Advertisement

BJP Protest; ರೈತರಿಗೆ ಬರೆ ಹಾಕುವ ಸರಕಾರದ ನೀತಿ ನಿರ್ಧಾರ ಬದಲಿಸಲಿ: ಎನ್.ರವಿಕುಮಾರ್

03:12 PM Jun 29, 2024 | Team Udayavani |

ಬೆಂಗಳೂರು: ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ವಿಪರೀತ ಹೊರೆಯಾಗಿದ್ದು, ಏರಿಸಿದ ದರವನ್ನು ವಾಪಸ್ ಪಡೆಯುವಂತೆ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದರು. ಅಲ್ಲದೆ, ರೈತರಿಗೆ ಬರೆ ಹಾಕುವ ಸರಕಾರದ ನೀತಿ ನಿರ್ಧಾರಗಳನ್ನು ಬದಲಿಸಬೇಕು ಎಂದು ಕೋರಿದರು.

Advertisement

ಹಾಲಿನ ದರ ಏರಿಕೆ ಮಾಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಇಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಕಿಸಾನ್ ಸಮ್ಮಾನ್ ಮೊತ್ತವನ್ನು ಮತ್ತೆ ರೈತರ ಖಾತೆಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದರು. ಕಳೆದ 8 ತಿಂಗಳಿಂದ 957 ಕೋಟಿ ರೂ. ಹಾಲು ಉತ್ಪಾದಕರಿಗೆ ಕೊಡಬೇಕಾದ ಮೊತ್ತ ಬಾಕಿ ಉಳಿದಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಿ ರೈತರ ನೆರವಿಗೆ ಬರುವಂತೆ ಅವರು ಸರಕಾರಕ್ಕೆ ಆಗ್ರಹಿಸಿದರು.

ಟ್ರಾನ್ಸ್ ಫಾರ್ಮರ್ ಗಳು ರೂ. 40 ಸಾವಿರಕ್ಕೆ ಸಿಗುತ್ತಿದ್ದವು. ಈಗ 2 ಲಕ್ಷಕ್ಕೆ ಏರಿಸಿದ್ದಾರೆ. ಅದನ್ನು 40 ಸಾವಿರಕ್ಕೆ ಸಿಗುವಂತೆ ಮಾಡಬೇಕು. ಬಿತ್ತನೆ ಬೀಜ, ಗೊಬ್ಬರದ ದರ ಗಗನಕ್ಕೆ ಏರಿದ್ದು, ಹಿಂದಿನ ದರದಲ್ಲೇ ಅವು ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನವಾಗಿ 6 ಸಾವಿರದಿಂದ 18 ಸಾವಿರ ರೂ. ವರೆಗೆ ಕೊಡುತ್ತಿದ್ದರು. ಅದನ್ನು ಕೂಡಲೇ ಪುನರಾರಂಭಿಸುವಂತೆ ಒತ್ತಾಯಿಸಿದರು.

ಹೆಚ್ಚು ಹಾಲು ಕೊಟ್ಟಿದ್ದೇವೆ; ಹೆಚ್ಚು ಹಣ ಕೊಡಿ ಎನ್ನಲು ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು. ಇದು ಜನರಿಗೆ ಮಾಡುವ ಮೋಸ ಎಂದು ಆಕ್ಷೇಪಿಸಿದರು.

ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳವನ್ನು ಖಂಡಿಸಿದ ಅವರು, ಮಹಾರಾಷ್ಟ್ರದಲ್ಲಿ ನೋಡಿ; 2 ರೂ. ಕಡಿಮೆ ಆಗಿದೆ ಎಂದು ತಿಳಿಸಿದರು. ನಮ್ಮ ಸರಕಾರ ಇದ್ದಾಗ ಒಂದು ರೂ. ಹೆಚ್ಚಿಸಿದಾಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಸ್ಕೂಟರ್ ಶವಯಾತ್ರೆ ಮಾಡಿದ್ದರು. ಹಾಗಿದ್ದರೆ ನಾವು ಯಾವ ಯಾತ್ರೆ ಮಾಡಬೇಕೆಂದು ಹೇಳಿ ಎಂದು ಸವಾಲೆಸೆದರು.

Advertisement

ಒಂದು ರೂ. ಹೆಚ್ಚಿಸಿದಾಗ ತರಕಾರಿ, ದವಸಧಾನ್ಯಗಳ ಬೆಲೆ ಹೆಚ್ಚಾಗಲಿದೆ. ಜನರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದೂ ಸಿದ್ದರಾಮಯ್ಯನವರು ತಿಳಿಸಿದ್ದರು. ಈಗ ಅವೆಲ್ಲವೂ ಕಡಿಮೆ ಆಗಲಿದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ರಾಜ್ಯ ಸರಕಾರದಿಂದ ಮೊಂಡುವಾದ- ನಡಹಳ್ಳಿ ಆಕ್ಷೇಪ

ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಮಾತನಾಡಿ, ಗ್ರಾಹಕರು ಒಂದು ಲೀಟರ್‍ಗೆ 50 ಮಿಲಿಲೀಟರ್ ಹೆಚ್ಚು ಕೊಡಲು ಕೇಳಿದ್ದಾರಾ ಎಂದು ಸರಕಾರವನ್ನು ಪ್ರಶ್ನಿಸಿದರು.

ಸರಕಾರವು ತನ್ನ ಹಾಲಿನ ದರ ಏರಿಕೆಯ ನಿರ್ಧಾರವನ್ನು ಸಮರ್ಥಿಸಲು ಮೊಂಡುವಾದವನ್ನು ಮುಂದಿಡುತ್ತಿದೆ ಎಂದು ಆಕ್ಷೇಪಿಸಿದರು. ಹಿಂದೆ ಮಾನ್ಯ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಸರಕಾರ ಇದ್ದಾಗ ರೈತರಿಗೆ ಹಾಲಿಗೆ 2 ರೂ.ಗಳಿಂದ 5 ರೂ. ಪ್ರೋತ್ಸಾಹಧನ ಕೊಡಲಾಗುತ್ತಿತ್ತು. ಈ ಸರಕಾರ ಪ್ರೋತ್ಸಾಹಧನವನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ಟೀಕಿಸಿದರು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಪಕ್ಷದ ಪದಾಧಿಕಾರಿಗಳು, ಮೋರ್ಚಾದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next