ಬೆಳ್ತಂಗಡಿ: ಭಾರತ ದೇಶದ ಬ್ಯಾಂಕಿಗ್ ಮತ್ತು ಇತರ ಸಂಸ್ಥೆಗಳ ಲಾಭದ ಶೇ. 0.5 ರಷ್ಟನ್ನು ಸಮಾಜಮುಖಿ ಕೆಲಸಗಳಿಗೆ ಮೀಸಲಿಡಲಾಗಿದೆ. ಕೆನರಾ ಬ್ಯಾಂಕ್ ಸೆಲ್ಕೊ ಜತೆ ಸೇರಿ ವಿದ್ಯಾರ್ಥಿಗಳ ಬಾಳಿಗೆ ಬೆಳಕು ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಬದಲಾವಣೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಎಸ್‌ಡಿಎಂ ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಮತ್ತು ಸೆಲ್ಕೊ ಸೋಲಾರ್ ಲೈಟ್ ಸಹಯೋಗದೊಂದಿಗೆ ಜರಗಿದ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯ ಅತಿಥಿ ಕೆನರಾ ಬ್ಯಾಂಕ್, ಪುತ್ತೂರಿನ ಡಿವಿಜನಲ್ ಮ್ಯಾನೇಜರ್ ಸರ್ವೇಶ್ ಮಾತನಾಡಿ, ಸಮಾಜಮುಖಿ ನೆಲೆಯಲ್ಲಿ ಕೆನರಾ ಬ್ಯಾಂಕ್ ಮಾಡುವ ಸಹಾಯದ ಹಿನ್ನೆಲೆಯಲ್ಲಿ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಸೋಲಾರ್ ಘಟಕಕ್ಕಾಗಿ ಮೂರು ಲಕ್ಷ ರೂ. ಸಹಾಯಧನ ನೀಡಲಾಗಿದೆ. ಕೌಶಲವಿರುವವರಿಗೆ ಉದ್ಯೋಗ ಅವಕಾಶಗಳಿದ್ದು, ಅದಕ್ಕೆ ಬೇಕಾದ ಹಣಕಾಸಿನ ಸಹಾಯವನ್ನು ಕೆನರಾ ಬ್ಯಾಂಕ್ ಮಾಡುತ್ತದೆ ಎಂದರು.
ನಮ್ಮ ಸಂಸ್ಥೆಯ ಬೆಳವಣಿಗೆಗೆ ಸೆಲ್ಕೊದಿಂದ ಇದೊಂದು ವಿಶೇಷ ಕೊಡುಗೆಯಾಗಿದೆ. ಸೋಲಾರ್ ವಿದ್ಯುತ್ ಘಟಕ ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಾಮುಖ್ಯತೆ ಪಡೆಯುತ್ತಿದೆ. ಕೊರತೆಗಳ ಬಗ್ಗೆ ಯೋಚನೆ ಮಾಡಿದರೆ, ಸೌಲಭ್ಯಗಳನ್ನು ಬಳಿಸಿಕೊಳ್ಳುವ ದಾರಿ ಸಿಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನೀಡುವ ದೃಷ್ಟಿಯಿಂದ, ಅಳಿದು ಹೋಗುವ ಶಕ್ತಿಗಳ ಜಾಗದಲ್ಲಿ ಸೋಲಾರ್ ಘಟಕದ ಅನಿವಾರ್ಯತೆಯಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಎಸ್. ಸತೀಶ್ಚಂದ್ರ ಹೇಳಿದರು.
ಉಜಿರೆ ಕೆನರಾ ಬ್ಯಾಂಕ್ ಘಟಕದ ಪ್ರಭಂದಕಿ ರಾಜಶ್ರೀ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಪ್ರಕಾಶ್ ಕಾಮತ್ ಸ್ವಾಗತಿಸಿದರು. ಮೇಘನಾ ವಂದಿಸಿದರು.
ಸೋಲಾರ್ ಬಳಸಿ
ಸೆಲ್ಕೊ ಸೋಲಾರ್ ಲೈಟ್ ಮಣಿಪಾಲದ ಡಿ.ಜಿ.ಎಂ. ಗುರುಪ್ರಕಾಶ್ ಶೆಟ್ಟಿ ಮಾತನಾಡಿ, ಸೌರಶಕ್ತಿಯ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ವರ್ಷದ ಹಿಂದೆ ಇದೇ ಕಾಲೇಜಿನಲ್ಲಿ ಮಾಡಲಾಗಿತ್ತು. ಪ್ರಾಂಶುಪಾಲರು ಮತ್ತು ಕಾರ್ಯದರ್ಶಿಯವರ ಸಹಕಾರದಿಂದ ಕಾಲೇಜಿನಲ್ಲಿ ಸೋಲಾರ್ ಘಟಕ ಸ್ಥಾಪನೆಯಾಗಿದೆ. ಹವಾಮಾನ ವೈಪರೀತ್ಯಗಳಿಂದ ಪಾರಾಗಲು ಸಾಂಪ್ರದಾಯಿಕ ಶೈಲಿಯ ಶಕ್ತಿಗಳ ಕಡೆ ಗಮನ ನೀಡಬೇಕಾಗಿದ್ದು, ಸೌರಶಕ್ತಿ ಅದಕ್ಕೆ ಉತ್ತಮ ಉದಾಹರಣೆ. ಸೋಲಾರ್ ಬಳಸುವುದರಿಂದ ದೇಶ ಮತ್ತು ಭೂಮಿ ಎರಡಕ್ಕೂ ಕೊಡುಗೆ ನೀಡಿದಂತೆ ಎಂದರು.