Advertisement

ಚಂಪಾಗೆ “ಬಸವಶ್ರೀ’ಪ್ರಶಸ್ತಿ ಪ್ರದಾನ

11:15 PM May 07, 2019 | Lakshmi GovindaRaj |

ಚಿತ್ರದುರ್ಗ: ಮಧ್ಯ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಇಲ್ಲಿನ ಮುರುಘಾ ಮಠದಿಂದ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ “ಬಸವಶ್ರೀ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ಡಾ| ಚಂದ್ರಶೇಖರ ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು.

Advertisement

ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು 2018ನೇ ಸಾಲಿನ ಈ ಪ್ರಶಸ್ತಿ ಪ್ರದಾನ ಮಾಡಿದರು.

“ಬಸವಶ್ರೀ ಪ್ರಶಸ್ತಿ’ ಮೊತ್ತ ಐದು ಲಕ್ಷ ರೂ. ಹಾಗೂ ಸ್ಮರಣಿಕೆ ನೀಡಿ ಚಂಪಾ ಅವರನ್ನು ಸನ್ಮಾನಿಸಲಾಯಿತು. ಮುರುಘಾಮಠ 1997 ರಿಂದ ಈ ಪ್ರಶಸ್ತಿ ನೀಡುತ್ತಿದ್ದು, ಈ ವರೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯ, ದೇಶ ಹಾಗೂ ಹೊರದೇಶದ ಅನೇಕ ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂಪಾ, ಕಳೆದ 53 ವರ್ಷಗಳಿಂದ ಸಾಹಿತ್ಯಕ್ಕೆ ಒತ್ತು ಕೊಟ್ಟು ಹೊರ ತರುತ್ತಿದ್ದ “ಸಂಕ್ರಮಣ’ ಮಾಸಪತ್ರಿಕೆ ಆರ್ಥಿಕ ಸಂಕಷ್ಟದಿಂದಾಗಿ ಸ್ಥಗಿತವಾಗುವ ಹಂತ ತಲುಪಿದೆ. ಈ ಪತ್ರಿಕೆಯ ಪುನಾರಂಭಕ್ಕೆ ಕನಿಷ್ಠ 20 ಲಕ್ಷ ರೂ. ಅಗತ್ಯವಿದೆ.

ಬಸವಶ್ರೀ ಪ್ರಶಸ್ತಿಯಿಂದ ಬಂದಿರುವ 5 ಲಕ್ಷ ರೂ.ಗಳನ್ನು “ಸಂಕ್ರಮಣ’ ಪತ್ರಿಕೆಯ ಪುನಾರಂಭಕ್ಕೆ ಬಳಸಲಾಗುತ್ತದೆ. ಉಳಿದ 15 ಲಕ್ಷ ರೂ.ಗಳನ್ನು ಓದುಗರು, ದಾನಿಗಳು ವ್ಯವಸ್ಥೆ ಮಾಡಿದರೆ ಅದರಿಂದ ಬರುವ ಬಡ್ಡಿ ಹಣದಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದಾಗಿ’ ತಿಳಿಸಿದರು.

Advertisement

ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ರೆವರೆಂಡ್‌ ಫಾದರ್‌ ಟಿ.ಡಿ. ಥಾಮಸ್‌, ಜುನೈದ್‌ ಸಖಾಫಿ, ವೆಂಕಟೇಶ್‌ ಲಾಡ್‌ ಮತ್ತಿತರರು ಇದ್ದರು.

ಮುರುಘಾ ಶರಣರು ಪ್ರತ್ಯೇಕ ಧರ್ಮ ಚಳವಳಿ ನೇತೃತ್ವ ವಹಿಸಲಿ: ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿಯ ನೇತೃತ್ವವನ್ನು ಮುರುಘಾ ಶರಣರು ವಹಿಸಬೇಕು ಎಂದು ಚಂಪಾ ಹೇಳಿದರು. ಎಂ.ಎಂ. ಕಲುºರ್ಗಿ, ಮಾತೆ ಮಹಾದೇವಿ ಮತ್ತಿತರರು ಕಾಲವಾಗಿದ್ದಾರೆ. ಆದ್ದರಿಂದ ಈಗ ಮುರುಘಾ ಶರಣರು ಚಳವಳಿಯ ನೇತೃತ್ವ ವಹಿಸುವುದು ಅನಿವಾರ್ಯ.

ಏಕೆಂದರೆ ಕೆಲವು ರಾಜಕಾರಣಿಗಳು ಮತ್ತು ಸಾಹಿತಿಗಳು ವಿಶ್ವಾಸ ಕಳೆದುಕೊಂಡಿದ್ದಾರೆ. ಬಸವ ಧರ್ಮ ಕರ್ನಾಟಕದ ಮೊದಲ ಸ್ವತಂತ್ರ ಧರ್ಮ. ಆದ್ದರಿಂದ ಇದನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಚಂಪಾ ಇದೇ ವೇಳೆ ಪ್ರತಿಪಾದಿಸಿದರು.

ಬಸವಶ್ರೀ ನಾನು ಪಡೆದುಕೊಂಡ ಪ್ರಶಸ್ತಿಯೇ ವಿನಃ ಹೊಡೆದುಕೊಂಡ ಪ್ರಶಸ್ತಿ ಅಲ್ಲ. ಇದು ಮುರುಘಾ ಶರಣರ ಮೂಲಕ ಬಸವಣ್ಣ ನನಗೆ ನೀಡಿದ ಪ್ರಶಸ್ತಿ ಎಂದು ಭಾವಿಸಿದ್ದೇನೆ. ಕೆಲವರು ಪ್ರಶಸ್ತಿಗಳನ್ನು ತಾವಾಗಿಯೇ ಪಡೆಯುವುದಿಲ್ಲ, ಹೊಡೆದುಕೊಳ್ಳುತ್ತಾರೆ. ಆದರೆ ನನ್ನದು ಪಡೆದುಕೊಂಡ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆ ಎನ್ನಿಸುತ್ತದೆ.
-ಡಾ.ಚಂದ್ರಶೇಖರ ಪಾಟೀಲ

ಕನ್ನಡ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಚಂಪಾ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ.
-ಡಾ. ಶಿವಮೂರ್ತಿ ಮುರುಘಾ ಶರಣರು.

Advertisement

Udayavani is now on Telegram. Click here to join our channel and stay updated with the latest news.

Next