Advertisement

ಉತ್ತರ ಕನ್ನಡದ ನಂಟು ಹೊಂದಿದ್ದರು ಚಂಪಾ

06:19 PM Jan 10, 2022 | Team Udayavani |

ಶಿರಸಿ: ಹಿರಿಯ ಸಾಹಿತಿ, ಸಂಕ್ರಮಣದ‌ ಮೂಲಕ ಜಿಲ್ಲೆಯ ಯುವ ಸಾಹಿತಿಗಳಲ್ಲೂ ಚಿರಪರಿಚಿತ ರಾಗಿದ್ದ ಚಂದ್ರಶೇಖರ ಪಾಟೀಲರ ಅಗಲಿಕೆ ಜಿಲ್ಲೆಯ ಪಾಲಿಗೆ ಸಹೃದಯ ಸಾಹಿತಿ ಒಬ್ಬರನ್ನು ಕಳೆದುಕೊಂಡಂತಾಗಿದೆ.

Advertisement

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವ ಮುನ್ನವೂ ಒಡನಾಟದಲ್ಲಿದ್ದ ಚಂಪಾ ವರ್ಷಕ್ಕೆ ಎರಡಕ್ಕೂ ಅಧಿಕ ಸಾಹಿತ್ಯದ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದರು. ಸರಳತೆ, ನೇರ ಮಾತು, ಬಂಡಾಯದ ಧ್ವನಿ ಯಲ್ಲೇ ಮಾತನಾಡುವ ಚಂಪಾ ಅವರು ಮಾತೃ ಹೃದಯಿ ಕೂಡ ಹೌದು.
ಜಿಲ್ಲೆಯ ಹಿಂದಿ ಕವಿ ಧರಣೇಂದ್ರ ಕುರಕುರಿ, ರೋಹಿದಾಸ ನಾಯಕ ಸೇರಿದಂತೆ ಅನೇಕರ ನಿಕಟ ಒಡನಾಟ ಹೊಂದಿದ್ದವರು. ಕನ್ನಡದ ಚಳುವಳಿ, ಬನವಾಸಿ, ದೇವಭಾಗ ಬೀಚ್ ನಂತಹ ಸ್ಥಳಗಳ ಬಗ್ಗೆ‌ ಮಮತೆ ಹೊಂದಿದ್ದರು. ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಆದಾಗ ಅವರಿಗೆ ನೀಡಲಾಗಿದ್ದ ಅತ್ಯಂತ ಶ್ರೇಷ್ಠ ಪ್ರಶಸ್ತಿ ಪಂಪ ಪ್ರಶಸ್ತಿಯನ್ನು ಸರಕಾರಕ್ಕೆ ವಾಪಸ್ ಮಾಡಿದ್ದರು.

ಚಂಪಾ ಒಡನಾಡಿ, ಧರಣೇಂದ್ರ‌ ಕುರಕುರಿ ಅವರೊಂದಿಗಿನ ನೆನಪು ಬಿಚ್ಚಿಕೊಂಡಿದ್ದು ಹೀಗೆ

೨೦೨೦ ರ ಜನೇವರಿ ೨೯ ರ ಬೆಳಿಗ್ಗೆ ಬೆಂಗಳೂರಿನ ನನ್ನ ಮಗನ ಮನೆಯಿಂದ ಚಂಪಾ ಅವರಿಗೆ ಫೋನ್ ಮಾಡಿದೆ. ಬೆಂಗಳೂರಿಗೆ ಹೋದ ದಿನವೇ ಮೊದಲು ಅವರಿಗೆ ಭೇಟಿಯಾಗಿಯೆ ಮುಂದಿನ ಕೆಲಸಕ್ಕೆ ತೊಡಗುವುದು ರೂಢಿಯಾಗಿತ್ತು. ಅವರು ಬೆಳಿಗ್ಗೆ ಬಿದ್ದು ಪೆಟ್ಟಾಗಿದೆ, ಕೋಣನಕುಂಟೆಯ ಅಸ್ತ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದರು. ತಕ್ಷಣ ಆಸ್ಪತ್ರೆಗೆ ಓಡಿದೆ. ಅವರ ಗನ್ ಮ್ಯಾನ್ ಶಿವರಾಜಗೌಡ ಇದ್ದರು. ಎಲ್ಲ ವಿಷಯ ಹೇಳಿದರು. ಅಂದೇ ಅವರಿಗೆ ಆಪರೇಶನ್ ಆಯಿತು. ಮಾರನೆ ದಿನ ಬೆಂಗಳೂರಿಗೆ ಬಂದಿದ್ದ ಲಕ್ನೋದ ಅವರ ಅಭಿಮಾನಿ ಹಿಂದಿ ಕನ್ನಡದಲ್ಲಿ ರಾಮಕಿಶೋರ್ ಅವರೊಂದಿಗೆ ಐಸಿಯುನಲ್ಲಿದ್ದ ಅವರನ್ನು ನೋಡಿಕೊಂಡು, ಒಂದು ತಾಸು ಅವರೊಂದಿಗಿದ್ದು ಬಂದೆ. ಅವರೊಂದಿಗೆ ಮಾತನಾಡಿದ ಆಪ್ತ ಮಾತುಕತೆ ಅದೇ ಕೊನೆಯದು. ಆ ನಂತರ ಎರಡು ಸಲ ಅವರನ್ನು ನೋಡಲು ಹೋದೆ. ಆದರೆ ನಡೆದಾಡದ ಸ್ಥಿತಿಯಲ್ಲಿದ್ದುದನ್ನು ಕಂಡು ಬಹಳ ನೋವಾಯಿತು.ಅವರೊಂದಿಗೆ ಕಳೆದ ಅನೇಕ ಕ್ಷಣಗಳು ಅಮೂಲ್ಯ. ನಾಡು, ನುಡಿಯ ಬಗ್ಗೆ ಅವರಿಗೆ ಕಾಳಜಿ ಅಪಾರವಾದ ಕಾಳಜಿ ಇತ್ತು. ಡಾ. ಕಲಬುರ್ಗಿ ಅವರ ಹತ್ಯೆಯಾದಾಗ ತಕ್ಷಣ ಪಂಪ ಪ್ರಶಸ್ತಿಯನ್ನು ತಿರುಗಿಸಿದರು. “ಸಂಕ್ರಮಣ” ಪತ್ರಿಕೆಯನ್ನು ನಿರಂತರವಾಗಿ ಅರ್ಧ ಶತಮಾನ ನಡೆಸಿದ ಶ್ರೇಯ ಅವರದು. “ಸಂಕ್ರಮಣ” ದ ಎಲ್ಲ ಸಂಚಿಕೆಗಳನ್ನು ಸೇರಿ ಹತ್ತು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡು ಈಗಾಗಲೇ ನಾಲ್ಕು ಸಂಪುಟಗಳನ್ನು ಪ್ರಕಟಿಸಿದ್ದರು. ಸಂಕ್ರಮಣದ ಮುಖಾಂತರ ಅನೇಕ ಹೊಸ ಬರಗಾರರಿಗೆ ಪ್ರೋತ್ಸಾಹ ನೀಡಿದರು. ಅದ್ಭುತ ಪ್ರತಿಭೆಯನ್ನು ಹೊಂದಿದ್ದ ಚಂಪಾ ಅವರು ಇನ್ನಿಲ್ಲ ಎನ್ನುವುದು ಕನ್ನಡ ನಾಡಿಗೆ ತುಂಲಾರದ ನಷ್ಟ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು ಎಂದು ಭಾವುಕರಾಗುತ್ತಾರೆ.

ಲೇಖಕರು, ಪ್ರಾಧ್ಯಾಪಕರು, ಸಂಘಟಕರು, ಪತ್ರಕರ್ತರು ಹಾಗೂ ಕನ್ನಡ ನಾಡಿನ ಹಿರಿಯ ಚೇತನ, ಪ್ರೊ. ಚಂದ್ರಶೇಖರ ಪಾಟೀಲ್ ಅವರ ಅಗಲಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಂಬನಿ‌ ಮಿಡಿದಿದ್ದಾರೆ.

Advertisement

ಪ್ರೊ.ಚಂದ್ರಶೇಖರ ಪಾಟೀಲ್ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದರು. ಕನ್ನಡ ನಾಡು ನುಡಿ ವಿಚಾರಗಳು ಬಂದಾಗ ಮುಂಚೂಣಿಯಲ್ಲಿ ನಿಂತು ಕನ್ನಡ ಪರ ಹೋರಾಟಗಳ ಭಾಗವಾಗುತ್ತಿದ್ದರು.ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯವ್ಯಾಪಿ ವಿಸ್ತರಿಸುವಲ್ಲಿ ಮತ್ತು ಕನ್ನಡವನ್ನು ಜನರಿಗೆ ತಲುಪಿಸುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಬಣ್ಣಿಸಿದ್ದಾರೆ.
ಜಿಲ್ಲಾ ‌ಕಸಾಪ ಅಧ್ಯಕ್ಷ ಎನ್ಬಿ.ವಾಸರೆ, ಹಿರಿಯ ಸಾಹಿತಿ ಜಿ.ಸುಬ್ರಾಯ ಭಟ್ಟ ಬಕ್ಕಳ ಇತರರು ಸಂತಾಪ ಸೂಚಿಸಿದ್ದಾರೆ. ಚಂಪಾ ಅಗಲಿಕೆ ಉತ್ತರ ಕನ್ನಡದ ಅನೇಕ ಯುವ, ಹಿರಿ ಕವಿಗಳಿಗೂ ನೋವುಂಟಾಗಿದೆ.

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next