ಚಾಂಗ್ವೊನ್ (ಕೊರಿಯಾ): ಕಮಲ್‌ಜೀತ್ ಅವರ ನಿಖರ ಗುರಿಯಿಂದಾಗಿ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅಂತಿಮ ದಿನವಾದ ಸೋಮವಾರ 2 ಚಿನ್ನದ ಪದಕ ಜಯಿಸಿತು.
ಎರಡೂ ಬಂಗಾರ ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಬಂತು. ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಕಮಲ್‌ಜೀತ್, ಬಳಿಕ ತಂಡ ಸ್ಪರ್ಧೆಯಲ್ಲೂ ಬಂಗಾರ ಗೆಲ್ಲಲು ನೆರವಾದರು.
ವೈಯಕ್ತಿಕ ಸಿಂಗಲ್ಸ್‌ನಲ್ಲಿ ಕಮಲ್‌ಜೀತ್ 600ರಲ್ಲಿ 544 ಅಂಕ ಗಳಿಸಿದರು. ಬಳಿಕ ಕಮಲ್‌ಜೀತ್, ಅನಿಕೇತ್ ತೋಮರ್, ಸಂದೀಪ್ ಬಿಷ್ಣೋಯಿ ಅವರನ್ನೊಳಗೊಂಡ ತಂಡ ಸ್ಪರ್ಧೆಯಲ್ಲಿ 1,617 ಅಂಕ ಗಳಿಸಿದ ಭಾರತ ಬಂಗಾರಕ್ಕೆ ಗುರಿ ಇರಿಸಿತು. ಉಜ್ಬೆಕಿಸ್ಥಾನ್ 2ನೇ (1,613) ಮತ್ತು ಕೊರಿಯಾ (1,600) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದಿತು.
ವನಿತೆಯರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ತಿಯಾನಾ ಫೋಗಟ್ ಕೇವಲ ಒಂದು ಅಂಕದ ಹಿನ್ನಡೆಯಿಂದಾಗಿ ಬೆಳ್ಳಿಗೆ ಸಮಾಧಾನ ಪಡ ಬೇಕಾಯಿತು.
ಭಾರತಕ್ಕೆ ದ್ವಿತೀಯ ಸ್ಥಾನ
ಕೂಟದಲ್ಲಿ ಭಾರತ 17 ಪದಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. ಭಾರತ 6 ಚಿನ್ನ, 6 ಬೆಳ್ಳಿ ಹಾಗೂ 5 ಕಂಚು ಜಯಿಸಿತು. ಚೀನ ಒಟ್ಟು 28 ಪದಕ ಗೆದ್ದಿತು. ಇದರಲ್ಲಿ 12 ಬಂಗಾರ ಸೇರಿದೆ.