Advertisement

Chamarajnagara; ಧರ್ಮ ಆಧಾರಿತ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿದೆ: ಸಿಎಂ ಸಿದ್ದರಾಮಯ್ಯ

03:23 PM Mar 12, 2024 | Team Udayavani |

ಚಾಮರಾಜನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಎ ಅನ್ನು ಕೇಂದ್ರ ಜಾರಿ ಮಾಡಿದೆ. ಅಷ್ಟು ದಿನಗಳಿಂದ ಸುಮ್ಮನಿದ್ದು, ಈಗ ಜಾರಿ ಮಾಡುವ ಉದ್ದೇಶವೇನು? ಧರ್ಮ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಹೆಗ್ಗವಾಡಿ ಗ್ರಾಮದಲ್ಲಿ ಧ್ರುವನಾರಾಯಣ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂವಿಧಾನ ಬದಲಾವಣೆ ಮಾಡಬೇಕೆಂಬುದು ಬಿಜೆಪಿಯ ಹಿಡನ್ ಅಜೆಂಡಾ. ಅದನ್ನು ಅನಂತಕುಮಾರ್ ಹೆಗಡೆಯಿಂದ ಹೇಳಿಸಿದ್ದಾರಷ್ಟೆ. ಆತ ಸಾಮಾನ್ಯ ವ್ಯಕ್ತಿಯೇ? ಒಬ್ಬ ಸಂಸದನಾಗಿ ಈ ರೀತಿ ಹೇಳಿಕೆ ನೀಡಿದಾಗ ಪಕ್ಷ ಮೌನ ವಹಿಸುವುದೇಕೆ? ಈ ಹಿಂದೆಯೂ ಆತ ಇದೇ ಹೇಳಿಕೆ ನೀಡಿದಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅದರ ಅರ್ಥ ಏನು ಎಂದು ಪ್ರಶ್ನಿಸಿದರು.

ಪ್ರತಾಪ್ ಸಿಂಹಗೆ ಟಿಕೆಟ್ ಸಿಗಲ್ಲ ಎಂಬ ವಿಚಾರ ನಮಗೆ ತಿಳಿದಿಲ್ಲ. ಯದುವೀರ್ ಗೆ ಟಿಕೆಟ್ ಕೊಡುತ್ತಾರೆ ಎಂಬ ವಿಚಾರವೂ ಗೊತ್ತಿಲ್ಲ. ಇ‌ನ್ನೂ ಘೋಷಣೆ ಆಗಬೇಕಲ್ಲವೇ ಎಂದು ಪ್ರತಿಕ್ರಿಯಿಸಿದರು‌.

ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ನಾನು ಗೆದ್ದರೆ ಸಿಎಂ ಸೀಟು ಅಲುಗಾಡುತ್ತದೆ ಎಂಬ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿಸಲು ಸಂಚು ನಡೆಯುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಎರಡು ಬಾರಿ ಸಂಸದನಾಗಿದ್ದಾಗ ಯಾಕೆ ಸಿಎಂ ಸೀಟು ಅಲುಗಾಡಲಿಲ್ಲ, ಹೊಂದಾಣಿಕೆಯೂ ಇಲ್ಲ ಎಂಥದ್ದೂ ಇಲ್ಲ.‌ ಆ ಬಗ್ಗೆ ನಮಗೇ‌ನು ತಿಳಿದಿಲ್ಲ ಎಂದರು.

Advertisement

ಧ್ರುವನಾರಾಯಣ ಜನಪ್ರಿಯತೆ ಬೆಳೆಯುತ್ತಿದೆ: ಚಾಮರಾಜನಗರ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರು ಮಾದರಿ ಜನನಾಯಕರಾಗಿದ್ದರು. ಕಾಲಾನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ ಎಂದು ಸಿ.ಎಂ. ಸಿದ್ದರಾಮಯ್ಯ ಸ್ಮರಿಸಿದರು.

ಧ್ರುವನಾರಾಯಣ್ ಅವರ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿ ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿ ನಿರಂತರ ಪ್ರಯತ್ನ ಮಾಡಿದ್ದ ಧ್ರುವನಾರಾಯಣ್ ಅವರು ಜನರ ಮಧ್ಯ ಓಡಾಡದ ದಿನವೇ ಇಲ್ಲ. ಇವರದ್ದು ಜನಪರ ರಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ. ಕಾಂಗ್ರೆಸ್ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ಅವರು ವಿದ್ಯಾರ್ಥಿ ಕಾಂಗ್ರೆಸ್ ಅವಧಿಯಿಂದ ಪಕ್ಷದ ಕಾರ್ಯಾಧ್ಯಕ್ಷರಾಗುವವರೆಗೂ ಬೆಳೆದರು. ಶಾಸಕರಾಗಿ, ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಹೀಗಾಗಿ ಇವರ ಅಗಲಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದರು.

ಅಜಾತಶತ್ರುವಾಗಿದ್ದ ಧ್ರುವನಾರಾಯಣ್ ಅವರ ವ್ಯಕ್ತಿತ್ವವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ್ ಅವರೂ ಹೊಂದಿದ್ದು ಜನಪರತೆ ಬೆಳೆಸಿಕೊಂಡಿದ್ದಾರೆ. ಇವರಿಗೆ ನಾನು ಸಂಪೂರ್ಣ, ಸಹಕಾರ, ಬೆಂಬಲ ನೀಡುತ್ತೇನೆ ಎಂದರು.

ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅತ್ಯಗತ್ಯ. ಧ್ರುವನಾರಾಯಣ್ ಅವರಿಗೆ ಇವೆರಡೂ ಇತ್ತು. ಸಮಾಜದ ಅಸಮಾನತೆ ಅಳಿಸಲು, ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಧ್ರುವನಾರಾಯಣ್ ಅಪಾರವಾದ ನಂಬಿಕೆ, ಗೌರವ ಹೊಂದಿದ್ದರು. ಈಗ ಈ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವೂ ನೀವೂ ಉಳಿಯುತ್ತೇವೆ ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ ಮಾದು, ರವಿಶಂಕರ್, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಸೇರಿ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರು, ಮುಖಂಡರು ಮತ್ತು ಜಿಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next