Advertisement

ಚಾ.ಬೆಟ್ಟದಲ್ಲಿ ಪರಿಸರ ಹಾನಿಗೆ ಸರ್ಕಾರವೇ ಹೊಣೆ- ಪ್ರಮೋದಾದೇವಿ ಒಡೆಯರ್‌

11:55 AM Nov 25, 2021 | Team Udayavani |

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟ ಉಳಿಸಿ ಕೂಗಿಗೆ ಯದುವಂಶ ರಾಜಮನೆತನದ ಪ್ರಮೋದಾದೇವಿ ಒಡೆಯರ್‌ ಧ್ವನಿಗೂಡಿಸಿದ್ದಾರೆ. ಬೆಟ್ಟದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಚಟುವಟಿಕೆಗಳಿಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಹಂಪಿ ಮಾದರಿಯಲ್ಲಿ ಚಾಮುಂಡಿಬೆಟ್ಟದ ಅಭಿವೃದ್ಧಿ ಬೇಕಿಲ್ಲ, ಬೆಟ್ಟಕ್ಕೆ ರೋಪ್‌ ವೇ ಏಕೆ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

Advertisement

ಪ್ರಮೋದಾದೇವಿ ಒಡೆಯರ್‌ ಅವರು ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಕಾರ್ಯಗಳ ಕುರಿತು ಉದಯವಾಣಿಗೆ ನೀಡಿದ ಸಂದರ್ಶನ-

ಚಾಮುಂಡಿಬೆಟ್ಟ ಕುಸಿಯುತ್ತಿದೆ. ನಿಮ್ಮ ಪ್ರಕಾರ ಬೆಟ್ಟಕ್ಕೆ ಏಕೆ ಈ ಪರಿಸ್ಥಿತಿ ಬಂತು?

ಚಾಮುಂಡಿಬೆಟ್ಟದ ಇವತ್ತಿನ ಪರಿಸ್ಥಿತಿಗೆ ಬೆಟ್ಟದ ಮೇಲೆ ಅಭಿವೃದ್ಧಿ ಹೆಸರಲ್ಲಿ ನಡೆದಿರುವ ಅವೈಜ್ಞಾನಿಕ ಬೆಳವಣಿಗೆಗಳೇ ಕಾರಣ. ಬೆಟ್ಟದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅಲ್ಲಿನ ಕಟ್ಟಡಗಳ ಸಂಖ್ಯೆ ಏರುತ್ತಿದೆ. ಸತತ ಮಳೆಯಿಂದ ಬೆಟ್ಟದ ನಂದಿ ಸಮೀಪ ಇತ್ತೀಚೆಗೆ ನಾಲ್ಕು ಬಾರಿ ರಸ್ತೆ ಕುಸಿದಿದೆ. ಇದಕ್ಕೆ ಸತತ ಮಳೆಯಲ್ಲದೇ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬ ಬಗ್ಗೆ ತಜ್ಞರು ಅಧ್ಯಯನ ಮಾಡಿ ಪತ್ತೆ ಮಾಡಬೇಕಿದೆ.

ಚಾಮುಂಡಿಬೆಟ್ಟದಲ್ಲಿ ಆಗಿರುವ ಪರಿಸರ ವಿರೋಧಿ ಕಾರ್ಯಗಳಿಗೆ ಯಾರು ಹೊಣೆ?

Advertisement

ಸರ್ಕಾರವೇ ಹೊಣೆ. ಚಾಮುಂಡಿಬೆಟ್ಟದ ಪರಿಸರವನ್ನು ಉಳಿಸಿಕೊಳ್ಳಬೇಕಿದೆ. ಚಾಮುಂಡಿಬೆಟ್ಟದಲ್ಲಿ ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿಲ್ಲ. ಯಾವುದೇ ದೂರದೃಷ್ಟಿ ಇಲ್ಲದೇ ಆ ಸಮಯಕ್ಕೆ ಅಗತ್ಯವಾಗಿದೆ ಎಂಬ ಕಾರಣಕ್ಕೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಕೆಲಸಗಳೇ ಆಗುತ್ತಿವೆ. ಇದು ಸಮಸ್ಯೆಗಳಿಗೆ ದಾರಿ ಮಾಡಿದೆ. ಚಾಮುಂಡಿಬೆಟ್ಟದಲ್ಲಿ ಮೊದಲು ಇಷ್ಟೊಂದು ಸಂಖ್ಯೆಯಲ್ಲಿ ಮನೆಗಳು ಇರಲಿಲ್ಲ. ಜನಸಂಖ್ಯೆಯೂ ಇಷ್ಟೊಂದು ಇರಲಿಲ್ಲ.

ಬೆಟ್ಟದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ಕೊಟ್ಟವರು ಯಾರು? ಸರ್ಕಾರವೇ ತಾನೇ? ಚಾಮುಂಡಿಬೆಟ್ಟದಲ್ಲಿ ದೇವಸ್ಥಾನಗಳ ಕೇಂದ್ರೀತ ಚಟುವಟಿಕೆ ಹೊರತುಪಡಿಸಿ ಬೇರೆ ಯಾವುದೇ ಅಭಿವೃದ್ಧಿ ಬೇಕಿಲ್ಲ. ಭಕ್ತರು, ಯಾತ್ರಿಕರಿಗೆ ಯಾವ ಸೌಲಭ್ಯಗಳನ್ನು ಕಲ್ಪಿಸಬೇಕೋ ಅಷ್ಟಕ್ಕೆ ಸೀಮಿತವಾದರೆ ಸಾಕು.

ಚಾಮುಂಡಿಬೆಟ್ಟವನ್ನು ಹಂಪಿ ಮಾದರಿ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಚಾಮುಂಡಿಬೆಟ್ಟವನ್ನು ಹಂಪಿ ಮಾದರಿ ಅಭಿವೃದ್ಧಿಪಡಿಸಲು ನನ್ನ ವಿರೋಧವಿದೆ. ಹಂಪಿಯ ಪರಿಸರವೇ ಬೇರೆ, ಚಾಮುಂಡಿಬೆಟ್ಟದ ಪರಿಸರವೇ ಬೇರೆ. ಚಾಮುಂಡಿಬೆಟ್ಟದಲ್ಲಿ ದೇವಸ್ಥಾನಗಳನ್ನು ಕೇಂದ್ರೀಕರಿಸಿಯೇ ಧಾರ್ಮಿಕ ಚಟುವಟಿಕೆಗಳಿವೆ. ಇಂತಹ ಕಡೆ ಹಂಪಿ ಮಾದರಿ ಅಭಿವೃದ್ಧಿ ಏಕೆ ಬೇಕು? ಇದು ನನಗೆ ಅರ್ಥವಾಗುತ್ತಿಲ್ಲ.

 ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಅಳವಡಿಸುವ ಮಾತುಗಳು ಕೇಳಿ ಬರುತ್ತಿವೆಯಲ್ಲಾ?

ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ನಿರ್ಮಿಸಬೇಕೆಂದು ಈ ಹಿಂದೆಯೂ ಎರಡು ಬಾರಿ ಪ್ರಸ್ತಾವನೆಗಳಿತ್ತು. ಆದರೆ, ಇದನ್ನು ತಿರಸ್ಕರಿಸಲಾಯಿತು. ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಏಕೆ ಬೇಕು? ಮೆಟ್ಟಿಲುಗಳನ್ನು ಹತ್ತಿ ಹೋದರೆ ದೇವಸ್ಥಾನಕ್ಕೆ ತೆರಳಲು 30 ರಿಂದ 40 ನಿಮಿಷ ಸಾಕು. ರಸ್ತೆ ಮಾರ್ಗದಲ್ಲಿ ತೆರಳಿದರೆ 20 ನಿಮಿಷಗಳಲ್ಲಿ ದೇವಸ್ಥಾನ ತಲುಪುತ್ತೇವೆ. ಹೀಗಿದ್ದ ಮೇಲೆ ರೋಪ್‌ ವೇ ಏಕೆ? ರೋಪ್‌ ವೇ ನಿರ್ಮಾಣಕ್ಕೆಂದು ಮತ್ತೆ ಮರಗಳನ್ನು ಕಡಿಯುವುದು, ಬಂಡೆಗಳನ್ನು ಒಡೆಯುವ ಕೆಲಸಗಳೇ ಆಗುತ್ತವೆ. ಪ್ರಕೃತಿಗೆ ಮತ್ತಷ್ಟು ಹಾನಿಯಾಗುತ್ತದೆ.

ಇರುವುದನ್ನು ಉಳಿಸಿಕೊಳ್ಳುವುದನ್ನು ನಾವು ಮೊದಲು ಕಲಿಯಬೇಕು. ಪ್ರಕೃತಿ ಮುನಿದಿದೆ ಎಂದು ತಜ್ಞರು ಈಗಲೇ ನಮ್ಮನ್ನು ಎಚ್ಚರಿಸುತ್ತಿಲ್ಲವೇ? ನಿಸರ್ಗಕ್ಕೆ ಗೌರವ ಕೊಡುವುದನ್ನು ಮೊದಲು ನಾವು ಕಲಿಯ ಬೇಕು.

ಚಾಮುಂಡಿಬೆಟ್ಟದ ಉಳಿವಿಗೆ ಕೈಗೊಳ್ಳಬೇಕಿರುವ ಕಾರ್ಯಗಳೇನು?

ಬೆಟ್ಟದ ಮೇಲೆ ಸಣ್ಣ ಸಣ್ಣ ಕಟ್ಟಡಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಚಾಮುಂಡಿಬೆಟ್ಟ ಒಂದು ಧಾರ್ಮಿಕ ಸ್ಥಳ, ಯಾತ್ರಾ ಸ್ಥಳವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಬೆಟ್ಟದಲ್ಲಿ ಏಕೆ ವಾಣಿಜ್ಯ ಸಂಕೀರ್ಣಗಳು ಬೇಕು? ಯಾತ್ರಿಕರಿಗೆ ಸೌಲಭ್ಯ ಕಲ್ಪಿಸಬೇಕು. ಹಾಗೆಂದ ಮಾತ್ರಕ್ಕೆ ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟಬೇಕಾ? ಚಾಮುಂಡಿಬೆಟ್ಟದ ಪಾವಿತ್ರ್ಯತೆಯನ್ನು , ಅಲ್ಲಿನ ಪರಿಸರವನ್ನು ಬಲಿಕೊಟ್ಟು ಅಭಿವೃದ್ಧಿ ಕೆಲಸ ಮಾಡಬಾರದು

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next