Advertisement

ಪಟ್ಟು ಸಡಿಲಿಸದ ಚಾಮರಿ ಅತಪಟ್ಟು : ಅಂತಿಮ ಪಂದ್ಯದಲ್ಲಿ ಎಡವಿದ ಭಾರತ

11:45 PM Jun 27, 2022 | Team Udayavani |

ಡಂಬುಲ: ನಾಯಕಿ ಚಾಮರಿ ಅತಪಟ್ಟು ಅವರ ಅಜೇಯ 80 ರನ್ನುಗಳ ಬ್ಯಾಟಿಂಗ್‌ ಸಾಹಸದಿಂದ ಶ್ರೀಲಂಕಾ ಟಿ20 ಸರಣಿಯಲ್ಲಿ ವೈಟ್‌ವಾಶ್‌ ಸಂಕಟದಿಂದ ಪಾರಾಗಿದೆ.

Advertisement

ಸೋಮವಾರದ 3ನೇ ಹಾಗೂ ಕೊನೆಯ ಮುಖಾಮುಖಿಯಲ್ಲಿ ಲಂಕಾ ವನಿತೆಯರು ಭಾರತವನ್ನು 7 ವಿಕೆಟ್‌ಗಳಿಂದ ಮಣಿಸಿ ಒಂದಿಷ್ಟು ಗೌರವ ಸಂಪಾದಿಸಿದರು. ಮೊದ ಲೆರಡೂ ಪಂದ್ಯಗಳನ್ನು ಜಯಿಸಿದ್ದ ಭಾರತ 2-1ರಿಂದ ಸರಣಿ ಮೇಲೆ ಹಕ್ಕು ಚಲಾಯಿಸಿತು.

ಈ ಪಂದ್ಯದಲ್ಲೂ ಎವರೇಜ್‌ ಮೊತ್ತವೇ ದಾಖಲಾಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಗಳಿಸಿದ್ದು 5 ವಿಕೆಟಿಗೆ 138 ರನ್‌. ಜವಾಬಿತ್ತ ಶ್ರೀಲಂಕಾ ಇನ್ನೂ 3 ಓವರ್‌ ಉಳಿದಿರುವಂತೆಯೇ 141 ರನ್‌ ಬಾರಿಸಿ ಜಯ ಗಳಿಸಿತು.

ಭಾರತ ಮೊದಲ ಪಂದ್ಯದಲ್ಲೂ 138 ರನ್‌ (6 ವಿಕೆಟ್‌) ಮಾಡಿತ್ತು. ಅಲ್ಲಿ ಲಂಕೆಯನ್ನು 34 ರನ್ನುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಭಾರತದ ಬೌಲರ್ ಆಟ ನಡೆಯಲಿಲ್ಲ.

2 ಸಾವಿರ ರನ್‌ ಸಾಧನೆ: ನಾಯಕಿ ಹಾಗೂ ಓಪನರ್‌ ಚಾಮರಿ ಅತಪಟ್ಟು ಅಜೇಯ 80 ರನ್‌ ಬಾರಿಸಿ ತಂಡವನ್ನು ನಿರಾಯಾಸವಾಗಿ ದಡ ತಲುಪಿಸಿದರು. ಅವರ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

Advertisement

ಈ ಬ್ಯಾಟಿಂಗ್‌ ವೈಭವದ ವೇಳೆ ಚಾಮರಿ ಅತಪಟ್ಟು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಸಾವಿರ ರನ್‌ ಪೂರೈಸಿದ ಶ್ರೀಲಂಕಾದ ಮೊದಲ ಕ್ರಿಕೆಟರ್‌ ಎನಿಸಿದರು. ಇಲ್ಲಿನ ಪುರುಷರಿಂದಲೂ ಈ ಮೈಲುಗಲ್ಲು ದಾಖಲಾಗಿಲ್ಲ ಎಂಬುದು ಉಲ್ಲೇಖನೀಯ. 1,889 ರನ್‌ ಮಾಡಿದ ತಿಲಕರತ್ನೆ ದಿಲ್ಶನ್‌ ಅವರದೇ ಹೆಚ್ಚಿನ ಗಳಿಕೆ.

ಭಾರತ ಒಟ್ಟು 7 ಬೌಲರ್‌ಗಳನ್ನು ದಾಳಿಗೆ ಇಳಿಸಿದರೂ ಅತಪಟ್ಟು ಮಾತ್ರ ಪಟ್ಟು ಸಡಿಲಿಸದೆ ಹೋರಾಡಿದರು. ಅವರಿಗೆ ನೀಲಾಕ್ಷಿ ಡಿ ಸಿಲ್ವ ಉತ್ತಮ ಬೆಂಬಲ ನೀಡಿದರು. ನೀಲಾಕ್ಷಿ ಗಳಿಕೆ 28 ಎಸೆತಗಳಿಂದ 30 ರನ್‌ (4 ಬೌಂಡರಿ).
ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 33 ಎಸೆತಗಳಿಂದ ಸರ್ವಾಧಿಕ 39 ರನ್‌ ಹೊಡೆದರು. ಈ ಅಜೇಯ ಇನ್ನಿಂಗ್ಸ್‌ನಲ್ಲಿ 3 ಫೋರ್‌ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಜೆಮಿಮಾ ರೋಡ್ರಿಗಸ್‌ 30 ಎಸೆತಗಳಿಂದ 33 ರನ್‌ (3 ಬೌಂಡರಿ), ಸ್ಮತಿ ಮಂಧನಾ ಮತ್ತು ಎಸ್‌. ಮೇಘನಾ ತಲಾ 22 ರನ್‌ ಮಾಡಿದರು. ಕೌರ್‌, ಜೆಮಿಮಾ ಮತ್ತು ಪೂಜಾ ವಸ್ತ್ರಾಕರ್‌ (ಅಜೇಯ 13) ಸೇರಿಕೊಂಡು ಕೊನೆಯ 5 ಓವರ್‌ಗಳಲ್ಲಿ 49 ರನ್‌ ಒಟ್ಟುಗೂಡಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-5 ವಿಕೆಟಿಗೆ 138 (ಕೌರ್‌ ಔಟಾಗದೆ 39, ಜೆಮಿಮಾ 33, ಮಂಧನಾ 22, ಮೇಘನಾ 22, ರಣಸಿಂಘೆ 31ಕ್ಕೆ 1). ಶ್ರೀಲಂಕಾ-17 ಓವರ್‌ಗಳಲ್ಲಿ 3 ವಿಕೆಟಿಗೆ 141 (ಅತಪಟ್ಟು ಔಟಾಗದೆ 80, ನೀಲಾಕ್ಷಿ 30, ರೇಣುಕಾ 27ಕ್ಕೆ 1).

ಪಂದ್ಯಶ್ರೇಷ್ಠ: ಚಾಮರಿ ಅತಪಟ್ಟು.
ಸರಣಿಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next