ಬೀದರ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾ ಲಯದ ಆಂಗ್ಲ ವಿಭಾಗದ ಮುಖ್ಯಸ್ಥ ಡಾ| ಕಣ್ಣನ್ ಹೇಳಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಪಠ್ಯಕ್ರಮದಲ್ಲಿ ಬದಲಾವಣೆಗಳು ಆಗಿವೆ. ಈ ನೀತಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿ ಆಂಗ್ಲ ವಿಭಾಗದ ಮುಖ್ಯಸ್ಥ ಡಾ| ರಾಬರ್ಟ್ ಜೋಸ್ ಮಾತನಾಡಿ, ಆಂಗ್ಲ ವಿಷಯದ ಬಗ್ಗೆ ಅನಗತ್ಯ ಭಯ ಬೇಡ. ಆಂಗ್ಲ ಭಾಷೆ ಬಹಳ ಸುಲಭವಾಗಿದೆ. ವಿದ್ಯಾರ್ಥಿಗಳು ಆಂಗ್ಲ ಭಾಷೆ ಮೂಲಕ ಸಂವಹನಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ರಚಿಸಿರುವ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ| ವಿದ್ಯಾ ಪಾಟೀಲ ಅವರ “ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಪ್ರಭಾರ ಪ್ರಾಚಾರ್ಯ ಶ್ರೀನಿವಾಸ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಾ| ವಿದ್ಯಾ ಪಾಟೀಲ, ಸಹ ಪ್ರಾಧ್ಯಾಪಕರಾದ ಶಂಕರ ಗನಗೊಂಡ, ಸಂಜೀವ ಅಪ್ಪೆ, ಡಾ| ಮನೋಹರ ಉಪಸ್ಥಿತರಿದ್ದರು. ಕಾಲೇಜಿನ ಆಂಗ್ಲ ವಿಭಾಗದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.