Advertisement

ಚನ್ನಪಟ್ಟಣದ ಜೆಡಿಎಸ್ ಮುಖಂಡ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

01:08 PM May 12, 2022 | Team Udayavani |

ಬೆಂಗಳೂರು: ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಲಕುಗ್ಗಿಸುವ ಪ್ರಯತ್ನವನ್ನು ಡಿ.ಕೆ‌.ಬ್ರದರ್ಸ್ ಮಾಡುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಗುರುವಾರ ಚನ್ನಪಟ್ಟದ ಜೆಡಿಎಸ್ ಮುಖಂಡರು ಮತ್ತು ನೂರಾರು ಬೆಂಬಲಿಗರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

Advertisement

ಉದ್ಯಮಿ ಪ್ರಸನ್ನ ಜೊತೆ ನೂರಾರು ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಭಾಗಿಯಾಗಿದ್ದರು.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ  ಹಿನ್ನೆಲೆಯಲ್ಲಿ, ಸಿ.ಪಿ. ಯೋಗೇಶ್ವರ್,ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಲಾಗುತ್ತಿದ್ದು, ರಾಮನಗರದ ಭಾಗದಲ್ಲಿ ‘ಆಪರೇಷನ್ ಹಸ್ತ’ ಹಮ್ಮಿಕೊಳ್ಳಲಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಜಿಲ್ಲೆಯ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ,ಜೆಡಿಎಸ್ ಮುಖಂಡರು ಇದ್ದಾರೆ. ಶೀಘ್ರದಲ್ಲೇ ಚನ್ನಪಟ್ಟಣದಲ್ಲಿ ಅವರನ್ನ ಸೇರಿಸಿಕೊಳ್ಳುತ್ತೇವೆ. ಜನತಾ ಸರ್ಕಾರವನ್ನ ನಾವು ನೋಡಿದ್ದೇವೆ. ಬಿಜೆಪಿ ಸರ್ಕಾರದ ಆಡಳಿತವನ್ನ ನೋಡಿದ್ದೇವೆ. ನಾವು ಒಂದು ಸರ್ವೆ ಮಾಡಿಸಿದ್ದೇವೆ. ಸರ್ವೆಯಲ್ಲಿ ಕಾಂಗ್ರೆಸ್ ಪರವಾದ ಒಲವಿದೆ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ಹೇಳಲ್ಲ. ಅವರು ಕೋಮುಸಂಘರ್ಷದ ಮೂಲಕ ಬರುತ್ತಿದ್ದಾರೆ. ಯಾರು ಏನೂ ಮಾಡಲಿ,ಜನ ನಮ್ಮ ಕಡೆ ಇದ್ದಾರೆ. ಅಧಿಕಾರ ಕೊಡದಿದ್ದರೂ ನಮ್ಮ‌ಪ್ರೀತಿ ಇರಲಿದೆ ಎಂದರು.

ಬಿಜೆಪಿಯ ಹಲವು ನಾಯಕರು ಮಾತನಾಡಿದ್ದಾರೆ. ಅಣ್ಣಾ, ಸ್ವಲ್ಪ ದಿನ ಇರಿ ಅಂತಿದ್ದಾರೆ. ಹಾಗಾಗಿ ನೀವು ಪ್ರತಿ ಮನೆಮನೆಗೆ ಭೇಟಿ ಮಾಡಿ, ಪ್ರತಿಯೊಬ್ಬ ಜನರನ್ನ ತಲುಪುವ ಕೆಲಸ ಮಾಡಿ. ಸ್ಥಳೀಯ ಸಂಸ್ಥೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ನಾವಂತೂ ಚುನಾವಣೆಗೆ ರೆಡಿಯಾಗಿದ್ದೇವೆ. ಕೆಲವರು ನಮ್ಮವರು ಬೇರೆ ಪಕ್ಷಕ್ಕೆ ಸೇರಿದ್ದಾರೆ. ನಾವು ಕೆಲವರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ರಾಮನಗರದಲ್ಲಿ ಕಾಂಗ್ರೆಸ್ ಬಲಗೊಳಿಸಬೇಕು. ಚನ್ನಪಟ್ಟಣದಲ್ಲಿ ಹಲವು ಜನರಿದ್ದಾರೆ. ಅಲ್ಪಸಂಖ್ಯಾತರು,ದಲಿತರು ಹೆಚ್ಚಿದ್ದಾರೆ. ಹಾಗಾಗಿ ಪ್ರತಿಕ್ಷೇತ್ರದತ್ತ ಗಮನಹರಿಸಿದ್ದೇವೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಸದಸ್ಯತ್ವವನ್ನ ಹೆಚ್ಚು ಮಾಡುತ್ತಿದ್ದೇವೆ ಎಂದರು.

Advertisement

ಪಕ್ಷಕ್ಕೆ ಬರುವವರು ಬಹಳ ಜನ ಅರ್ಜಿ ಹಾಕಿದ್ದಾರೆ. ಅರ್ಜಿಗಳು‌ ಬಹಳಷ್ಟು ಪೆಂಡಿಂಗ್ ಇದೆ. ಹಾಗಾಗಿ ನೋಡಿಕೊಂಡು ಸೇರಿಸಿಕೊಳ್ಳುತ್ತಿದ್ದೇವೆ. ಚನ್ನಪಟ್ಟಣದಲ್ಲಿ ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಳ್ಳಬೇಡಿ. ಅಲ್ಲಿನ ಜನ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಗುತ್ತಿಗೆ ಕೊಡಬೇಕಾದರೂ ಮಾಡಿದ್ದಾರೆ ಗೊತ್ತಿದೆ. ಈ ವೇದಿಕೆಯಲ್ಲಿ ನಾನು ಹೇಳುವುದಿಲ್ಲ. ಈಗ ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ. ಜನ ಬದಲಾವಣೆಯನ್ನ ಬಯಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next