Advertisement

ಚಾಮುಂಡೇಶ್ವರಿಗೂ ಗಾರ್ಡ್‌ ಆಫ್ ಆನರ್‌! ಪೊಲೀಸರಿಂದ ಗೌರವ ಸ್ವೀಕರಿಸುವ ದೇಶದ ಏಕೈಕ ದೇವತೆ

03:33 PM Nov 19, 2020 | sudhir |

ಮೈಸೂರು: ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಗಣ್ಯಾತಿಗಣ್ಯರಿಗೆ ಪೊಲೀಸ್‌ ಇಲಾಖೆಯಿಂದ ಗೌರವ ವಂದನೆ(ಗಾರ್ಡ್‌ ಆಫ್ ಆನರ್‌) ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಆದರೆ, ದೇವರಿಗೆ ವಂದನೆ ಸಲ್ಲಿಸುವುದನ್ನು ಎಲ್ಲಾದರೂ ನೋಡಿದ್ದೀರಾ!

Advertisement

ಹೌದು… ಪೊಲೀಸರಿಂದ ಗೌರವ ವಂದನೆ ಸ್ವೀಕರಿಸುತ್ತಿರುವ ನಾಡದೇವತೆ ಚಾಮುಂಡೇಶ್ವರಿ ತಾಯಿ ಇಂತಹ ಗೌರವಕ್ಕೆ ಪಾತ್ರರಾಗಿರುವ ದೇಶದ ಏಕೈಕ ದೇವಿಯಾಗಿದ್ದಾಳೆ. ನಾಡದೇವಿ ಚಾಮುಂಡೇಶ್ವರಿಗೆ ಪೊಲೀಸ್ ‌ಇಲಾಖೆಯಿಂದ ನಿತ್ಯ ಎರಡು ಬಾರಿ ಈ ಗೌರವ ವಂದನೆ ಸಲ್ಲಿಕೆಯಾಗುತ್ತಿದೆ. ಮೈಸೂರು ಅರಸರ ಕಾಲದಲ್ಲಿ “ಬರ್ಜಿತ್‌’ ಹೆಸರಿನಲ್ಲಿ ಸಿಪಾಯಿಗಳಿಂದ ಗೌರವ
ವಂದನೆ ಸ್ವೀಕರಿಸುತ್ತಿದ್ದ ಚಾಮುಂಡೇಶ್ವರಿ ಈಗ ಪೊಲೀಸರಿಂದಲೂ ಗೌರವ ವಂದನೆ ಸ್ವೀಕರಿಸುತ್ತಿದ್ದಾಳೆ.

ಎರಡು ಬಾರಿ ವಂದನೆ: ಭಕ್ತಾದಿಗಳ ಘಂಟಾನಾದ ದೊಂದಿಗೆ ವಿಶೇಷ ಪೂಜೆ ಪುರಸ್ಕಾರಗಳನ್ನು ಸ್ವೀಕರಿಸುವುದು ದೇವಿಯ ದಿನಚರಿ. ಜತೆಗೆ ಪ್ರತಿದಿನ ಮಹಾಮಂಗಳಾರತಿ ನಡೆಯುವ ಬೆಳಗ್ಗೆ 9.30 ಮತ್ತು ರಾತ್ರಿ 8.30ರ ಸಮಯದಲ್ಲಿ ಪೊಲೀಸರೊಬ್ಬರು ವಂದನೆ ಸಲ್ಲಿಸುತ್ತಿದ್ದಾರೆ. ನವರಾತ್ರಿ, ಆಷಾಢ ಸೇರಿದಂತೆ ಇನ್ನಿತರ ವಿಶೇಷ ದಿನಗಳಲ್ಲಿ ಇಬ್ಬರು ಪೇದೆಗಳು ವಂದನೆ ಸಲ್ಲಿಸುತ್ತಾರೆ.
ಇದು ಮೂಲ ಮೂರ್ತಿಗೆ ಮಾತ್ರವಲ್ಲದೇ ಉತ್ಸವ ಮೂರ್ತಿಗೂ ದೊರೆಯಲಿದೆ. ಗರ್ಭಗುಡಿಯಲ್ಲಿ ಮೂಲ ವಿಗ್ರಹಕ್ಕೆ ಮೌನವಾಗಿ ವಂದನೆ ಸಲ್ಲಿಸುವ ಪೊಲೀಸರು, ಉತ್ಸವ ಮೂರ್ತಿಯನ್ನು ದೇವಸ್ಥಾನದ ಹೊರ ಆವರಣದಲ್ಲಿರುವ ಮಂಟಪದಲ್ಲಿ ಕೂರಿಸಿ
ವಂದನೆ ಸಲ್ಲಿಸುತ್ತಾರೆ.

ಇದನ್ನೂ ಓದಿ:“ಡಿಜಿಟಲ್ ಇಂಡಿಯಾ” ಎಂಬುದು ಕೇವಲ ಸರ್ಕಾರದ ಅಭಿಯಾನವಲ್ಲ, ಬದುಕಿನ ರೀತಿಯಾಗಿದೆ : ಪ್ರಧಾನಿ

Advertisement

ಇತಿಹಾಸ ದೊಡ್ಡದು: ಯದು ವಂಶದಕುಲದೇವತೆ ಚಾಮುಂಡೇಶ್ವರಿಗೆ ಈ ರೀತಿಯ ಗೌರವ ವಂದನೆ ಸಲ್ಲಿಸುವುದನ್ನುಕ್ರಿ.ಶ.1799 ನಂತರ ಮೈಸೂರು ರಾಜರು ಆರಂಭಿಸಿದ್ದಾರೆ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ಬಳಿಕ ಮೈಸೂರು ಒಡೆಯರಿಗೆ ರಾಜ್ಯದ ಒಂದು ಭಾಗವನ್ನು ಬ್ರಿಟಿಷರು ನೀಡುತ್ತಾರೆ. ಹೀಗೆ ಮತ್ತೆ ಸಿಕ್ಕ ರಾಜ್ಯಕ್ಕೆ ತಾಯಿ ಚಾಮುಂಡೇಶ್ವರಿಯೇ
ಕಾರಣ ಎನ್ನುವುದು ರಾಜವಂಶಸ್ಥರ ಭಾವನೆ. ಹಾಗಾಗಿ, ಮುಮ್ಮಡಿ ಕೃಷ್ಣರಾಜ ಒಡೆಯರ್‌ ತಾವು ಪಟ್ಟಕ್ಕೇರಿದ ಬಳಿಕ ದೇವಿಯನ್ನು ಪೂಜಿಸಲು ತಮಿಳುನಾಡಿನಿಂದ ಆಗಮಿಕರನ್ನು ಕರೆತರುತ್ತಾರೆ. ಅಲ್ಲಿಯ ವರೆಗೂ ದೇವಿಯನ್ನು “ಶಿವಾಚಾರ್ಯ’ರು ಪೂಜಿಸುತ್ತಿರುತ್ತಾರೆ. ಜತೆಗೆ ದೇಗುಲವನ್ನು ವಿಸ್ತರಿಸಿ ರಾಜಗೋಪುರವನ್ನು ನಿರ್ಮಿಸುತ್ತಾರೆ. ಹೀಗೆ
ಚಾಮುಂಡೇಶ್ವರಿ ದೇವಿಗೆ ಅದ್ಧೂರಿತನ ನೀಡಿದ ಮುಮ್ಮಡಿ ಅವರು ತಮ್ಮ 1815 ಮತ್ತು 1818ರ ಮಧ್ಯೆ ಈ “ಬರ್ಜಿತ್‌’ ಪದ್ಧತಿಯನ್ನು ಪ್ರಾರಂಭಿಸಿರ ಬಹುದು ಎಂದು ಇತಿಹಾಸಕಾರರು ತಿಳಿಸುತ್ತಾರೆ.

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next