Advertisement

ಮಹಾಘಟಬಂಧನ್‌ಗೆ ಹೆಜ್ಜೆ

06:00 AM Nov 09, 2018 | Team Udayavani |

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತೊಲಗಿಸಿ ದೇಶ ಹಾಗೂ ಪ್ರಜಾಪ್ರಭುತ್ವ ರಕ್ಷಿಸುವುದೇ ನಮ್ಮ ಗುರಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮಣಿಸಲು ಜಾತ್ಯತೀತ ಶಕ್ತಿಗಳ ಒಟ್ಟುಗೂಡಿಸುವಿಕೆಯ ಮಹಾಘಟಬಂಧನ್‌ ರಚನೆ ಪ್ರಯತ್ನದ ಭಾಗವಾಗಿ ಇಬ್ಬರೂ ನಾಯಕರು ಸಮಾಲೋಚನೆ ನಡೆಸಿದರು. ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಿ ಹೋರಾಟ ನಡೆಸಿ 2019ರ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಸಂಕಲ್ಪದಡಿ ಹೋರಾಟ ನಡೆಸಲಾಗುವುದು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

Advertisement

ಮಾಯಾವತಿ, ಅಖೀಲೇಶ್‌ ಯಾದವ್‌, ಮಮತಾ ಬ್ಯಾನರ್ಜಿ, ಶರದ್‌ಪವಾರ್‌, ಸ್ಟಾಲಿನ್‌, ಫಾರೂಕ್‌ ಅಬ್ದುಲ್ಲಾ ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ. ಬಿಜೆಪಿ ವಿರುದಟಛಿದ ಹೋರಾಟದಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ ಹೊಣೆಗಾರಿಕೆಯೂ
ಹೆಚ್ಚಾಗಿದೆ ಎಂದು ಹೇಳಿದರು. ಇದೇ ವೇಳೆ ಒಕ್ಕೂಟದ ನೇತೃತ್ವ ವಹಿಸುವಂತೆ ಗೌಡರಿಗೆ ಚಂದ್ರಬಾಬು ನಾಯ್ಡು ಮನವಿ ಮಾಡಿದರು.

ದೇವೇಗೌಡರು ಹೇಳಿದ್ದೇನು?: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಜಾತ್ಯತೀತ ಪಕ್ಷಗಳು ಒಟ್ಟುಗೂಡುತ್ತಿವೆ. ಕಾಂಗ್ರೆಸ್‌ ಸೇರಿದಂತೆ ಎಲ್ಲರೂ ಒಂದಾಗಿ ಎನ್‌ಡಿಎ ಸರ್ಕಾರ ತೆಗೆದು ಹಾಕಬೇಕು. ನಾಯ್ಡು ಅವರು ರಾಹುಲ್‌, ಶರದ್‌ ಪವಾರ್‌, ಫಾರೂಕ್‌ ಅಬ್ದುಲ್ಲಾ, ಮಾಯಾವತಿ, ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಒಂದು ಒಳ್ಳೆಯ ಪ್ರಯತ್ನ ಆರಂಭಿಸಿದ್ದು ನಮ್ಮ ಸಹಕಾರವೂ ಇದೆ. 2019ರ ಚುನಾವಣೆಗೆ ಎನ್‌ಡಿಎ ಸರ್ಕಾರ ತೆಗೆ ದುಹಾಕುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದೇವೆ. ಮುಂದಿನ ಕಾರ್ಯತಂತ್ರ ಗಳ ಬಗ್ಗೆ ವರ್ಕ್‌ ಔಟ್‌ ಮಾಡುತ್ತಿದ್ದೇವೆ. ಜಾತ್ಯತೀತ ನಾಯಕರನ್ನು ಒಟ್ಟುಗೂಡಿಸಲು ಪ್ರಯತ್ನಕ್ಕೆ ಕಾಂಗ್ರೆಸ್‌ ಸಹ ಸಹಕಾರ ನೀಡಬೇಕು. ಕಾಂಗ್ರೆಸ್‌ ಮೇಲೂ ದೊಡ್ಡ ಜವಾಬ್ದಾರಿಯಿದೆ.ಲೋಕಸಭೆ ಚುನಾವಣೆಗೆ ಮುನ್ನ ಹಾಗೂ ಚುನಾವಣೆಯ ನಂತರ ಕೆಲವೊಂದು ಬದಲಾವಣೆಗಳು ನಡೆಯಲಿವೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದ್ದು ಪ್ರತಿಪಕ್ಷಗಳನ್ನು ನಿಯಂತ್ರಿಸಲು ನೋಡುತ್ತಿದೆ. ಅದು ಸಾಧ್ಯವಾಗದ ಮಾತು.

ಚಂದ್ರಬಾಬು ನಾಯ್ಡು ಹೇಳಿದ್ದೇನು?: ನಾನು ಇಲ್ಲಿಗೆ ಬಂದಿದ್ದು ದೇವೇಗೌಡರ ಆರ್ಶೀವಾದ ಮತ್ತು ಸಹಕಾರ ಪಡೆಯಲು. ಹಿಂದೆ ದೇವೇಗೌಡರು ಯುನೈಟೆಡ್‌ ಫ್ರಂಟ್‌ ಅಧ್ಯಕ್ಷರಾಗಿದ್ದಾಗ ನಾನು ಸಂಚಾಲಕನಾಗಿದ್ದೆ. ಆಗ ದೇವೇಗೌಡರು ಪ್ರಧಾನಿಯಾದರು. ಇಬ್ಬರ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. ನನಗೆ ಅವರು ತೋರಿದ ಪ್ರೀತಿ ನಾನು ನನ್ನ ಜೀವನದಲ್ಲಿ ಮರೆಯಲು
ಸಾಧ್ಯವಿಲ್ಲ. ಎಲ್ಲರೂ ಒಂದಾಗಿ ದೇಶ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಬೇಕು ಎಂಬುದು ಜನರ ಆಶಯ. ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯ ಫ‌ಲಿತಾಂಶವೇ ಇದಕ್ಕೆ ಸಾಕ್ಷಿ. ದೇಶದ ಜನರ ಮೂಡ್‌ ಇದರಿಂದ ಗೊತ್ತಾಗಿದೆ.

ಭ್ರಷ್ಟಾಚಾರ ತನಿಖೆ ಮಾಡುವ ಸಿಬಿಐ ಸಂಸ್ಥೆ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಎಲ್ಲವೂ ಬಿಜೆಪಿ ಕಪಿಮುಷ್ಠಿಯಲ್ಲಿವೆ. ಆರ್‌ಬಿಐ ಗವರ್ನರ್‌ ಸರ್ಕಾರದ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನೋಟು ಅಮಾನ್ಯ ತೀರ್ಮಾನ
ಕೈಗೊಂಡು ಎರಡು ವರ್ಷಗಳಾದರೂ ಇನ್ನೂ ದೇಶದ ಆರ್ಥಿಕ ಸ್ಥಿತಿ ಸರಿ ದಾರಿಗೆ ಬಂದಿಲ್ಲ. ಇದರಿಂದ ಕೃಷಿಕರು ಸಂಕಷ್ಟದಲ್ಲಿದ್ದಾರೆ. ದೇಶದ ಅಲ್ಪಸಂಖ್ಯಾತರಿಗೂ ರಕ್ಷಣೆ ಇಲ್ಲದಂತಾಗಿದೆ. 

Advertisement

ಆದಾಯ ತೆರಿಗೆ ಇಲಾಖೆಯನ್ನು ಪ್ರತಿಪಕ್ಷಗಳನ್ನು ನಿಯಂತ್ರಣದಲ್ಲಿಡಲು ಬಳಕೆ ಮಾಡಲಾಗುತ್ತಿದೆ. ಕರ್ನಾಟಕ, ತೆಲಂಗಾಣ, ಉತ್ತರಪ್ರದೇಶ, ಗುಜರಾತ್‌, ತಮಿಳುನಾಡಿನಲ್ಲಿನ ಪ್ರಕರಣಗಳು ಇದಕ್ಕೆ ಸಾಕ್ಷಿ. ರಫೇಲ್‌ ಒಪ್ಪಂದ ಕುರಿತು ಮೋದಿ ಮಾತನಾಡುತ್ತಿಲ್ಲ. ಪೆಟ್ರೋಲ್‌ ದರ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ದರ ಏರುತ್ತಿದೆ. ಜನಸಾಮಾನ್ಯರ ಸಂಕಷ್ಟಕ್ಕೆ ಬೆಲೆ
ಇಲ್ಲದಂತಾಗಿದೆ. ಹೀಗಾಗಿ, ದೇಶದ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ. ನಾನು ಮಾಯಾವತಿ, ಅಖೀಲೇಶ್‌ ಜತೆ ಮಾತನಾಡಿದ್ದೇನೆ. ನಾನು ಸ್ಟಾಲಿನ್‌ ಜತೆಯೂ ಮಾತನಾಡುತ್ತೇನೆ. ನನಗೆ ದೇಶದ ಹಿತಾಸಕ್ತಿ ಮುಖ್ಯ. ಟಿಡಿಪಿಯದು ಅವಕಾಶವಾದಿತನ ಎಂಬುದು ಸರಿಯಲ್ಲ. ಬಿಜೆಪಿ ನಮಗೆ ಬೆನ್ನಿಗೆ ಚೂರಿ ಹಾಕಿತು. ವಿಶೇಷ ಸ್ಥಾನಮಾನ ವಿಚಾರದಲ್ಲೂ ಕರ್ನಾಟಕಕ್ಕೂ ಅದೇ ಸ್ಥಿತಿ ಆಗಿತ್ತು. ಕೊಟ್ಟ ಮಾತಿನಂತೆ ನಡೆಯದ ಕಾರಣ ಬೆಂಬಲ ವಾಪಸ್‌ ಪಡೆದು ಮಂತ್ರಿ ಮಂಡಲದಿಂದಲೂ
ವಾಪಸ್‌ ಆಗಿದ್ದೇವೆ.

1996ರ ಸನ್ನಿವೇಶ ರಿಪೀಟ್‌ 
ದೇವೇಗೌಡರು ಹಾಗೂ ಚಂದ್ರಬಾಬು ನಾಯ್ಡು ಅವರು ಹಳೆಯ ಮಿತ್ರರು. ದೇಶದಲ್ಲಿ ಬಿಜೆಪಿ ವಿರುದಟಛಿ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಗೆ ಚರ್ಚಿಸಿದ್ದಾರೆ. ಇಬ್ಬರ ಪೊಲಿಟಿಕಲ್‌ ಅರ್ಥಮೆಟಿಕ್‌ ಚೆನ್ನಾಗಿದೆ. ದೆಹಲಿ ರಾಜಕಾರಣಕ್ಕೆ ಇಬ್ಬರೂ ಪ್ರವೇಶ ಮಾಡಿದರೆ ಅಲ್ಲಿ ಧ್ರುವೀಕರಣ ಖಚಿತ. 2019ರ ಚುನಾವಣೆಯಲ್ಲಿ 1996ರ ಸನ್ನಿವೇಶ ರಿಪೀಟ್‌ ಆಗಬಹುದು. 
● ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next