ಹೊಸತಂಡವೊಂದು ಸೇರಿಕೊಂಡು ಈಗ ಸದ್ದಿಲ್ಲದೆಯೇ “ವಜ್ರ’ ಎಂಬ ಚಿತ್ರ ಮಾಡಿ ಮುಗಿಸಿದೆ. ಬುಧವಾರ (ಇಂದು) ಚಿತ್ರದ ವೀಡಿಯೋ ಸಾಂಗ್ ಕೂಡ ಯು ಟ್ಯೂಬ್‌ನಲ್ಲಿ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ತರಲು ಅಣಿಯಾಗುತ್ತಿದೆ ಚಿತ್ರತಂಡ. ಎಲ್ಲಾ ಸರಿ, ಈ “ವಜ್ರ’ ಅಂದರೆ ಏನು? ಅದು ವಸ್ತುವಿನ ಹೆಸರೋ, ವ್ಯಕ್ತಿಯ ಹೆಸರೋ ಎಂಬ ಗೊಂದಲ ಬರದೇ ಇರದು.
ಇಲ್ಲೊಂದು ವಿಶೇಷತೆ ಇದೆ. “ವಜ್ರ’ದಷ್ಟೇ ಹೊಳಪು ಚಿತ್ರದುದ್ದಕ್ಕೂ ಕಾಣಬಹುದು ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಈ ಚಿತ್ರದ ಮೂಲಕ ಪ್ರವೀಣ್ ನಾಯಕರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಇದೊಂದು ಥ್ರಿಲ್ಲರ್, ಆ್ಯಕ್ಷನ್ ಕಥೆ ಇರುವ ಚಿತ್ರ. ಸಾಮಾನ್ಯವಾಗಿ ಥ್ರಿಲ್ಲರ್, ಆ್ಯಕ್ಷನ್ ಕಥೆಗಳಲ್ಲಿ ಮನರಂಜನೆ ಇರುವುದಿಲ್ಲ. ಇಲ್ಲಿ ಮನರಂಜನೆಯೂ ಅದರೊಂದಿಗೆ ಸಾಗಲಿದೆ.
“ವಜ್ರ’ ಅಂದರೆ ಅತಿಯಾದ ಬೆಲೆ ಬಾಳುವಂಥದ್ದು. ಇಲ್ಲಿ ವಜ್ರವೂ ಪ್ರಮುಖ ಪಾತ್ರ ವಹಿಸುತ್ತಾ? ಅದು ಸಸ್ಪೆನ್ಸ್ ಎನ್ನುತ್ತಾರೆ ನಿರ್ದೇಶಕ ಪ್ರವೀಣ್. ಚಿತ್ರದಲ್ಲಿ ಸುಷ್ಮಿತಾ ಗೋಪಿನಾಥ್ ಅವರು ಪ್ರವೀಣ್‌ಗೆ ನಾಯಕಿಯಾಗಿದ್ದಾರೆ. ಇನ್ನು, ಹಿರಿಯ ಕಲಾವಿದ ದಿವಂಗತ ದಿನೇಶ್ ಅವರ ಪುತ್ರ ಗಿರಿ ದಿನೇಶ್ ಅವರಿಲ್ಲಿ ಮುಖ್ಯ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲರಾಜ್ ವಾಡಿಯಾ ಅವರು ಖಳನಟರಾಗಿ ನಟಿಸಿದ್ದಾರೆ.
ಮಜಾ ಟಾಕೀಸ್‌ನ ಪವನ್‌ಕುಮಾರ, ಕಾರ್ತಿಕ್, ಸೂರ್ಯಕಿರಣ್ ಸೇರಿದಂತೆ ಕೇವಲ ಹನ್ನೊಂದು ಪಾತ್ರಗಲು ಚಿತ್ರದಲ್ಲಿ ಕಾಣಿಸಿಕೊಂಡಿವೆ ಎಂಬುದು ನಿರ್ದೇಶಕರ ಮಾತು. ಚಿತ್ರಕ್ಕೆ ವಿನಯ್ ಸಂಭಾಷಣೆ ಬರೆದಿದ್ದಾರೆ. ಮ್ಯಾಡ್ ಟಾಕೀಸ್ ಪ್ರೊಡಕ್ಷನ್ಸ್‌ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ವಾಹಿನಿಯಲ್ಲಿ ನಡೆಯುವಂತಹ ಸುದ್ದಿ ವಿಚಾರಗಳ ವಿನಿಮಯ ಹೈಲೈಟ್. ಚಿತ್ರಕ್ಕೆ ಮನೀಶ್‌ಕುಮಾರ್ ಸಂಗೀತವಿದೆ. ಅರುಣ್ ಸುರೇಶ್ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್‌ನಲ್ಲಿ “ವಜ್ರ’ ತೆರೆಗೆ ಬರಲಿದೆ.