ನೀನಾಸಂ ಸತೀಶ್ ಅಭಿನಯದ ‘ಚಂಬಲ್’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಖಡಕ್ IAS ಅಧಿಕಾರಿಯ ಹೋರಾಟದ ಕಥೆಯನ್ನು ಈ ಚಿತ್ರ ಹೊಂದಿರುವ ಹಿಂಟ್ ಲಭಿಸಿದೆ. ಈ ಟ್ರೈಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಮತ್ತು ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.
ಜನವರಿ 31ರಂದು ಬಿಡುಗಡೆಗೊಂಡಿರುವ ‘ಚಂಬಲ್’ ಟ್ರೈಲರ್ ಅನ್ನು ಈಗಾಗಲೇ ಒಂದೂವರೆ ಲಕ್ಷ ಜನ ವೀಕ್ಷಿಸಿದ್ದಾರೆ. ನೀನಾಸಂ ಸತೀಶ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರದಲ್ಲಿ ಸೋನು ಗೌಡ, ರೋಜರ್ ನಾರಾಯಣನ್, ಕಿಶೋರ್, ಸರ್ದಾರ್ ಸತ್ಯ, ಪವನ್ ಕುಮಾರ್, ಅಚ್ಯುತ್ ಕುಮಾರ್ ಸೇರಿದಂತೆ ಇನ್ನಿತರರು ನಟಿಸಿದ್ದಾರೆ. ಜಾಕೊಬ್ ವರ್ಗೀಸ್ ಅವರು ಈ ಚಿತ್ರದ ರೂವಾರಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಅವರ ಸಂಗೀತ ಈ ಚಿತ್ರಕ್ಕಿದೆ. ಶಶಿಕುಮಾರ್ ಡಿ. ಅವರ ಕೆಮಾರ ಕೈಚಳಕದಲ್ಲಿ ದೃಶ್ಯಗಳು ರೋಮಾಂಚಕವಾಗಿ ಮೂಡಿಬಂದಿವೆ.
ಇಂದಿನವರೆಗೂ ನಿಗೂಢವಾಗಿರುವ ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ವಿಷಯ ‘ಚಂಬಲ್’ ಚಿತ್ರದಲ್ಲಿ ಮೂಡಿಬಂದಿದೆಯೋ ಅನ್ನುವ ಸಂಶಯ ಈ ಚಿತ್ರದ ಟ್ರೈಲರ್ ಅನ್ನು ನೋಡುವಾಗ ಮೂಡುತ್ತದೆ. ಟ್ರೈಲರ್ ನಲ್ಲಿ ನೀನಾಸಂ ಸತೀಶ್ ಅವರು ಖಡಕ್ IAS ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಖಚಿತವಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯ ನಂತರವಷ್ಟೇ ಈ ಎಲ್ಲಾ ಸಂಶಯಗಳಿಗೆ ಉತ್ತರ ಸಿಗಲಿದೆ.