Advertisement

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಬೆಂಬಲಿಸಿ: ಜಿಟಿಡಿ

03:17 PM May 04, 2023 | Team Udayavani |

ಮೈಸೂರು: ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿದ್ದು, ಈಗಾಗಲೇ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಮುಗಿದಿದ್ದು, ಇನ್ನುಳಿದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಮನವಿ ಮಾಡಿದರು.

Advertisement

ಇಲವಾಲ ಹೋಬಳಿಯ ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಯಾಚೆಗೌಡನಹಳ್ಳಿ, ಹನುಮಂತಪುರ, ಛತ್ರದ ಕೊಪ್ಪಲು, ಗುಂಗ್ರಾಲ್‌ ಛತ್ರ ಹಾಗೂ ಯಲಚಹಳ್ಳಿ ಗ್ರಾಮಗಳಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದರು.

ಇಲವಾಲ ಹೋಬಳಿಯ ಜನರು ನನಗೆ 1972 ರಿಂದಲೂ ರಾಜಕೀಯವಾಗಿ ಆಶೀರ್ವಾದ ಮಾಡಿದ್ದರಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿದ್ದ ಕಾಲದಿಂದಲೂ ನನ್ನನ್ನು ಊರಿನವರು ಬೆಂಬಲಿಸಿಕೊಂಡು ಬಂದಿದ್ದಾರೆ. ಈಗಲೂ ಕೈ ಹಿಡಿದು ಮುನ್ನಡೆಸಬೇಕು ಎಂದು ಕೋರಿದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ರಸ್ತೆಗಳು ನಿರ್ಮಾಣ ವಾಗಿವೆ. ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಹಳೆ ಉಂಡವಾಡಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಜನವರಿ ಒಳಗಾಗಿ ದಿನದ 24 ಗಂಟೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಜಿ.ಟಿ.ದೇವೇಗೌಡರು ತಮ್ಮ ಹುಟ್ಟೂರು ಗುಂಗ್ರಾಲ್‌ ಛತ್ರದ ಗ್ರಾಮಕ್ಕೆ ಪ್ರಚಾರಕ್ಕಾಗಿ ಆಗಮಿಸಿದಾಗ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು.

ಗುಂಗ್ರಾಲ್‌ ಛತ್ರದ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಮಹಿಳೆಯರು ಸ್ವಾಗತಿಸಿದರು. ಇಡೀ ಊರಿನ ಜನರು ಹೂವುಗಳ ಸುರಿಮಳೆಗೈದರು. ಪಟಾಕಿ ಸಿಡಿಸಿ ಜೈಕಾರದ ಘೋಷಣೆಗಳನ್ನು ಕೂಗಿದರು.

ಕಲಾವಿದರು ನಗಾರಿ ಬಾರಿಸಿಕೊಂಡು ಹೆಜ್ಜೆ ಹಾಕಿದರೆ, ತೆರೆದ ವಾಹನದಲ್ಲಿ ಜಿ.ಟಿ.ದೇವೇಗೌಡರು ಮತಯಾಚನೆ ಮಾಡಿದರು. ಪ್ರತಿಯೊಂದು ಬೀದಿಗಳಲ್ಲಿ ಮನೆ ಮುಂದೆ ನಿಂತಿದ್ದ ಮಹಿಳೆಯರು ಹೂವುಗಳನ್ನು ಎಸೆದರು.

Advertisement

ಕೆಲವು ಕಡೆಗಳಲ್ಲಿ ಆರತಿ ಬೆಳಗಿ ಶುಭ ಹಾರೈಸಿದರು. ಗುಂಗ್ರಾಲ್‌ ಛತ್ರದ ಮಗ ನೀನಾಗಿದ್ದು, ನೀನು ಗೆದ್ದು ಬರುತ್ತೀಯಾ ಎಂದು ಊರಿನ ಹಿರಿಯಜ್ಜಿ ತೋಳಸಮ್ಮ ಹಣೆಗೆ ಕುಂಕುಮ ಇಟ್ಟು ಶುಭ ಕೋರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next