ ಮಂಡಳಿಯಿಂದ ಮಲ್ಲೇಶ್ವರ ಆಟದ ಮೈದಾನದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಅರಿಶಿನ -ಕುಂಕುಮ ಹಂಚಿಕೆ, ಅಕ್ಷತೆ ತುಳಸಿ, ಹೂವಿನ ಅರ್ಚನೆ ಹಾಗೂ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಇಸ್ಕಾನ್‌ನಲ್ಲಿ ವೈಭವದ ವೈಕುಂಠ ಏಕಾದಶಿ ವಿಷ್ಣುವಿನ 10 ಅವತಾರಗಳಲ್ಲಿ ಕೃಷ್ಣಾವತಾರವೂ ಒಂದು. ಹಾಗಾಗಿ ಯಶವಂತಪುರ ಬಳಿಯ ಹರೇ ಕೃಷ್ಣಗಿರಿ “ಇಸ್ಕಾನ್’ನಲ್ಲೂ ವೈಭವದ ವೈಕುಂಠ ಏಕಾದರ್ಶಿ ಭಾನುವಾರ ನೆರವೇರಿತು. ನಗರದ ನಾನಾ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಸಾಲುಗಟ್ಟಿ ನಿಂತು ಶ್ರೀ ಕೃಷ್ಣನ ದರ್ಶನ ಪಡೆದರು. ಮುಂಜಾನೆಯಿಂದಲೇ ವೇದ ಮಂತ್ರಗಳೊಂದಿಗೆ ಶ್ರೀನಿವಾಸನ ಮೂರ್ತಿಗೆ ಹಾಲು, ಮೊಸರು, ತುಪ್ಪ, ಬೆಣ್ಣೆ, ಜೇನುತುಪ್ಪ, ಹಣ್ಣಿನ ರಸದ ಅಭಿಷೇಕ ನೆರವೇರಿಸಲಾಯಿತು. ಬಳಿಕ ವೈವಿದ್ಯಮಯ ಪುಷ್ಪಗಳಿಂದ ಗೋವಿಂದನ್ನು ಅಲಂಕರಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ರಾಧಾ ಕೃಷ್ಣ ಉತ್ಸವ ಮೂರ್ತಿಯನ್ನು ಲಕ್ಷ್ಮೀ-ನಾರಾಯಣನ ಅಲಂಕಾರದಲ್ಲಿ ಇಸ್ಕಾನ್ ಸುತ್ತಲ ರಸ್ತೆಗಲಲ್ಲಿ ಮೆರವಣಿಗೆ ನಡೆಸಲಾಯಿತು.