ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ಬತ್ತು ಎಂದು ಘೋಷಣೆಯಾದ ಬೆನ್ನಲ್ಲೇ ಹಿಂದೂ ಸಂಘಟನೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಚಾಮರಾಜಪೇಟೆಯಲ್ಲಿ ಉದ್ವಿಗ್ನ ಸ್ಥಿತಿ ಮಡುಗಟ್ಟಿದೆ.
ಈ ನಿರ್ಧಾರದಿಂದ ಉತ್ಸಾಹಗೊಂಡಿರುವ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ, ಬಿಬಿಎಂಪಿ ಅನುಮತಿ ಕೊಡಲಿ, ಬಿಡಲಿ ನಾವಂತೂ ಆಗಸ್ಟ್ ಹದಿನೈದರಂದು ಮೈದಾನದಲ್ಲಿ ಧ್ವಜ ಹಾರಿಸುತ್ತೇವೆ ಎಂದು ಘೋಷಣೆ ಮಾಡಿದೆ. ಅಷ್ಟು ಮಾತ್ರವಲ್ಲ ಈ ಬಾರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಲ್ಲಿಗೆ ಬಂದು ಧ್ವಜಾರೋಹಣ ಮಾಡಲಿ ಎಂದು ಆಹ್ವಾನ ನೀಡಿರುವುದು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆದರೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬ ತೀರ್ಪು ಬಿಬಿಎಂಪಿ ಪ್ರಕಟಿಸಿದ ನಂತರ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾನುವಾರ ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ಮುಸ್ಲಿಂ ಸಮುದಾಯದ ಮುಖಂಡರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನ ಸುತ್ತಮುತ್ತ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ.
ಇದನ್ನೂ ಓದಿ:ಕರಾವಳಿಯಲ್ಲಿ ಉತ್ತಮ ಮಳೆ ; 2 ದಿನ “ಆರೆಂಜ್ ಅಲರ್ಟ್’, ಮೀನುಗಾರರಿಗೆ ಎಚ್ಚರಿಕೆ
ಚಾಮರಾಜಪೇಟೆ ಮೈದಾನದವನ್ನು ನಾವು ಆಟದ ಮೈದಾನವಾಗಿಯೇ ನಾವು ಉಳಿಸಿಕೊಳ್ಳುತ್ತೇವೆ. ಇದಕ್ಕೆ ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ಹೆಸರಿಡುವಂತೆ ವೇದಿಕೆ ಒತ್ತಾಯಿಸಿದೆ.