Advertisement

ಗ್ರಾ.ಪಂ ಕಚೇರಿಯಲ್ಲಿ ಮೋದಿ ಚಿತ್ರ: ಜಾತಿ ನಿಂದನೆ

04:22 PM Sep 25, 2021 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ನೊರನಕ್ಕಿ ಗ್ರಾಪಂ ಕಚೇರಿಯ ಸಭಾಂಗಣದಲ್ಲಿ ಇದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಫೊಟೋ ಪಕ್ಕ ಹಾಲಿ ಪ್ರಧಾನಿ ಮೋದಿ ಭಾವಚಿತ್ರ ಆಳವಡಿಸಿದ ಪರಿಶಿಷ್ಟ ಪಂಗಡದ ಮಹಿಳೆಯ ಜಾತಿ ನಿಂದನೆ ಮಾಡಿ, ಗ್ರಾಪಂ ಮಹಿಳಾ ಸದಸ್ಯರ ಪತಿಯರ ವಿರುದ್ಧ ದೂರು ದಾಖಲಾಗಿದ್ದು, ದೂರಿಗೆ ಪ್ರತಿದೂರು ಗ್ರಾಮಾಂತ ಠಾಣೆಯಲ್ಲಿ ದಾಖಲಾಗಿದೆ.

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದಂದು ಗ್ರಾಪಂ ಸದಸ್ಯರಾದ ಭಾರ್ಗವಿ ಮಧು, ಚಂದ್ರಕಲಾ ಗಿರೀಶ್‌, ನಿಂಗೇಗೌಡ, ಲಕ್ಷ್ಮೀಶ ಹಾಗೂ ಗ್ರಾಪಂ ಸದಸ್ಯೆಯರ ಪತ್ನಿಯಾದ ಗಿರೀಶ್‌, ಮಧು ಗ್ರಾಪಂ ಒಳಗೆ ಪ್ರವೇಶ ಮಾಡಿ ದೇವೇಗೌಡ ಫೊಟೋ ಪಕ್ಕದಲ್ಲಿ ನರೇಂದ್ರ ಮೋದಿ ಫೊಟೊ ಅಳವಡಿಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಗ್ರಾಪಂ ದ್ವಿತೀಯ ದರ್ಜೆ ಸಹಾಯಕ ಕೆ.ಆರ್‌.ರಮೇಶ್‌ ಗ್ರಾಮಾಂತ ಠಾಣೆಗೆ ದೂರು ನೀಡಿದ್ದಾರೆ.

ಪ್ರತಿಯಾಗಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಚಂದ್ರಕಲಾ ಗಿರೀಶ್‌ ಜಾತಿ ನಿಂದನೆ ದೂರು ದಾಖಲಿದ್ದಾರೆ. ಭಾರ್ಗವಿಮಧು, ನಿಂಗೇಗೌಡ, ಲಕ್ಷ್ಮೀಶ ಸೇರಿದಂತೆ ಅನೇಕ ಸದಸ್ಯರ ಜತೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದು ಈ ವೇಳೆ ಮೋದಿ ಜನ್ಮದಿನದ ಪ್ರಯುಕ್ತ ಸಿಹಿ ಹಂಚಲು ಮುಂದಾದಾಗ ನನ್ನ ಮೇಲೆ ವ್ಯಾಜ್ಯ ಮಾಡಿದರು.

ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿಗೆ ಖಡಕ್ ಉತ್ತರ ಕೊಟ್ಟ ದಿಟ್ಟೆ, ಯಾರಿವರು ಸ್ನೇಹಾ ದುಬೆ?

ಬಿಲ್‌ ಕಲೆಕ್ಟರ್‌ ಶಿವಶಂಕರ ಹಾಗೂ ಅಕೌಂಟೆಂಟ್‌ ರಮೇಶ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿ, ನೀನು ಹೀನ ಜಾತಿಯವಳು ನಿನ್ನ ಒಳಗಡೆ ಬಿಟ್ಟುಕೊಂಡಿದ್ದು ಹೆಚ್ಚು ಅದರಲ್ಲೂ ನೀನು ಉತ್ತರ ಭಾರತದವನಾದ ಮೋದಿ ಫೊಟೋವನ್ನು ತಂದು ಕಚೇರಿಯಲ್ಲಿ ಏಕೆ ಹಾಕಿದೆ? ಎಂದು ನಿಂದಿಸಿದರು. ಈ ವೇಳೆ ಇವರ ಪಕ್ಕದಲ್ಲಿ ಇದ್ದ ಗ್ರಾಪಂ ಅಧ್ಯಕ್ಷ ಜಬೀರ್‌ ಖಾನ್‌, ಉಪಾಧ್ಯಕ್ಷೆ ವಸಂತರಾಣಿ, ಸದಸ್ಯರಾದ ಗಂಗಾಧರ, ಮಂಜೇಗೌಡ, ರಘು, ತಿಮ್ಮೇಗೌಡ, ಸತೀಶ, ಕೋಮಲಾಕ್ಷಿ, ಲಕ್ಷ್ಮಮ್ಮ ಇವರು ಜಾತಿ ನಿಂದನೆ ಜತೆಗೆ ಸಭೆಯಲ್ಲಿ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.


ನಿನಗೆ ಮೋದಿ ಫೊಟೋ ಹಾಕಲು ಅವಕಾಶ ಮಾಡಿದ್ದು ತಪ್ಪಾಯಿತು. ನಿನ್ನಿಂದ ಗ್ರಾಪಂಯಲ್ಲಿ ಗದ್ದಲವಾಯಿತು. ಕೆಳಜಾತಿಯವಳಿಗೇಕೆ ಮೋದಿ ಫೊಟೋ ಹೆಚ್ಚು ಎಂದು ಪಿಡಿಒ ರಾಮಸ್ವಾಮಿ ನನ್ನ ಜಾತಿ ಹೆಸರು ಹೇಳಿ ನಿಂದಿಸಿದ್ದಾರೆ. ಸರ್ಕಾರಿ ನೌಕರರಾಗಿದ್ದು ಈ ರೀತಿ ನಿಂದಿಸಿರುವುದರಿಂದ ಇವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

Advertisement

ಮಾಜಿ ಪ್ರಧಾನಿ ದೇವೇಗೌಡ ಪುತ್ರ ಶಾಸಕ ರೇವಣ್ಣ ಅವರ ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಬೆಂಬಲಿತರ ನಡುವೆ ಗ್ರಾಪಂನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಗ್ರಾಪಂ ಮುಂಭಾಗ, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.

ಜಾತಿ ಹೆಸರು ಹೇಳಿ
ಅವಾಚ್ಯವಾಗಿ ನಿಂದನೆ
ದಲಿತ ಜಾತಿಗೆ ಸೇರಿದ ಮಹಿಳೆ ನೀನು ಒಕ್ಕಲಿಗನ ವಿವಾಹ ಆದ ತಕ್ಷಣ ನೀನು ಒಕ್ಕಲಿಗಿತ್ತಿ ಆಗುವುದಿಲ್ಲ. ನಿಮ್ಮ ವಿವಾಹ ಅದ ಆತನೂ ಕುಲಗೆಟ್ಟವ ನೀನು ಸಾಯುವವರೆಗೂ ಹೀನ ಜಾತಿ ಅವಳೆ ಎಂದು ಜಾತಿಯ ಹೆಸರು ಹೇಳಿ ನಿಂದಿಸಿದಲ್ಲದೆ ಆಚೆ ಹೋಗುವಂತೆ ಒತ್ತಡ ಹಾಕಿದರು. ನೀನಾಗೆ ಆಚೆ ಹೋಗದಿದ್ದರೆ ನಾವು ಹೊರಗೆ ಹಾಕುತ್ತೇವೆ ಎಂದು ಏರುಧ್ವನಿಯಲ್ಲಿ ಅವಾಚ್ಯವಾಗಿ ನಿಂದಿಸಿದಲ್ಲದೆ, ಗ್ರಾಪಂ ಮೈಲಿಗೆ ಮಾಡಿದ್ದೀಯ ನಾವು ಗಂಜಲದ ನೀರು ತಂದು ಶುದ್ಧಿ ಮಾಡುತ್ತೇವೆ ಎಂದು ಸವರ್ಣಿಯರು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಚಂದ್ರಕಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next