Advertisement

ನಸುಕಿನಿಂದಲೇ ಮಳೆ ಲೆಕ್ಕಿಸದೆ ಚಾಮುಂಡಿ ದರ್ಶನ

09:56 AM Jul 27, 2019 | Suhan S |

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು.

Advertisement

ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ನೇತೃತ್ವದಲ್ಲಿ ಅರ್ಚಕರು ತಾಯಿ ಚಾಮುಂಡೇಶ್ವರಿಗೆ ಮುಂಜಾನೆ 3.30ರಿಂದಲೇ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು. ಬೆಳಗ್ಗೆ 5.30 ರಿಂದ ರಾತ್ರಿ 10 ವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮಧ್ಯೆ ಬೆ. 9.30 ಕ್ಕೆ ದೇವಿಗೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30ರವರೆಗೆ ಅಭಿಷೇಕ ನಡೆಯಿತು. ರಾಜ ವಂಶಸ್ಥ ಯದುವೀರ್‌ ದಂಪತಿ ಮೊದಲ ಪೂಜೆ ನೆರವೇರಿಸಿದರು.

ದುರ್ಗಿ ಅಲಂಕಾರ: ಕೊನೆಯ ಆಷಾಢ ಶುಕ್ರವಾರದಂದು ನಾಡಿನ ಅದಿದೇವತೆಗೆ ವಿಶೇಷ ದುರ್ಗಿ ( ಸಿಂಹ ವಾಹಿನಿ ) ಅಲಂಕಾರ ಮಾಡಲಾಗಿತ್ತು. ದೇವಿಗೆ ನೀಲಿ ಸೀರೆಯುನುಡಿಸಿ, ಮಲ್ಲಿಗೆ, ಕನಕಾಂಬರ, ಸೇವಂತಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.

ಕೆಂಪು, ಹಳದಿ, ನೀಲಿ, ಬಿಳಿ ಸೇರಿದಂತೆ ವಿವಿಧ ಬಗೆಯ ಬಣ್ಣದ ಗುಲಾಬಿ ಹೂವು ಹಾಗೂ ಸೇವಂತಿ ಹೂವಿನಿಂದ ದೇವಸ್ಥಾನದ ಪೂರ್ಣ ಭಾಗ ಅಲಂಕರಿಸಲಾಗಿತ್ತು. ಅಲ್ಲದೇ ಅಲಂಕಾರಿಕಾ ಹೂವುಗಳನ್ನು ದೇವಸ್ಥಾನದ ಗರ್ಭಗುಡಿಯಿಂದ ಹೊರಗೆ ಸಂಪೂರ್ಣವಾಗಿ ಬಳಸಿದರಿಂದ ಅಲಂಕಾರಕ್ಕೆ ಮತ್ತಷ್ಟು ಮೆರಗು ನೀಡಿದಂತಿತ್ತು. ಈ ಬಾರಿಯ ಹೂವಿನ ಅಲಂಕಾರವನ್ನು ಮೈಸೂರಿನ ಉದ್ಯಮಿ ಜೀವನ್‌ ಹಾಗೂ ಬೆಂಗಳೂರಿನ ಶೇಖರ್‌ ಮಾಡಿದ್ದರು.

ಭಕ್ತಿಯಲ್ಲಿ ಮಿಂದೆದ್ದ ಭಕ್ತರು: ಮುಂಜಾನೆ ನಸುಕಿನಲ್ಲಿಯೇ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೇ, ಬೆಟ್ಟದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ‘ಜೈ ಚಾಮುಂಡೇಶ್ವರಿ’, ‘ಜೈ ನಾಡದೇವತೆ’, ‘ಜೈ ಶಕ್ತಿದೇವಿ’ ಎಂಬ ಜಯಘೋಷಗಳು ಕೂಗಿದರು. ಹರಕೆ ಹೊತ್ತ ಮಹಿಳೆಯರು ದೇವಸ್ಥಾನದ ಆವರಣದಲ್ಲಿ ಎಣ್ಣೆ ದೀಪ, ಬೆಲ್ಲದಾರತಿಗಳನ್ನು ಬೆಳಗಿ ಧನ್ಯತಾಭಾವ ಮೆರೆದರು.

Advertisement

ಮೋಡ ಆವರಿಸಿದ್ದ ತಣ್ಣನೆಯ ವಾತಾವರಣ, ಆಷಾಢ‌ ಮಾಸದ ಮೈ ಕೊರೆಯುವ ಗಾಳಿ, ಆಗಾಗ್ಗೆ ಬರುತ್ತಿದ್ದ ತುಂತುರು ಮಳೆಯ ನಡುವೆಯೇ ಮಧ್ಯರಾತ್ರಿಯಿಂದಲೇ ಸರದಿ ಸಾಲಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು. ರಾಜ ವಂಶಸ್ಥ ಯದುವೀರ್‌ ದಂಪತಿ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಮೇಯರ್‌ ಪುಷ್ಪಲತಾ ಇನ್ನಿತರರ ಗಣ್ಯರು ವಿಶೇಷ ಪೂಜೆ ಸಲ್ಲಿಸಿ ಚಾಮುಂಡೇಶ್ವರಿ ದರ್ಶನ ಪಡೆದರು.

ಕೊನೆಯ ಆಷಾಢ ಶುಕ್ರವಾರ ಹಿನ್ನೆಲೆ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಸಾವಿರಾರು ಭಕ್ತರು ಬೆಳಗಿನ ಜಾವದಿಂದಲೇ ತಾಯಿ ದರ್ಶ ನಕ್ಕೆ ಮುಗಿಬಿದ್ದರು. ಹೀಗಾಗಿ ಸಂಜೆಯವರೆಗೆ ಭಕ್ತರು ದರ್ಶನಕ್ಕೆ ಸರದಿ ಸಾಲಿನಲ್ಲಿ ಹೆಚ್ಚು ಸಮಯ ನಿಲ್ಲಬೇಕಾಗಿತ್ತು.

ಭಕ್ತರು

ಮುಂಜಾನೆ 3 ಗಂಟೆಯಿಂದಲೇ ಬೆಟ್ಟಕ್ಕೆ ಬರಲಾರಂಭಿಸಿದರು. ಕೆಲವರು ಮೆಟ್ಟಿಲು ಮೂಲಕ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ತಮಿಳುನಾಡು, ಬೆಂಗಳೂರು, ಮಂಡ್ಯ, ಹಾಸನ ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದ ಭಕ್ತರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್‌ನ‌ಲ್ಲಿ ನಿಲ್ಲಿಸಿ ಉಚಿತ ಬಸ್‌ಗಳ ಮೂಲಕ ಬೆಟ್ಟಕ್ಕೆ ತೆರಳಿದರು.

ಬೆಟ್ಟಕ್ಕೆ ಹೆಚ್ಚುವರಿ ಬಸ್‌ ವ್ಯವಸ್ಥೆ ಹೆಲಿಪ್ಯಾಡ್‌ನಿಂದ ಚಾಮುಂಡಿಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ಜಿಲ್ಲಾಡಳಿತ 22ಕ್ಕೂ ಹೆಚ್ಚು ಉಚಿತ ಬಸ್‌ ವ್ಯವಸ್ಥೆಯನ್ನು ಮಾಡಿತ್ತು. ಇದರೊಂದಿಗೆ ನಗರ ಬಸ್‌ ನಿಲ್ದಾಣದಿಂದ 10 ವೋಲ್ವೋ ಬಸ್‌, 35 ಸಾಮನ್ಯ ಬಸ್‌ ವ್ಯವಸ್ಥೆ ಕಲ್ಪಿಸಿತ್ತು. ಪ್ರತಿ ಐದು ನಿಮಿಷಕ್ಕೊಂದು ಬಸ್‌ ಚಾಮುಂಡಿಬೆಟ್ಟಕ್ಕೆ ಹೊರಡುವ ವ್ಯವಸ್ಥೆ ಮಾಡಿತ್ತು.

ಬಿಗಿ ಬಂದೋಬಸ್ತ್: ಅಧಿಕ ಸಂಖ್ಯೆಯಲ್ಲಿ ಭಕ್ತರು ಏಕ ಕಾಲಕ್ಕೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಡಿಸಿಪಿ ಕವಿತಾ ನೇತೃತ್ವ ದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸ ಲಾಗಿತ್ತು. ಅಲ್ಲದೆ ಗುಂಪು ಚದುರಿಸಲು ಅಶ್ವರೋಹಿ ದಳದ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿತ್ತು. ಸರಗಳ್ಳರು, ಜೇಬುಗಳ್ಳರ ಕೃತ್ಯಕ್ಕೆ ಬ್ರೇಕ್‌ ಹಾಕಲು ಮಫ್ತಿ ಯಲ್ಲಿ ಪೊಲೀಸರ ಗಸ್ತು ಆಯೋಜಿಸಲಾಗಿತ್ತು.

ಪ್ರಯಾಣಿಕರು ತುಂಬಿದ್ದ ಬಸ್‌ ಬ್ರೇಕ್‌ ಫೇಲ್: ತಪ್ಪಿದ ಅನಾಹುತ

ಕೊನೆಯ ಆಷಾಢ ಶುಕ್ರವಾರ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಸಾರಿಗೆ ಬಸ್‌ನ ಬ್ರೇಕ್‌ ಏರ್‌ ಪೈಪ್‌ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ, ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಎಲ್ಲಾ ಖಾಸಗಿ ವಾಹನಗಳನ್ನು ಹೆಲಿಪ್ಯಾಡ್‌ ಬಳಿ ನಿಲ್ಲಿಸಿ, ಅಲ್ಲಿಂದ ಪ್ರವಾಸಿಗರು ಮತ್ತು ಭಕ್ತರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಬೆಟ್ಟಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಕಡೆಯ ಆಷಾಢ ಶುಕ್ರವಾರದಂದು ಬಸ್ಸೊಂದು ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯುವಾಗ ಬ್ರೇಕ್‌ ಫೇಲ್ಯೂರ್‌ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ನಂತರ ಹಿಮ್ಮುಖವಾಗಿ ಇಳಿಜಾರಿನೆಡೆಗೆ ಚಲಿಸಿದೆ. ರಸ್ತೆ ಬದಿಯಲ್ಲಿ ಮೂರು ಅಡಿ ಎತ್ತರಕ್ಕೆ ತಡೆಗೋಡೆ ನಿರ್ಮಿಸಿದ್ದ ಪರಿಣಾಮ ಬಸ್‌ ಕಂದಕಕ್ಕೆ ಉರುಳುವುದು ತಪ್ಪಿದಂತಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.ನಂತರ ಕಾರ್ಯಪ್ರವೃತ್ತರಾದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಲ್ಲಿಯೇ ಇದ್ದ ತುರ್ತು ನಿರ್ವಹಣ ಘಟಕದ ವಾಹನ ತಂದು, ಬಸ್‌ನ ಬ್ರೇಕ್‌ ವ್ಯವಸ್ಥೆಯನ್ನು ಸರಿಪಡಿಸಿದರು. ಈ ಸಂದರ್ಭ ಸಂಚಾರ ಪೊಲೀಸರು ಸಮರ್ಪಕವಾಗಿ ಕಾರ್ಯನಿರ್ವಹಿಸಿದರಿಂದ ಯಾವುದೇ ಸಂಚಾರ ದಟ್ಟಣೆ ಆಗಲಿಲ್ಲ.
ದಾಸೋಹ ಭವನದಲ್ಲಿ ಪ್ರಸಾದ ವಿತರಣೆ:

ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರ ಸಂಬಂಧಿ ಸತೀಶ್‌ ಅವರು, ದಾಸೋಹ ಭವನದಲ್ಲಿ ಸುಮಾರು 21 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಬೆಳಗ್ಗೆ 8ರಿಂದ ಪ್ರಾರಂಭವಾದ ಅನ್ನಸಂತರ್ಪಣೆ ರಾತ್ರಿ 8ರವರೆಗೂ ನಡೆಯಿತು. ಪಲಾವ್‌, ಟೊಮೊಟೋ ಬಾತ್‌, ಪೊಂಗಲ್ ಭಕ್ತರಿಗೆ ನೀಡಲಾಯಿತು. ಜತೆಗೆ ಬೆಟ್ಟದ ಬಸ್‌ ನಿಲ್ದಾಣದ ಬಳಿ ಹರಕೆ ಹೊತ್ತಿದ್ದ ಸಾರ್ವಜನಿಕರು ಆಟೋ ಮತ್ತು ಕಾರುಗಳ ಮೂಲಕ ಭಕ್ತರಿಗೆ ಬಿಸಿಬೇಳೆ ಬಾತ್‌, ಸಿಹಿ, ಖಾರಾ ಪೊಂಗಲ್, ಕೇಸರಿಬಾತ್‌ ಹಂಚಿದರು. ಭಕ್ತರಿಗೆ ತಯಾರಿಸಿದ ಪ್ರಸಾದ ಮತ್ತು ದಾಸೋಹದ ಬಗ್ಗೆ ನಿಗಾವಹಿಸಲಾಗಿತ್ತು. ಪ್ರಸಾದ ವಿನಿಯೋಗಕ್ಕೂ ಮೊದಲು ಜಿಲ್ಲಾ ಆರೋಗ್ಯಾಧಿಕಾರಿ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ಮಾಡಿ, ನಂತರ ಪ್ರಸಾದ ವಿನಿಯೋಗಕ್ಕೆ ಅವಕಾಶ ಮಾಡಿಕೊಟ್ಟರು. ಸೆಲ್ಫಿಯಲ್ಲಿ ಮುಳುಗಿದ ಭಕ್ತರು: ತಾಯಿ ಚಾಂಮುಂಡಿ ದರ್ಶನ ಪಡೆದ ಅನೇಕ ಭಕ್ತರು ದೇಗುಲದ ಬಳಿಯ ಮಹಿಷಾಸುರ ಪ್ರತಿಮೆ ಮತ್ತು ನಂದಿ ಬೆಟ್ಟದಲ್ಲಿ ಸೆಲ್ಫಿ ತೆಗೆದು ಖುಷಿಪಟ್ಟರು.
Advertisement

Udayavani is now on Telegram. Click here to join our channel and stay updated with the latest news.

Next