Advertisement

ನಾಡಿನೆಲ್ಲೆಡೆ ಇಂದು ಷಷ್ಠಿ ಸಂಭ್ರಮ

11:54 PM Nov 28, 2022 | Team Udayavani |

ಚಂಪಾ ಷಷ್ಠಿ ದಿನವಾದ ಮಂಗಳವಾರ ನಾಡಿನೆಲ್ಲೆಡೆ ಸ್ಕಂದ, ಷಣ್ಮುಖ, ಕಾರ್ತಿಕೇಯ, ಕುಮಾರ… ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವ ಶ್ರೀ ಸುಬ್ರಹ್ಮಣ್ಯನ ಪರ್ವ ದಿನ. ಸುಬ್ರಹ್ಮಣ್ಯನ ದೇಗುಲಗಳಲ್ಲಿ, ನಾಗಾರಾಧನೆಯ ತಾಣಗಳಲ್ಲೂ ಇಂದು ನಾಗನಿಗೆ ವಿಶೇಷ ಪೂಜೆ, ಸೇವೆಗಳು ನಡೆಯುತ್ತವೆ. ಷಷ್ಠಿ ಮಹೋತ್ಸವದ ಆಚರಣೆಗೆ ನಾಡಿನೆಲ್ಲೆಡೆಯ ಸುಬ್ರಹ್ಮಣ್ಯ ದೇಗುಲಗಳು ಮತ್ತು ನಾಗ ಕ್ಷೇತ್ರಗಳು ಸಜ್ಜಾಗಿವೆ.

Advertisement

ಷಷ್ಠಿ ಎಂದರೆ ಸಂಸ್ಕೃತದಲ್ಲಿ ಆರು (6) ಎಂದು ಅರ್ಥ. ಪಂಚಾಂಗದಲ್ಲಿ ಬರುವ ಹದಿನೈದು ತಿಥಿಗಳಲ್ಲಿ ಷಷ್ಠಿ ತಿಥಿಗೆ ತನ್ನದೇ ಆದ ಸ್ಥಾನಮಾನವಿದೆ. ಈ ತಿಥಿಯ ಅಧಿಪತಿ ಸ್ಕಂದ ಅಂದರೆ ಕಾರ್ತಿಕೇಯ. ಈತನನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿ ಕೀರ್ತಿವಂತನೂ ಪ್ರಸಿದ್ಧನೂ ಆಗುತ್ತಾನೆ ಎಂಬ ನಂಬಿಕೆಯಿದೆ. ಬುದ್ಧಿವಂತಿಕೆ ಕಡಿಮೆ ಇರುವ ಮಗು ಅಥವಾ ತೊದಲುವಿಕೆ ಕಡಿಮೆಯಿರುವ ಮಕ್ಕಳು ಕಾರ್ತಿಕೇಯನ ಆರಾಧನೆ ಮಾಡಿದಲ್ಲಿ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ.

ಸ್ಕಂದ ಪುರಾಣದಲ್ಲಿ ವಿವರಿಸಲಾದ ನಾರದ ವಿಷ್ಣು ಸಂವಾದದ ಪ್ರಕಾರ ಸ್ಕಂದ ಷಷ್ಠಿ ವ್ರತವನ್ನು ಆಚರಿಸುವುದರಿಂದ ನಮ್ಮ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗಿ ಬದುಕು ಹಗುರವಾಗುತ್ತದೆ ಎನ್ನುವ ನಂಬಿಕೆಯಿದೆ.

ಸಂತಾನ ಭಾಗ್ಯವಿಲ್ಲದವರು ಈ ವ್ರತದಿಂದ ಸಂತಾನ ಭಾಗ್ಯ ಪಡೆಯಬಹುದು ಎನ್ನುವ ನಂಬಿಕೆಯೂ ಇದೆ.

ದೇವ ಸೇನಾಪತೇ ಸ್ಕಂದ ಕಾರ್ತಿಕೇಯ ಭವೋದ್ಭವ |
ಕುಮಾರ ಗುಹ ಗಾಂಗೇಯ ಶಕ್ತಿ ಹಸ್ತೇ ನಮೋಸ್ತುತೇ||
ಈ ಮಂತ್ರವನ್ನು ಶ್ರದ್ಧಾ ಭಕ್ತಿಯಿಂದ ಕಾರ್ತಿಕೇಯನನ್ನು ಏಕ ಮನಸ್ಸಿನಿಂದ ಧ್ಯಾನಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ನಂಬಲಾಗಿದೆ.

Advertisement

ಈ ಸ್ಕಂದ ಷಷ್ಠಿಯೊಂದಿಗೆ ವಾಸುಕೀ ಮಹಾರಾಜನ ಆರಾಧನೆಯೂ ಪ್ರಚಲಿತದಲ್ಲಿದೆ. ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಸುಬ್ರಹ್ಮಣ್ಯನಿಗೆ ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಕರಾವಳಿಯಲ್ಲಿರುವ ಇತರ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಕೂಡ ಜನರು ಅಪಾರ ಭಕ್ತಿಯಿಂದ ಬೆಳ್ಳಿ ಹರಕೆ ಸಹಿತ ಇತರ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಸಂತಾನ ಪ್ರಾಪ್ತಿಗಾಗಿ ಬೆಳ್ಳಿ, ಚಿನ್ನದ ನಾಗನ ಪ್ರತಿಮೆಗಳನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ.

ತುಳುನಾಡಿನಲ್ಲಿ ಷಷ್ಠಿಯಂದು ಆಬಾಲ ವೃದ್ಧರಾದಿಯಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡುತ್ತಾರೆ. ಕೆಲವು ದೇವಾಲಯಗಳಲ್ಲಿ ಸಂತಾನ ಪ್ರಾಪ್ತಿಯಾದವರು ತುಲಾಭಾರ ಸೇವೆ ಮಾಡಿಸುತ್ತಾರೆ.

ನಾಗನ ಅಥವಾ ಸುಬ್ರಹ್ಮಣ್ಯನ ಆರಾಧನೆ ಎಂದರೆ ಪ್ರಕೃತಿಯ ಆರಾಧನೆ. ನಮ್ಮ ಪ್ರಾಚೀನರು ಯಾವುದೇ ಗುಡಿ ಗೋಪುರಗಳನ್ನು ದೇವರಿಗೆ ಕಟ್ಟದೆ ಕೇವಲ ಶಿಲೆ, ವೃಕ್ಷ ಜಲ ನೆಲಗಳಲ್ಲಿ ಭಗವದಾರಾಧನಾ ಕ್ರಮ ಅನುಸರಿಸಿದರು. ಎನ್ನುವುದು ನಮ್ಮ ಪರಂಪರಾಗತ ಆರಾಧನಾ ಕ್ರಮಗಳಿಂದ ತಿಳಿದು ಬರುತ್ತದೆ. ಷಷ್ಠಿ ಮತ್ತು ಪಂಚಮಿಯು ಜಾತಿ, ಮತ, ಧರ್ಮವನ್ನು ಮೀರಿದ ಹಬ್ಬ ಮತ್ತು ಧರ್ಮ ಸಮನ್ವಯತೆಯ ಹಬ್ಬವೆಂದರೆ ಅತಿಶಯವಾಗದು.

ಸಮಸ್ತ ಹಿಂದೂ ಬಾಂಧವರನ್ನು ಒಂದು ಗೂಡಿಸುವ ಈ ಹಬ್ಬ ನಾಡಿನ ಎಲ್ಲ ಜನರ ಸಂಕಷ್ಟ ಪರಿಹರಿಸುವ ಸುಬ್ರಹ್ಮಣ್ಯನ ಆರಾಧನೆಯಿಂದ ನಾಡು ಸಮೃದ್ಧವಾಗಲಿ. ಸಮಾಜದಲ್ಲಿ ಶಾಂತಿ ನೆಲೆಗೊಳ್ಳಲಿ ಎಂಬುದುವುದೇ ನಮ್ಮ ಹಾರೈಕೆ.

– ಅನಂತ ಪದ್ಮನಾಭ ಶಿಬರೂರು, ದೇಲಂತಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next