Advertisement

ಚಂದ್ರಯಾನ ಸಾಹಸ; 60 ವರ್ಷಗಳಲ್ಲಿ ಒಟ್ಟು ಎಷ್ಟು ಚಂದ್ರಯಾನ ಯಶಸ್ವಿಯಾಗಿವೆ ಗೊತ್ತಾ?

10:33 AM Sep 08, 2019 | Nagendra Trasi |

ವಾಷಿಂಗ್ಟನ್: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ನೌಕೆ ಇಳಿಸಬೇಕೆಂಬ ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್ ಗೆ ಹಿನ್ನಡೆಯಾದ ಬೆನ್ನಲ್ಲೇ ಕಳೆದ 60ವರ್ಷಗಳಲ್ಲಿ ನಡೆಸಿದ ಚಂದ್ರಯಾನ ಮಿಷನ್ ನಲ್ಲಿ ಶೇ.40ರಷ್ಟು ವಿಫಲವಾಗಿದ್ದು, ಶೇ.60ರಷ್ಟು ಗುರಿ ತಲುಪಿರುವುದಾಗಿ ಅಮೆರಿಕದ ಬಾಹ್ಯಾಕಾಶ ಏಜೆನ್ಸಿ ನಾಸಾ ವಿಶ್ಲೇಷಿಸಿದೆ.

Advertisement

ಕಳೆದ 60 ವರ್ಷಗಳಲ್ಲಿ ಬರೋಬ್ಬರಿ 109 ಚಂದ್ರಯಾನ ಮಿಷನ್ ಕೈಗೊಳ್ಳಲಾಗಿತ್ತು. ಆದರೆ ಇದರಲ್ಲಿ 61 ಚಂದ್ರಯಾನ ಯಶಸ್ವಿಯಾಗಿದ್ದರೆ, 48 ಚಂದ್ರಯಾನ ಯೋಜನೆ ವಿಫಲಗೊಂಡಿರುವುದಾಗಿ “ನಾಸಾದ ಮೂನ್ ಫ್ಯಾಕ್ಟ್ ಶೀಟ್” ಆಧಾರದಲ್ಲಿ ವಿವರಣೆ ನೀಡಿದೆ.

1958ರಿಂದ 2019ರವರೆಗೆ ಚಂದ್ರಯಾನ ಸಾಹಸ:

1958ರಿಂದ 2019ರವರೆಗೆ ಭಾರತ ಸೇರಿದಂತೆ ಅಮೆರಿಕ, ಯುಎಸ್ ಎಸ್ ಆರ್(ಇಂದಿನ ರಷ್ಯಾ), ಜಪಾನ್, ಯುರೋಪಿಯನ್ ಒಕ್ಕೂಟ, ಚೀನಾ, ಇಸ್ರೇಲ್ ದೇಶ ವಿವಿಧ ಚಂದ್ರಯಾನ ಮಿಷನ್ ಅನ್ನು ಕೈಗೊಂಡಿತ್ತು.

1958ರ ಆಗಸ್ಟ್ 17ರಂದು ವಿಶ್ವದ ದೊಡ್ಡಣ್ಣ ಅಮೆರಿಕದ ಮೊತ್ತ ಮೊದಲ ಚಂದ್ರಯಾನ ಯೋಜನೆ ಕೈಗೊಂಡಿತ್ತು. ಚಂದ್ರಯಾನದ ರಾಕೆಟ್ ಪಯೋನಿಯರ್ “0” ಉಡಾವಣೆಗೊಂಡಿದ್ದರೂ ಅದು ಗುರಿ ತಲುಪುವಲ್ಲಿ ಯಶಸ್ವಿಯಾಗಿರಲಿಲ್ಲವಾಗಿತ್ತು.

Advertisement

1959ರ ಜನವರಿ 4ರಂದು ಅಂದಿನ ಯುಎಸ್ ಎಸ್ ಆರ್ ನ ಚಂದ್ರಯಾನ ಲೂನಾ ಮಿಷನ್ ಯಶಸ್ವಿಯಾಗಿತ್ತು. ಆದರೆ ಯುಎಸ್ ಎಸ್ ಆರ್ 6ನೇ ಬಾರಿ ಪ್ರಯತ್ನದಲ್ಲಿ ತನ್ನ ಗುರಿ ತಲುಪಿತ್ತು ಎಂದು ನಾಸಾ ವಿವರಿಸಿದೆ.

1958ರ ಆಗಸ್ಟ್ ನಿಂದ 1959ರ ನವೆಂಬರ್ ನಡುವೆ ಅಮೆರಿಕ ಮತ್ತು ಯುಎಸ್ ಎಸ್ ಆರ್ 14 ಚಂದ್ರಯಾನ ಮಿಷನ್ ಕೈಗೊಂಡಿತ್ತು. ಇದರಲ್ಲಿ ಯುಎಸ್ ಎಸ್ ಆರ್ ನ ಲೂನಾ 1, ಲೂನಾ 2 ಮತ್ತು ಲೂನಾ 3 ಮಾತ್ರ ಯಶಸ್ವಿಯಾಗಿತ್ತು.

1964ರಲ್ಲಿ ಅಮೆರಿಕ ಉಡಾವಣೆಗೊಳಿಸಿದ್ದ ರೇಂಜರ್ 7 ಮಿಷನ್ ಯಶಸ್ವಿಯಾಗುವುದರ ಜತೆಗೆ ಚಂದ್ರನ ಸಮೀಪದ ಫೋಟೋಗಳನ್ನು ರವಾನಿಸಿತ್ತು. 1966ರಲ್ಲಿ ಯುಎಸ್ ಎಸ್ ಆರ್ ನಿಂದ ಉಡ್ಡಯನಗೊಂಡಿದ್ದ ಲೂನಾ 9 ಚಂದ್ರಯಾನ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಮೊದಲ ಫೋಟೋಗಳನ್ನು ಕಳುಹಿಸಿತ್ತು.

ಐದು ತಿಂಗಳ ಬಳಿಕ 1966ರ ಮೇನಲ್ಲಿ ಅಮೆರಿಕ ಸರ್ವೈಯರ್-1 ಚಂದ್ರಯಾನ ಯಶಸ್ವಿಯಾಗಿತ್ತು.  ಅಪೋಲೋ 11 ಚಂದ್ರಯಾನ ಮಿಷನ್ ಇತಿಹಾಸವನ್ನೇ ಸೃಷ್ಟಿಸಿತ್ತು. ಇದು ಮೊತ್ತ ಮೊದಲ ಮಾನವ ಸಹಿತ ಚಂದ್ರಯಾನ ಮಿಷನ್ ಆಗಿತ್ತು. ನೀಲ್ ಆರ್ಮ್ ಸ್ಟ್ರಾಂಗ್ ಸೇರಿದಂತೆ ಮೂವರನ್ನೊಳಗೊಂಡ ಮಿಷನ್ ಇದಾಗಿತ್ತು.

1958ರಿಂದ 1979ರವರೆಗೆ ಅಮೆರಿಕ ಮತ್ತು ಯುಎಸ್ ಎಸ್ ಆರ್ ಮಾತ್ರ ಚಂದ್ರಯಾನ ಮಿಷನ್ಸ್ ಕೈಗೊಂಡಿತ್ತು. ಈ 21 ವರ್ಷಗಳ ಅವಧಿಯಲ್ಲಿ ಅಮೆರಿಕ ಮತ್ತು ಯುಎಸ್ ಎಸ್ ಆರ್ ಬರೋಬ್ಬರಿ 90 ಚಂದ್ರಯಾನ ಯೋಜನೆ ಕೈಗೊಂಡಿದ್ದವು. 1980ರಿಂದ 1989ರವರೆಗೆ ಯಾವುದೇ ಚಂದ್ರಯಾನ ಯೋಜನೆ ಯಾವುದೇ ದೇಶ ಕೈಗೊಂಡಿರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.

ಬಳಿಕ ಜಪಾನ್, ಯುರೋಪಿಯನ್ ಒಕ್ಕೂಟ, ಚೀನಾ, ಭಾರತ ಮತ್ತು ಇಸ್ರೇಲ್ ಚಂದ್ರಯಾನ ಯೋಜನೆಗೆ ಕೈಹಾಕಿದ್ದವು. 1990ರಲ್ಲಿ ಜಪಾನ್ ಹಿಟೇನ್ ಆರ್ಬಿಟರ್ ಮಿಷನ್ ಉಡ್ಡಯನಗೊಳಿಸಿತ್ತು. ಇದು ಜಪಾನ್ ನ ಮೊದಲು ಚಂದ್ರಯಾನ ಯೋಜನೆಯಾಗಿತ್ತು. 2007ರಲ್ಲಿ ಜಪಾನ್ ಸೆಲೇನೆ ಎಂಬ ಮತ್ತೊಂದು ಆರ್ಬಿಟರ್ ರಾಕೆಟ್ ಉಡ್ಡಯನ ಯಶಸ್ವಿಯಾಗಿತ್ತು.

2000ದಿಂದ 2009ರವರೆಗೆ ಯುರೋಪ್ (ಸ್ಮಾರ್ಟ್ 1), ಜಪಾನ್ (ಸೆಲೇನೆ), ಚೀನಾ(ಚಾಂಗೆ-1), ಇಂಡಿಯಾ (ಚಂದ್ರಯಾನ-1) ಮತ್ತು ಅಮೆರಿಕ ಹೀಗೆ ಒಟ್ಟು ಆರು ಚಂದ್ರಯಾನ ಮಿಷನ್ ಕೈಗೊಂಡಿದ್ದವು.

2009ರಿಂದ 2019ರವರೆಗೆ ಇದರಲ್ಲಿ ಹತ್ತು ಯೋಜನೆಗಳು ಉಡ್ಡಯನಗೊಂಡಿದ್ದವು. ಇದರಲ್ಲಿ ಭಾರತದಿಂದ ಐದು, ಅಮೆರಿಕದಿಂದ ಮೂರು, ಭಾರತ ಒಂದು ಹಾಗೂ ಇಸ್ರೇಲ್ ಒಂದು ಮಿಷನ್ ಕೈಗೊಂಡಿತ್ತು. 1990ರಿಂದ ಅಮೆರಿಕ, ಜಪಾನ್, ಭಾರತ ಹಾಗೂ ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಇಸ್ರೇಲ್ 19 ಚಂದ್ರಯಾನ ಮಿಷನ್ಸ್ ಕೈಗೊಂಡಿದ್ದವು ಎಂದು ನಾಸಾ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next