Advertisement

ಹಳೇ ನೋಟು ಬದಲಿಸುವ ಖದೀಮರ ಸೆರೆ

06:00 AM Oct 29, 2018 | |

ಬಾಗಲಕೋಟೆ: ಅಪಮೌಲ್ಯಗೊಂಡಿರುವ 500 ಹಾಗೂ 1000 ರೂ. ಮುಖಬೆಲೆಯ ನೋಟು ಬದಲಾವಣೆ ಹಾಗೂ ಏಳು ದಿನಗಳಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಬೃಹತ್‌ ಜಾಲವೊಂದನ್ನು ಬಾಗಲಕೋಟೆ ಪೊಲೀಸರು ಪತ್ತೆ ಮಾಡಿ 12 ಜನ ಅಂತಾರಾಜ್ಯ ವಂಚಕರನ್ನು ಬಂಧಿಸಿದ್ದಾರೆ. ಈ ಎಲ್ಲ ವ್ಯವಹಾರಕ್ಕೆ ಎಸ್‌ಪಿ ಕಚೇರಿ ಸಿಬಂದಿಯೊಬ್ಬರು ಕಿಂಗ್‌ಪಿನ್‌ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ. ಅಲ್ಲದೆ 667 ಕೋಟಿ ರೂ. ಮೊತ್ತದ ಡೀಲ್‌ ಇದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಶಂಕರ ಗಾಮಾ, ಮನೋಜ ಕುಮಾರ, ಶರತ ಬಾಬುರಾವ್‌ ಪಾಟೀಲ, ಮಹೇಂದ್ರ ನವಸಿ, ಅಸಾಕ್‌, ಮೊಹ್ಮದ ಅಕ್ಲಾಕ್‌, ಅಬ್ಟಾಸ ಫಾರೂಕ, ವಿಜಯ ಪಾಂಡೆ, ಇದ್ರೀಶ ಖಾಜಿ, ಸಂಗಪ್ಪ ಕೋಟಿ, ಮುರಾರಿ ಮೋರೆ ಹಾಗೂ ಪಾಪತ್‌ ಕಾಕಾಡಿಯಾ ಬಂಧಿತರು. ಇವರೆಲ್ಲ 100 ರೂ.ಗೆ 30 ರೂ. ಕಮಿಷನ್‌ ಆಧಾರದ ಮೇಲೆ ಹಳೆಯ ನೋಟು ಬದಲಾವಣೆ ಹಾಗೂ 7 ದಿನಗಳಲ್ಲಿ ಹಣ ದ್ವಿಗುಣ ಮಾಡುವುದಾಗಿ ಪ್ರಭಾವಿಗಳಿಂದ ಹಣ ಪಡೆದು ವಂಚಿಸುತ್ತಿದ್ದರು.

ಬಾಗಲಕೋಟೆ ಎಸ್ಪಿ ಕಚೇರಿಯ ಮಿನಿಸ್ಟರಿಯಲ್‌ ಸಿಬಂದಿ ಅಶೋಕ ಉಮಾಕಾಂತ ನಾಯಕ ಅವರು ಶಂಕರ ಗಾಮಾನೊಂದಿಗೆ ವ್ಯವಹಾರಕ್ಕೆ ಮುಂದಾಗಿದ್ದು, ಏಳು ದಿನಗಳ ಒಳಗಾಗಿ ಮೂರು ಪಟ್ಟು ಹಣ ಮರಳಿ ಕೊಡುವ ಷರತ್ತಿನೊಂದಿಗೆ ಅ.21ರಂದು 20 ಸಾವಿರ ಹಣ ನೀಡಿದ್ದರು. ನವನಗರದ ನಗರಸಭೆ ಉದ್ಯಾನವನದಲ್ಲಿ ಹಣ ಪಡೆದಿದ್ದು, ಈ ವೇಳೆ ಇನ್ನೂ ಹೆಚ್ಚಿನ ಹಣ ಕೊಟ್ಟರೆ ಮೂರು ಪಟ್ಟು ಮಾಡಿ ಕೊಡುವುದಾಗಿ ಅವರು ಹೇಳಿದ್ದರು. ಹೀಗಾಗಿ ನನಗೆ ಅನುಮಾನ ಬಂದು ದೂರು ನೀಡಿದ್ದಾಗಿ ಅಶೋಕ ನಾಯಕ ನವನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಡಿವೈಎಸ್ಪಿ ಎಸ್‌.ಬಿ. ಗಿರೀಶ ಮಾರ್ಗದರ್ಶನದಲ್ಲಿ ಡಿಸಿಆರ್‌ ಸಿಪಿಐ ಸಂಜೀವ ಕಾಂಬಳೆ, ನಗರ ಪೊಲೀಸ್‌ ಠಾಣೆಯ ಸಿಪಿಐ ಶ್ರೀಶೈಲ ಗಾಬಿ ಅವರು ಶನಿವಾರ ನಗರದ ಖಾಸಗಿ ಹೊಟೇಲ್‌ ಮೇಲೆ ದಾಳಿ ನಡೆಸಿದ್ದು, ಈ ವೇಳೆ 12 ಜನರು ಸಿಕ್ಕಿ ಬಿದ್ದಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ “ಉದಯವಾಣಿ’ಗೆ ತಿಳಿಸಿದ್ದಾರೆ.

667 ಕೋಟಿಗೆ ಡೀಲ್‌?
ಆರ್‌ಬಿಐ ನೌಕರ, ಪೊಲೀಸ್‌ ಇಲಾಖೆಯ ಸಿಬಂದಿ ಹಾಗೂ ಗೋವಾ, ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರದ ಹಲವು ಪ್ರಭಾವಿಗಳು ಒಳಗೊಂಡ ಈ ತಂಡ ಹಳೆಯ ನೋಟು ಬದಲು, ಹಣ ದ್ವಿಗುಣ ಮಾಡುವ ಈ ಡೀಲ್‌ ಒಟ್ಟು 667 ಕೋಟಿಯದ್ದು ಎನ್ನಲಾಗಿದೆ. ಆದರೆ ಪೊಲೀಸ್‌ ಇಲಾಖೆ ಮಾತ್ರ ಕೇವಲ 40 ಸಾವಿರದಷ್ಟು ಹಣ ಸಿಕ್ಕಿದೆ. 12 ಜನರನ್ನು ಬಂಧಿಸಿದ್ದು, ಅವರು ಬಳಸುತ್ತಿದ್ದ ವಾಹನಗಳು ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ವಾಹನಗಳಿಗೆ ಬಳಸುವ ಸಿಕ್ಟರ್‌ ಸಿಕ್ಕಿವೆ, ವಾಹನ ಸಿಕ್ಕಿಲ್ಲ ಎಂಬುದು ಅನುಮಾನ ಬಲಗೊಳ್ಳುವಂತೆ ಮಾಡಿದೆ.

Advertisement

ಆರ್‌ಬಿಐ ನೌಕರ ಸಂಪರ್ಕ?
ಮುಂಬಯಿ, ಉತ್ತರ ಪ್ರದೇಶ, ಗೋವಾ, ಕರ್ನಾಟಕ (ಎಸ್ಪಿ ಕಚೇರಿ ಸಿಬಂದಿ ಸಹಿತ) ಸೇರಿ ಒಟ್ಟು 15 ಜನರ ತಂಡ ಇದಾಗಿದ್ದು, ಇದರಲ್ಲಿ ಆರ್‌ಬಿಐ ನೌಕರನ ಸಂಪರ್ಕವೂ ಈ ತಂಡಕ್ಕಿದೆ ಎನ್ನಲಾಗಿದೆ. ಈ ತಂಡವನ್ನು ಸಂಪರ್ಕಿಸಿ ಆರ್‌ಬಿಐ ನೌಕರನ ನೆರವಿನೊಂದಿಗೆ ಹಳೆಯ ನೋಟು ಬದಲಾಯಿಸಿಕೊಡುವುದನ್ನು ಖಚಿತಪಡಿಸಿಕೊಳ್ಳಲೆಂದೇ ಕೆಲ ದಿನಗಳ ಹಿಂದೆ ಎಸ್ಪಿ ಕಚೇರಿಯ ಸಿಬಂದಿ ರಜೆ ಹಾಕಿ, ಮುಂಬಯಿಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಆ ಸಿಬಂದಿ ಮುಂಬಯಿಗೆ ಹೋಗಿ ಬಂದ ಬಳಿಕವೇ ಈ ತಂಡ ಬಾಗಲಕೋಟೆಗೆ ಬಂದು ಅದರಲ್ಲೂ ಜಿಲ್ಲಾಡಳಿತ ಭವನದ ಹಿಂದೆಯೇ ಇರುವ ಪ್ರಮುಖ ಹೊಟೇಲ್‌ವೊಂದರಲ್ಲಿ ನಾಲ್ಕು ದಿನಗಳಿಂದ ತಂಗಿದ್ದರು. ಅಲ್ಲಿಂದಲೇ ಹಣ ದ್ವಿಗುಣಗೊಳಿಸುವ, ಹಳೆಯ ನೋಟು ಬದಲಾಯಿಸಿ ಕೊಡುವ ವ್ಯವಹಾರ ನಡೆದಿತ್ತು ಎನ್ನಲಾಗಿದೆ.

ಪರಾರಿಗೆ ಯತ್ನಿಸಿದ ತಂಡ
ಖಚಿತ ಮಾಹಿತಿ ಮೇರೆಗೆ ಇತ್ತೀಚೆಗೆ ಜಿಲ್ಲೆಗೆ ಬಂದಿರುವ ಹಿರಿಯ ಪೊಲೀಸ್‌ ಅಧಿಕಾರಿ, ಕೆಲವೇ ಕೆಲ ಸಿಬಂದಿ ಜತೆಗೆ ಡಿಸಿ ಕಚೇರಿ ಹಿಂದೆ ಇದ್ದ ಹೊಟೇಲ್‌ಗೆ ದಾಳಿ ನಡೆಸಿದ್ದರು. 20 ಲಕ್ಷ ಹಳೆಯ ನೋಟುಗಳು, 22 ಲಕ್ಷ ಹೊಸ ನೋಟುಗಳು ಅಲ್ಲಿದ್ದವು. ಮುಖ್ಯವಾಗಿ ನೋಟುಗಳನ್ನು ಎಣಿಸುತ್ತಿದ್ದ ವ್ಯಕ್ತಿ ಪೊಲೀಸ್‌ ಇಲಾಖೆಗೆ ಸೇರಿದ್ದ. ದಾಳಿಯಿಂದ ಬೆದರಿದ ತಂಡ ಅಲ್ಲಿಂದ ಪರಾರಿಯಾಗಲು ಯತ್ನಿಸಿತ್ತು. ವಾಹನ ಹತ್ತಿ ಪರಾರಿಯಾಗುತ್ತಿದ್ದ ವೇಳೆ ಸೀಮಿಕೇರಿ ಬೈಪಾಸ್‌ ಬಳಿ ಅವರನ್ನು ಬಂಧಿಸಲಾಗಿದೆ.

ಪೊಲೀಸರೇ ಭಾಗಿಯಾದ ಮೂರನೇ ಪ್ರಕರಣವಿದು
ಜಿಲ್ಲೆಯ ಪೊಲೀಸರೇ ಇಂಥ ವ್ಯವ ಹಾರದಲ್ಲಿ ಭಾಗಿಯಾಗುತ್ತಿರುವುದು ಇದು 3ನೇ ಪ್ರಕರಣ. ಈ ಹಿಂದೆ ಸಚಿವರೊಬ್ಬರ ರಾಸಲೀಲೆ ಪ್ರಕರಣದಲ್ಲಿ ಇದೇ ಎಸ್ಪಿ ಕಚೇರಿಯ ಸಶಸ್ತ್ರ ಮೀಸಲು ಪಡೆ ಸಿಬಂದಿ ಭಾಗಿಯಾಗಿದ್ದ. 2016ರಲ್ಲಿ ಹಳೆಯ ನೋಟು ನಿಷೇಧ ಹಿನ್ನೆಲೆಯಲ್ಲಿ 20 ಲಕ್ಷ ಹಳೆಯ ನೋಟು ಬದಲಿಸುವಲ್ಲಿ 7 ಮಂದಿ ಪೊಲೀಸ್‌ ಪೇದೆಗಳು ಭಾಗಿಯಾಗಿ ಬಳಿಕ ಸೇವೆಯಿಂದ ಅಮಾನತುಗೊಂಡಿದ್ದರು. ಈಗ ಎಸ್ಪಿ ಕಚೇರಿಯ ಮತ್ತೂಬ್ಬ ಸಿಬಂದಿ ಹೆಸರು 667 ಕೋಟಿ ಹಣದ ವ್ಯವಹಾರದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.

ನಮ್ಮ ಕಚೇರಿಯ ಮಿನಿಸ್ಟರಿ ವಿಭಾಗದ ಸಿಬಂದಿ ದುರಾಸೆಗೆ ಹಣ ದ್ವಿಗುಣ ಮಾಡಿಕೊಳ್ಳಲು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ನಮ್ಮ ಕಚೇರಿ ಸಿಬಂದಿಯೇ ಪ್ರಮುಖ ಆರೋಪಿ ಎನ್ನುವ ಮಾಹಿತಿ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಸಿ.ಬಿ. ರಿಷ್ಯಂತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದಾಗ ದಾಳಿ ಮಾಡಿದ ಅಧಿಕಾರಿಗಳು
4 ದಿನಗಳಿಂದ ಬೀಡು ಬಿಟ್ಟು ವ್ಯವಹಾರ ನಡೆಸುತ್ತಿದ್ದ ಅಂತಾರಾಜ್ಯ ಖದೀಮರು
ಆರ್‌ಬಿಐ ನೌಕರ ಸಂಪರ್ಕದಿಂದ ನಡೆಯುತ್ತಿತ್ತು ದಂಧೆ
100ಕ್ಕೆ 30 ರೂ. ಕಮಿಷನ್‌, ಪೊಲೀಸ್‌ ಸಿಬಂದಿಯೇ ಎಣಿಸುತ್ತಿದ್ದ ನೋಟು!

Advertisement

Udayavani is now on Telegram. Click here to join our channel and stay updated with the latest news.

Next