ಚಾಮರಾಜನಗರ: ಯಾವುದೇ ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ 45 ಲಕ್ಷ ರೂ. ನಗದು ಹಣವನ್ನು ಪೂರ್ವ ಠಾಣೆ ಪೊಲೀಸರು ಮಂಗಳವಾರ ತಾಲೂಕಿನ ಪುಣಜನೂರು ಚೆಕ್‌ಪೋಸ್ಟ್ ನಲ್ಲಿ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳದ ಎರ್ನಾಕುಲಂ ನಿವಾಸಿ ಸಜಿ (56) ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಪುಣಜನೂರು ಚೆಕ್ ಪೋಸ್‌ಟ್ ನಲ್ಲಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರ ನೇತೃತ್ವದಲ್ಲಿ ಇನ್‌ಸ್ ಪೆಕ್ಟರ್ ಆರ್. ಶ್ರೀಕಾಂತ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಈ ಹಣ ಪತ್ತೆಯಾಗಿದೆ.
ಚುನಾವಣಾ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಅಂತಾರಾಜ್ಯ, ಅಂತರ ಜಿಲ್ಲಾ ಚೆಕ್ ಪೋಸ್‌ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅದರಂತೆ ತಪಾಸಣೆ ನಡೆಸಿದಾಗ, ಕೇರಳದ ಉದ್ಯಮಿಯ ಕಾರಿನ ಸೀಟ್ ಮೂರು ಬಂಡಲ್ ಗಳಲ್ಲಿ ನಗದು ಹಣ ಪತ್ತೆಯಾಗಿದೆ. 500 ರೂ. ಮುಖಬೆಲೆಯ 90 ಬಂಡಲ್ ಗಳಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು.
Related Articles
ತಾನು ಅರಿಶಿಣ ಖರೀದಿ ಉದ್ಯಮಿಯಾಗಿದ್ದು ಕೇರಳದ ಪಾಲಕ್ಕಾಡ್ ನಿಂದ ಗುಂಡ್ಲುಪೇಟೆಗೆ ಅರಿಶಿನ ಖರೀದಿಸಲು ಈ ಹಣ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಸಜಿ ತಿಳಿಸಿದ್ದಾರೆ. ಆದರೆ ಯಾವುದೇ ಬಿಲ್ ದಾಖಲೆ ಇಲ್ಲದ ಕಾರಣ ಪೊಲೀಸರು ಆರೋಪಿಯನ್ನು ಬಂಧಿಸಿ, ಬಿಡುಗಡೆ ಮಾಡಿದರು. ಆ ವ್ಯಕ್ತಿ ಹೇಳಿರುವ ಹಣದ ಬಗೆಗಿನ ಮಾಹಿತಿಯ ನೈಜತೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪಿಐ ಶ್ರೀಕಾಂತ್ ತಿಳಿಸಿದರು.
ಪಿಎಸ್‌ಐ ಮಂಜುನಾಥ್ ಪ್ರಸಾದ್, ಮುಖ್ಯಪೇದೆ ಗಳಾದ ಬಸವಣ್ಣ, ಮಹದೇವಸ್ವಾಮಿ, ಪೇದೆಗಳಾದ ಬಸವರಾಜು ನಂದಕುಮಾರ್ ಚಾಲಕರಾದ ಮಹದೇವಸ್ವಾಮಿ ಗೋಪಾಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.