“ಚಾಂದಿನಿ ಬಾರ್’ ಹೀಗೊಂದು ಹೆಸರಿನಲ್ಲಿ ಹೊಸಬರ ಸಿನಿಮಾವೊಂದು ತೆರೆಗೆ ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ರಾಘವೇಂದ್ರ ಕುಮಾರ್, ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗಿರುವ “ಚಾಂದಿನಿ ಬಾರ್’ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸುವ ಮೂಲಕ, ಚಿತ್ರತಂಡ “ಚಾಂದಿನಿ ಬಾರ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ರಾಘವೇಂದ್ರ ಕುಮಾರ್, “ಬಾರ್ ಒಂದರಲ್ಲಿ ಸೇರುವ ಒಂದಷ್ಟು ಬೇರೆ ಬೇರೆ ಹಿನ್ನೆಲೆಯ ವ್ಯಕ್ತಿಗಳ ಜೀವನ ಹೇಗೆಲ್ಲ ಟ್ರಾವೆಲ್ ಆಗುತ್ತದೆ ಅನ್ನೋದು “ಚಾಂದಿನಿ ಬಾರ್’ ಸಿನಿಮಾದ ಕಥೆಯ ಒಂದು ಎಳೆ. ಬಾರ್ ಒಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೇಳಲಾಗಿದೆ. ಇಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ ಹೀಗೆ ಎಲ್ಲ ಥರದ ಮನರಂಜನಾತ್ಮಕ ಅಂಶಗಳಿವೆ. ಆದಷ್ಟು ನೈಜವಾಗಿ ಸಿನಿಮಾ ಮೂಡಿಬಂದಿರುವುದರಿಂದ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.
“ಚಾಂದಿನಿ ಬಾರ್’ ಚಿತ್ರದಲ್ಲಿ ರಾಘವೇಂದ್ರ ಕುಮಾರ್‌ಗೆ ಸುಕೃತಿ ಪ್ರಭಾಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಸಿದ್ದು ಬದನವಾಳು, ಮಣಿಕಂಠ, ರಶ್ಮಿ, ಮಂಜು ಆರ್ಯ, ವಿಜಯ ಕಾರ್ತಿಕ್, ಸಂಪತ್ ಮೈತ್ರೇಯಾ, ಸೂರ್ಯ ಶೇಖರ್, ಶ್ರೀವತ್ಸ, ರವಿಕುಮಾರ್, ಭರತ ಕುಮಾರ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ “ಎಣ್ಣೆ ಹೈದಾ ಸೆಟ್ಲಾಗೋದ…’ ಎಂಬ ಹಾಡೊಂದು ಜೂ.24ರಂದು ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗುತ್ತಿದೆ. “ಕ್ಯಾಮರಾ ಮೂವೀಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ “ಚಾಂದಿನಿ ಬಾರ್’ ಚಿತ್ರಕ್ಕೆ ಚೇತನ ಶರ್ಮ ಎ ಛಾಯಾಗ್ರಹಣ, ಬಿ. ಎಸ್ ಕೆಂಪರಾಜ್ ಸಂಕಲನವಿದೆ.