ಕೊಪ್ಪಳ: ಪರಿಶಿಷ್ಟ ಸಮುದಾಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದರೆ ಬದಲಾವಣೆ ಸಾಧ್ಯ ಎಂದು ದಸಂಸ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಭೀಮವಾದ)ಯಿಂದ ನಡೆದ ಬಹುಜನರ ಸ್ವಾಭಿಮಾನಿ ಸಂಕಲ್ಪ ದಿನಾಚರಣೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನೆಯಲ್ಲಿ ಡಾ| ಅಂಬೇಡ್ಕರ್ ಫೋಟೋ ಇದ್ದರಷ್ಟೇ ಭೀಮ ಅಭಿಮಾನಿಯಲ್ಲ, ಆತನ ಪಕ್ಕದಲ್ಲಿ ಹುಲಿಗೆವ್ವನ ಫೋಟೋ ಹಾಕುವುದನ್ನು ಬಿಡಬೇಕು. ಯಾವ ದೇವರ ಕಾರಣಕ್ಕೆ ನಮ್ಮನ್ನು ಒಂದು ವರ್ಗ ಈಗಲೂ ಆಳುತ್ತಿದೆ. ಅದನ್ನು ಅಳಿಸಬೇಕೆಂದರೆ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ. ಉತ್ತರ ಕರ್ನಾಟಕದಲ್ಲಿ ಇರುವ ದೇವದಾಸಿ ಪದ್ಧತಿ ಸಂಪೂರ್ಣ ನಾಶವಾಗಬೇಕಾದರೆ ಶಿಕ್ಷಣ ಮತ್ತು ಸಂಘಟನೆ ಅವಶ್ಯ. ಇನ್ನು ಪರಿಶಿಷ್ಟ ಜಾತಿಯಲ್ಲಿ ಬೇಡ ಜಂಗಮ ಜಾತಿಗೆ ಪ್ರಮಾಣ ಪತ್ರ ಕೊಡುವ ಮೊದಲು ಗ್ರಾಮ ಸಭೆ ಕರೆಯಬೇಕು. ಯಾವ ವ್ಯಕ್ತಿ ಸತ್ತ ದನ, ಹಂದಿ ತಿನ್ನುತ್ತಾರೆ, ಸೂರ್ಯ ಚಂದ್ರರ ಪೂಜೆ ಮಾಡುತ್ತಾರೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಅಂತಹ ಸಮಾಜಕ್ಕೆ ಪ್ರಮಾಣ ಪತ್ರ ಕೊಡಬೇಕಿದೆ. ತಪ್ಪಿದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೋರಾಟ ಮಾಡಬೇಕು ಎಂದರು.
ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಯಾರೋ ಹೇಳಿದಾಕ್ಷಣ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದೆಲ್ಲವೂ ಕೇವಲ ಮೋಸ ಮಾಡುವ ಹುನ್ನಾರವಷ್ಟೇ. ದೇಶದ ಸಂವಿಧಾನಕ್ಕೆ ಸರ್ವರನ್ನೂ ರಕ್ಷಿಸುವ ಗುಣದ ಜೊತೆಗೆ ತನ್ನ ರಕ್ಷಣೆಯ ಸಾಮರ್ಥ್ಯವಿದೆ. ನಾವು ಎಲ್ಲರೂ ಒಗ್ಗಟ್ಟಾಗಿ ಒಂದು ದೇಶವಾಗಿ ಬಾಳಬೇಕಿದೆ. ಜಗತ್ತಿನಲ್ಲಿ ಕೇವಲ ಮನುಷ್ಯ ಜಾತಿ ಮಾತ್ರವಿದ್ದು, ಉದ್ಯೋಗದ ಆಧಾರದಲ್ಲಿ ನಮ್ಮನ್ನು ಗುರುತಿಸಲಾಗುತ್ತದೇ ಹೊರತು ಅದೇ ದೊಡ್ಡ ಸಂಗತಿಯಾಗಬಾರದು ಎಂದರು.
ರಾಜ್ಯ ಸಂಘಟನಾ ಸಂಚಾಲಕ ಗ್ಯಾನಪ್ಪ ಬಡಿಗೇರ್ ಮಾತನಾಡಿ, ಸಂವಿಧಾನದ ಮೂಲ ಅರ್ಥ ಅರಿಯಬೇಕಿದೆ. ಭಾರತದ ಸರ್ವಧರ್ಮದ ರಕ್ಷಣೆ ಮಾಡುತ್ತಿರುವುದು ಬಾಬಾ ಸಾಹೇಬ ಅವರ ಶ್ರೇಷ್ಠ ಲಿಖೀತ ಸಂವಿಧಾನ. ಇನ್ಮುಂದೆ ಸಮಾಜದ ಜಾಗೃತಿಗೆ ದಲಿತ ಸಂಘರ್ಷ ಸಮಿತಿಯಿಂದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.
ಸಿಂಡಿಕೇಟ್ ಮಾಜಿ ಸದಸ್ಯೆ ಸಾವಿತ್ರಿ ಮುಜುಮದಾರ್ ಮಾತನಾಡಿ, ಮಹಿಳೆಯರಿಗೆ 12ನೇ ಶತಮಾನದಲ್ಲಿ ಸಾರ್ವತ್ರಿಕ ಸ್ವಾತಂತ್ರ್ಯ ದೊರೆತಿದೆ. ಮುಂದೆ ಡಾ| ಅಂಬೇಡ್ಕರ್ ಅವರು, ಸ್ವಾತಂತ್ರ್ಯ ನಂತರವೂ ಅದನ್ನು ಉಳಿಸಿ, ಮಹಿಳಾ ಸಂರಕ್ಷಣೆಗೆ ಶ್ರಮಿಸಿದ್ದಾರೆ. ನಾನು ಸಹ ಅವರನ್ನು ಪೂಜಿಸುತ್ತೇನೆ. ಮಹಿಳೆಯ ಸಲುವಾಗಿ ಸಾಕಷ್ಟು ಕಾನೂನುಗಳನ್ನು ಮಾಡಿದ ಮಹಾನ್ ಮೇಧಾವಿ ಡಾ| ಅಂಬೇಡ್ಕರ್ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಸಂಘಟಕ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಯಲ್ಲಪ್ಪ ಹಳೇಮನಿ ಮಾತನಾಡಿದರು. ರಾಜ್ಯ ಸಮಿತಿಯ ಪಿ. ಸಿದ್ದರಾಜು, ಎಂ.ಸಿ. ನಾರಾಯಣ, ಸಂಜೀವ್ ಕಾಂಬ್ಳೆ, ನರಸಿಂಹಲು, ಶ್ಯಾಮರಾವ್ ಕಾಂಬ್ಳೆ, ಭೀಮರಾವ್ ಸಿಂದಿಗೇರಿ, ಶರಣಪ್ಪ ಛಲವಾದಿ, ರವಿಚಂದ್ರ ಬಡಿಗೇರ, ದುರುಗೇಶ ನರೇಗಲ್, ಮಂಜುಳ ಸುರಪುರ, ನಾಗರಾಜ ನರೇಗಲ್, ರಮೇಶ ಬೂದಗುಂಪಾ, ಮರಿಸ್ವಾಮಿ ಕಾತರಕಿ, ಪ್ರಕಾಶ ವೀರಾಪುರ, ರಮೇಶ ದೊಡ್ಡಮನಿ, ಗಣೇಶ ಹೊರತಟ್ನಾಳ, ನಾಗರಾಜ ಹುರಕಡ್ಲಿ, ಮಹಾಂತೇಶ ಛಲವಾದಿ, ಭೀಮ ಆರ್ಮಿಯ ರಾಘು, ರೇಣುಕಮ್ಮ ಆವೂರ್, ಪ್ರಿಯದರ್ಶಿನಿ ಕಲಬುರಗಿ, ಪ್ರಶಾಂತ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.