ಬಳ್ಳಾರಿ: ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡಬೇಕು ಎನ್ನುತ್ತಲೇ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಸಂಡೂರಿನಲ್ಲಿ ಶನಿವಾರ (ಅ.19) ಮಾತನಾಡಿದ ಅವರು ಪರೋಕ್ಷವಾಗಿ ಚನ್ನಪಟ್ಟಣ ಟಿಕೆಟ್ ಜೆಡಿಎಸ್ ಗೆ ಎಂದರು.
ಚನ್ನಪಟ್ಟಣದಲ್ಲಿ ನಮ್ಮ ಕಾರ್ಯ ಕರ್ತರ ರಕ್ಷಣೆ ಮಾಡಬೇಕಿದೆ. ನಾನು ಎಲ್ಲೂ ಆಕಾಂಕ್ಷಿ ಎಂದು ಹೇಳಿಲ್ಲ. 1994 ರಿಂದ ದೇವೇಗೌಡರಿಂದ ಕುಮಾರಸ್ವಾಮಿವರೆಗೂ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ್ದೇವೆ. ನಾನು ಸ್ಪರ್ಧೆ ಮಾಡುತ್ತೇನೆಂದರೂ ಒಂದು ರೀತಿ, ಸ್ಪರ್ಧೆ ಮಾಡಲ್ಲ ಎಂದರೂ ಒಂದು ರೀತಿಯಲ್ಲಿ ಚರ್ಚೆಯಾಗುತ್ತದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆ ಎನ್‌ಡಿಎ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಈಗಾಗಲೇ ಕುಮಾರಣ್ಣ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದಾರೆ. ಅತ್ತ ಸಿ.ಪಿ.ಯೋಗೇಶ್ವರ್ ಕೂಡಾ ಸಭೆ ಮಾಡಿದ್ದಾರೆ. ನಾನೂ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದೇನೆ. ಎರಡು ಮೂರು ತಿಂಗಳಿಂದ ನಾನೂ ಕಾರ್ಯಕರ್ತರ ಜೊತೆ ಸೇರಿ ಚನ್ನಪಟ್ಟಣದಲ್ಲಿ ಕೆಲಸ ಮಾಡಿದ್ದೇನೆ. ಚುನಾವಣೆ ಕೆಲಸ ಕೂಡ ಚನ್ನಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ನಿಖಿಲ್ ಹೇಳಿದರು.
ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುತ್ತೇನೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ವಿಚಾರ ಸದ್ಯಕ್ಕೆ ಅಪ್ರಸ್ತುತ. ಸದ್ಯ ಇರುವ ಸರ್ಕಾರ ಮೂರುವರೆ ವರ್ಷ ಇರುತ್ತದೆಯೋ ಇಲ್ಲವೋ ನೋಡೋಣ ಎಂದ ನಿಖಿಲ್, ಯತ್ನಾಳ್ ಹೇಳಿಕೆ ಕೇಳಿದ್ದೇನೆ. ಯಾವುದೇ ರೀತಿಯಲ್ಲಿ ತಪ್ಪಾಗಿ ಮಾತನಾಡಿಲ್ಲ ಎಂದರು.