Advertisement

ಆಕ್ಸಿಜನ್ ದುರಂತ ಪ್ರಕರಣ : ತಾರ್ಕಿಕ ಅಂತ್ಯ ಕಾಣಿಸುವವರೆಗೂ ಬಿಡಲ್ಲ : ಎಸ್‌ಡಿಪಿಐ

10:40 PM Jun 11, 2021 | Team Udayavani |

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2 ರ ರಾತ್ರಿ ಆಕ್ಸಿಜನ್ ದೊರಕದೇ 36ಕ್ಕೂ ಹೆಚ್ಚು ಮಂದಿ ಮೃತರಾಗಿರುವ ಘಟನೆಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ. ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ. ಸಂತ್ರಸ್ತರೊಡನೆ ನಿಂತು ಅವರಿಗೆ ನ್ಯಾಯ ದೊರಕಿಸುವವರೆಗೂ ಎಸ್‌ಡಿಪಿಐ ಹೋರಾಟ ನಡೆಸುತ್ತದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಮುಗಿದ ನಂತರ ಜಿಲ್ಲಾಧಿಕಾರಿ ಕಚೇರಿಯವರ ಮುಂದೆ ಇದರ ಬಗ್ಗೆ ಅನಿರ್ದಿಷ್ಟ ಕಾಲ ಪ್ರತಿಭಟನೆ ನಡೆಸುತ್ತೇವೆ. ಇಲ್ಲೂ ನ್ಯಾಯ ದೊರಕದಿದ್ದರೆ ಸಂತ್ರಸ್ತರನ್ನು ರಾಜಭವನಕ್ಕೆ ಕರೆದೊಯ್ದು ಹೋರಾಟ ನಡೆಸುತ್ತೇವೆ. ಇದಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

10 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಜನರು ಇದನ್ನು ಪ್ರಶ್ನಿಸದೇ ಸುಮ್ಮನಿದ್ದೀರಿಲ್ಲ? ನಿಮ್ಮ ಮನೆಯಲ್ಲಿ ನಡೆದಿದ್ದರೆ ಸುಮ್ಮನಿರುತ್ತಿದ್ದಿರಾ? ಜಿಲ್ಲಾ ಉಸ್ತುವಾರಿ ಸುಭಗನಂತೆ ಪೋಸ್ ಕೊಡುತ್ತಾರೆ. ಶಿಕ್ಷಣ ಸಚಿವರಾಗಿ ಇವರು ಮಕ್ಕಳಿಗೆ ಎಂಥ ಸಂದೇಶ ನೀಡುತ್ತಿದ್ದಾರೆ. ಇಂಥದೊಂದು ಘೋರ ಘಟನೆ ನಡೆದ ಬಳಿಕ ಅದರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಇವರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ವಿರೋಧ ಪಕ್ಷ ಎಲ್ಲಿದೆ? ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಒಂದು ದಿನ ಪ್ರೆಸ್‌ಮೀಟ್ ಮಾಡಿದರೆ ಮುಗಿತಾ? ಮಾಜಿ ಸಂಸದ ಧ್ರುವನಾರಾಯಣ ಎಲ್ಲಿದ್ದೀರಿ? ಜನರ ಜೊತೆ ನಿಲ್ಲಬೇಡವೇ?ಆಡಳಿತ ಪಕ್ಷ ವಿರೋಧ ಪಕ್ಷ ಹೊಂದಾಣಿಕೆ ಮಾಡಿಕೊಂಡು ಅಡ್‌ಜ್ಸ್‌ಟ್ಮೆಂಟ್ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಘಟನೆಗೆ ಕಾರಣರಾಗಿರುವ ಜಿಲ್ಲಾಧಿಕಾರಿ, ಸಿಮ್‌ಸ್ ಡೀನ್, ಜಿಲ್ಲಾ ಸರ್ಜನ್ ಎಲ್ಲರನ್ನೂ ಸಸ್ಪೆಂಡ್ ಮಾಡಬೇಕು ಎಂದ ಅವರು, ಮೇ 2 ಮತ್ತು 3 ರಂದು ಸೇರಿ 36 ಜನ ಸತ್ತಿದ್ದಾರೆ ಎಂದು ನ್ಯಾಯಾಂಗ ಸಮಿತಿ ಹೇಳಿದೆ. ಆದರೆ ಆರೋಗ್ಯ ಸಚಿವರು 3 ಜನರು ಸತ್ತಿದ್ದಾರೆ ಎಂದು ಹೇಳಿದ್ದಾರೆ. ಜವಾಬ್ದಾರಿಯುತ ಸಚಿವರಾಗಿ ಸುಳ್ಳು ಹೇಳುವುದು ಸರಿಯೇ? ಎಂದು ಪ್ರಶ್ನಿಸಿದರು.

ಆಮ್ಲಜನಕ ಕೊರತೆಯಿಂದ 2 ಮತ್ತು 3 ನೇ ತಾರೀಕು 37 ಮಂದಿ ಸತ್ತಿದ್ದಾರೆ. ಘಟನೆ ನಡೆದಾದ ಮೇಲೆಯೂ ಮೇ 4 ರಿಂದ 10ನೇ ತಾರೀಕಿನವರೆಗೆ ತೀರಿಕೊಂಡವರಲ್ಲಿ 36 ಮಂದಿ ಆಮ್ಲಜನಕ ಕೊರತೆಯಿಂದಾದ ದುಷ್ಪರಿಣಾಮದಿಂದಲೇ ಸತ್ತಿದ್ದಾರೆ. ಹೀಗಾಗಿ ಈ ದುರಂತದಲ್ಲಿ ತೀರಿಕೊಂಡವರು 73 ಜನರು. ಘಟನೆಯ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು.

Advertisement

ದಾಖಲಾತಿಗಳನ್ನು ಹರಿದಿದ್ದಾರೆ. ತಿದ್ದಿದ್ದಾರೆ ಇದು ಕ್ರಿಮಿನಲ್ ಕೇಸ್ ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. 73 ಕುಟುಂಬಗಳಿಗೂ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮೇ 2 ರಂದು ್ನ ರಾತ್ರಿ 1 ಗಂಟೆಗೆ ಶವಗಳನ್ನು ನೀಡಿದ್ದಾರೆ. ಕೋವಿಡ್ ಪ್ರೊಟೋಕಾಲ್ ಪ್ರಕಾರ ರಾತ್ರಿ ಶವಗಳನ್ನು ಕೊಡುವಂತಿಲ್ಲ. ಇವರು ರಾತ್ರಿ ಒಂದೂವರೆ ಗಂಟೆಗೆ ಕೊಟ್ಟಿದ್ದಾರೆ. ಬಡವರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಇಬ್ಬರು ಮೃತರನ್ನು ಪಟ್ಟಿಯಲ್ಲಿ ಸೇರಿಸಿಲ್ಲ, ಅವರ ಶವಗಳನ್ನು ರಾತ್ರಿ ನೀಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಮಜೀದ್ ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್ ಮಾತನಾಡಿ, ರಾಜ್ಯ ಘಟನೆ ನಡೆದು 40 ದಿವಸಗಳಾಗಿವೆ. ಸರ್ಕಾರದ ವರ್ತನೆ ವಿಷಾದನೀಯ. ದುರಂತದಲ್ಲಿ ಮೃತಪಟ್ಟ 21 ಜನರ ಮನೆಗೂ ಭೇಟಿ ನೀಡಿದ್ದೆವು. ಒಬ್ಬೊಬ್ಬರ ಮನೆಯ ಕಥೆಯೂ ದುರಂತವಾಗಿದೆ. ಸರ್ಕಾರದ ಯಾರೊಬ್ಬರೂ ಅವರ ಮನೆಗೆ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ನಗರಸಭಾ ಸದಸ್ಯ ಮಹೇಶ್ ಗಾಳೀಪುರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಸಂತ್ರಸ್ತ ಮಹಿಳೆ ಜ್ಯೋತಿ ಮಾತನಾಡಿ, ನನ್ನ ಪತಿ ಸಿದ್ಧನಾಯಕ ಚೆನ್ನಾಗಿಯೇ ಇದ್ದರು. ಅವರಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಅಂದು ಬೆಳಿಗ್ಗೆಯಿಂದಲೇ ಆಕ್ಸಿಜನ್ ಕೊರತೆಯಾಗುವುದು ಆಸ್ಪತ್ರೆಯಲ್ಲಿ ಗೊತ್ತಿತ್ತು. ಹಾಗಾಗಿ ಅವರಿಗೆ ಬೆಳಿಗ್ಗೆಯಿಂದಲೇ ಆಕ್ಸಿಜನ್ ಪೂರೈಕೆ ಕಡಿಮೆ ಮಾಡಿದರು. ರಾತ್ರಿ 10.30ರಲ್ಲಿ ನನ್ನ ಪತಿ ಆಕ್ಸಿಜನ್ ದೊರಕುತ್ತಿಲ್ಲ ಎಂದು ನರಳಿ ನನ್ನ ಕಣ್ಣೆದುರೇ ಸತ್ತರು. ಅವರೇ ಕೈಯಾರೆ ಕೊಂದಿದ್ದಾರೆ. ನಮಗೆ ಚಿಕ್ಕ ಚಿಕ್ಕ ಮಕ್ಕಳು. ನಮ್ಮ ಮನೆಗೆ ಅವರೇ ಆಧಾರವಾಗಿದ್ದರು. ಸತ್ತವರಲ್ಲಿ ನಮ್ಮ ಪತಿಯ ಹೆಸರೇ ಇರಲಿಲ್ಲ. ನಮಗೆ ನ್ಯಾಯ ಕೊಡಿಸಿಕೊಡಿ ಎಂದು ಕೋರಿದರು. ಇನ್ನೋರ್ವ ಸಂತ್ರಸ್ತೆ ಸಿದ್ದರಾಜಮ್ಮ ಸಹ ತಮ್ಮ ನೋವಿನ ಅನುಭವ ಹೇಳಿಕೊಂಡು ಕಣ್ಣೀರು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next