Advertisement

ಚಾಮುಲ್‌: ಸಮರ್ಥರಿಗೆ ಬಿಜೆಪಿ ಟಿಕೆಟ್‌

12:46 PM Jun 12, 2022 | Team Udayavani |

ಗುಂಡ್ಲುಪೇಟೆ: ಬಿಜೆಪಿಯಲ್ಲಿ ಮೂಲ-ವಲಸೆ ಎಂದ ಭಾವನೆಯಿಲ್ಲ. ಚಾಮುಲ್‌ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಟಿಕೆಟ್‌ ನೀಡಿದ್ದು, ತಾಲೂಕಿನ ಮತದಾರ ಪ್ರತಿನಿಧಿ ಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಧಿಕ ಮತ ನೀಡಿ ಬೆಂಬಲಿಸಿ ಗೆಲುವಿಗೆ ಸಹಕಾರ ನೀಡಬೇಕೆಂದು ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಮನವಿ ಮಾಡಿದರು.

Advertisement

2015-16ನೇ ಸಾಲಿನಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ ತಕ್ಷಣವೇ ಟಿಕೆಟ್‌ ಕೊಟ್ಟಾಗ ಅಂದು ಪಕ್ಷದಲ್ಲಿದ್ದ ಮೂಲ ಬಿಜೆಪಿಯವರು ಕೂಡ ಇವರಿಗೆ ಟಿಕೆಟ್‌ ನೀಡಬೇಡಿ ಎಂದು ಹೇಳಲಿಲ್ಲ. ಪ್ರಾಮಾಣಿಕವಾಗಿ ಅಂದು ನಮ್ಮ ಕಾರ್ಯಕರ್ತರು ಮೂಲ ವಲಸಿಗ ಎಂಬ ಭೇದ ಭಾವನೆ ತೋರದೆ ಪಕ್ಷ ಸೂಚಿಸಿದ ವ್ಯಕ್ತಿಗೆ ದುಡಿದಿದ್ದರು ಎಂದರು.

ಚಾಮುಲ್‌ ಚುನಾವಣೆಯ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್‌ ನಾಯಕರು ನಮ್ಮ ಪಕ್ಷದವರನ್ನು ಕರೆತಂದು ಬಿಜೆಪಿ ಅಭ್ಯರ್ಥಿಗಳನ್ನಾಗಿ ಮಾಡಿದ್ದಾರೆ. ಇವರ್ಯಾರೂ ಮೂಲ ಬಿಜೆಪಿಯವರೆಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಇವರಿಗೆ ಹಿಂದಿನ ಪಕ್ಷಾಂತರ ಪರ್ವಗಳ ನೆನಪಾಗುತ್ತಿಲ್ಲ ಎಂದೆನಿಸುತ್ತಿದೆ. ದಿ. ಎಚ್‌.ಎಸ್‌. ಮಹದೇವಪ್ರಸಾದ್‌ ರವರು ಕೂಡ ಪ್ರತಿ ಚುನಾವಣೆಗಳಲ್ಲೂ ಅನೇಕ ಪಕ್ಷಗಳನ್ನು ಬದಲಾಯಿಸಿದ್ದಾರೆ. ಇದರ ಅರಿವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್‌ ನಾಯಕರ ವರ್ತನೆ ಖಂಡಿಸಿ ಹಲವು ಮಂದಿ ಮುಖಂಡರು ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಂತವರಲ್ಲಿ ಸಮರ್ಥರನ್ನು ಗುರುತಿಸಿ ಚಾಮುಲ್‌ ಚುನಾವಣೆಯಲ್ಲಿ ಟಿಕೆಟ್‌ ನೀಡಿದ್ದೇವೆ ಹೊರತು ಒಂದು ದಿನವೂ ಪಕ್ಷದ ಕಾರ್ಯ ಕ್ರಮದಲ್ಲಿ ಭಾಗವಹಿಸದೆ ನಾನು ಮೂಲ ಬಿಜೆಪಿ ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿಗಳಿಗಲ್ಲ. ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದೆ ಇದೀಗ ಚುನಾವಣೆ ಬಂತು ಎಂದು ಪಕ್ಷ ನೆನಪಿಸಿಕೊಂಡರೆ ಏನು ಬಂತು?. ಇಷ್ಟು ದಿನ ಇವರಿಗೆ ಬಿಜೆಪಿ ನೆನಪಾಗಲಿಲ್ಲವೇ? ಎಂದು ವ್ಯಂಗ್ಯವಾಡಿದರು.

ಈಗಾಗಲೇ ಚಾಮುಲ್‌ ಚುನಾವಣೆಗಾಗಿ ಬಿಜೆಪಿಯಿಂದ ಅಧಿಕೃತವಾಗಿ ಕನ್ನೇಗಾಲ ಮಾದಪ್ಪ (ಸ್ವಾಮಿ) ಹಾಗೂ ಸುಜೀಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಈ ಮಧ್ಯೆ ಬಿಜೆಪಿ ಅಧಿಕೃತ ಅಭ್ಯರ್ಥಿ ಅಲ್ಲದಿದ್ದರೂ ತಮ್ಮ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಬಿಜೆಪಿ ಪ್ರಮುಖ ನಾಯಕರ ಭಾವಚಿತ್ರ ಹಾಕಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next