Advertisement

ವಿಜೃಂಭಣೆಯ ಚಾಮುಂಡೇಶ್ವರಿ ಜನ್ಮೋತ್ಸವ

12:16 PM Jul 17, 2017 | |

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವ ಭಾನುವಾರ ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯಿಂದ ನಡೆಯಿತು. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ.ಎನ್‌.ಶಶಿಶೇಖರ ದೀಕ್ಷಿತ್‌ ನೇತೃತ್ವದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಪ್ರಯುಕ್ತ ಭಾನುವಾರ ಪ್ರಾತಃಕಾಲ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಂಗಳಾರತಿ ಹಾಗೂ ಬೆಳಗ್ಗೆ 10 ಗಂಟೆಗೆ ಮಹಾ ಮಂಗಳಾರತಿ ಮಾಡಲಾಯಿತು.

Advertisement

ನಂತರ ಬೆಳಗ್ಗೆ 10.30ಕ್ಕೆ ಅಮ್ಮನವರಿಗೆ ಚಿನ್ನದ ಪಲ್ಲಕ್ಕಿ ಉತ್ಸವ, ಮಂಟಪೋತ್ಸವ, ಪ್ರಸಾದ ವಿನಿಯೋಗ, ರಾತ್ರಿ 8.30ಕ್ಕೆ ಶ್ರೀಯವರಿಗೆ ಫ‌ಲಪೂಜೆ, ದರ್ಬಾರ್‌ ಉತ್ಸವ, ಮಂಟಪೋತ್ಸವ, ರಾಷ್ಟ್ರಾಶೀರ್ವಾದ ಜರುಗಿದವು.

ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ವರ್ಧಂತಿ ಮಹೋತ್ಸವ ದಿನದಂದು ಚಾಮುಂಡೇಶ್ವರಿ ದೇವಿಯ ವಿಶೇಷ ದರ್ಶನ ಪಡೆದು ಧನ್ಯತೆ ಮರೆಯಿತು. ಮುಂಜಾನೆ 4 ಗಂಟೆಯಿಂದಲೇ ಆಷಾಢದ ತಣ್ಣನೆಗಾಳಿ, ಚಳಿಯನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಾದು ನಿಂತಿದ್ದ ಭಕ್ತರಿಗೆ ಬೆಳಗ್ಗೆ 8 ಗಂಟೆಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ದೇವಸ್ಥಾನದ ಪ್ರವೇಶಿಸಿದ ಭಕ್ತರು ದೇವಿಯ ದರ್ಶನ ಪಡೆದರು.

ಮೆರವಣಿಗೆ: ಬೆಳಗ್ಗೆ 10 ಗಂಟೆಗೆ ಮಹಾ ಮಂಗಳಾರತಿ ನಡೆದ ಬಳಿಕ ವಿಶೇಷವಾಗಿ ಅಲಂಕರಿಸಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ, ಮೈಸೂರು ನಗರ ಪೊಲೀಸ್‌ ವ್ಯಾದ ವೃಂದದವರು ಐಗಿರಿ ನಂದಿನಿ, ಕಾಯೋಶ್ರೀ ಗೌರಿ ಸಂಗೀತ ನುಡಿಸಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ಕೊಟ್ಟರು.

ನಂತರ ಪರಂಪರೆಯಿಂದ ನಡೆದುಕೊಂಡು ಬಂದ ಪದ್ಧತಿಯಂತೆ ನಗರ ಪೊಲೀಸ್‌ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಈ  ವೇಳೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾಧಿಕಾರಿ ಡಿ.ರಂದೀಪ್‌ ಇತರರ ಸಮ್ಮುಖದಲ್ಲಿ ದೇವಿಯ ಉತ್ಸವಕ್ಕೆ ಚಾಲನೆ ನೀಡಲಾಯಿತು.

Advertisement

ಮೊಳಗಿದ ಜೈಕಾರ: ಅಶ್ವಾರೋಹಿ ಪಡೆ, ದೇವಸ್ಥಾನದ ಬಿರುದು ಬಾವಲಿ, ಮಂಗಳವಾದ್ಯದವರು ಮಂತ್ರಘೋಷ ಮೊಳಗಿಸಿ ಮುಂದೆ ಸಾಗುತ್ತಿದ್ದರೆ, ಹಿಂದೆ ಚಿನ್ನದ ಪಲ್ಲಕ್ಕಿಯ ಮೆರವಣಿಗೆ ಸಾಗಿತು. ಸರತಿಯಲ್ಲಿ ಕಾದು ನಿಂತಿದ್ದ ಭಕ್ತರು ಚಾಮುಂಡಮ್ಮನಿಗೆ ಜೈ, ಚಾಮುಂಡೇಶ್ವರಿಗೆ ಜೈ ಎಂದು ಜೈಕಾರ ಕೂಗಿ ಭಕ್ತಿಭಾವ ಮೆರೆದರು.

ವಿಶೇಷ ಅಲಂಕಾರ: ವರ್ಧಂತಿ ಮಹೋತ್ಸವ ಹಿನ್ನೆಲೆ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಲಲಿತ್‌ ಮಹಲ್‌ ಹೆಲಿಪ್ಯಾಡ್‌ ನಿಂದ ಜಿಲ್ಲಾಡಳಿತ ಕಲ್ಪಿಸಿದ್ದ ಉಚಿತ ಬಸ್‌ ಸೇವೆಯನ್ನು ಹಲವರು ಬಳಸಿಕೊಂಡರೆ, ಸಹಸ್ತಾರು ಭಕ್ತರು ತಮ್ಮ ಬಡಾವಣೆಗಳಿಂದ ಗುಂಪು ಗುಂಪಾಗಿ ಬಂದು ಚಾಮುಂಡಿಬೆಟ್ಟದ ಪಾದದಿಂದ 1001 ಮೆಟ್ಟಿಲು ಹತ್ತುವ ಮೂಲಕ ದೇವಸ್ಥಾನ ತಲುಪಿದರು.

ನಾಡಿನ ಜನರಿಗೆ ಒಳಿತು ಮಾಡಲಿ: ನಾಡಿನಲ್ಲಿ ಒಳ್ಳೆ ಮಳೆ ಬಂದು ಜನರಿಗೆ ಒಳಿತನ್ನು ತರಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಕೋರಿದ್ದೇನೆ. ಚಾಮುಂಡಿಬೆಟ್ಟದಲ್ಲಿ ಈ ಹಿಂದೆ ನಡೆದ ಎರಡು ದೇವರ ಕಾರ್ಯದಲ್ಲಿ ಭಾಗಿಯಾಗಿದ್ದರೂ ವರ್ಧಂತಿಯಲ್ಲಿ ಮೊದಲು ಭಾಗಿಯಾಗಿದ್ದು ಸಂತೋಷವಾಗಿದೆ. ಯದುವಂಶದ ಪದ್ಧತಿಯಂತೆ ಪೂಜೆಯಲ್ಲೂ ಭಾಗಿಯಾಗಿದ್ದೆ. ರಾಜ್ಯದಲ್ಲಿ ಮಳೆ ಬಂದು ಸಮಸ್ಯೆ ನಿವಾರಣೆಯಾಗಬೇಕು. ಎದುರಿಸುತ್ತಿರುವ ಸಂಕಷ್ಟ ದೂರಾಗಬೇಕು.
-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ರಾಜವಂಶಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next