Advertisement

ಸಾಯುವ 20 ವರ್ಷ ಮುಂಚೆಯೇ ಸಮಾಧಿ ನಿರ್ಮಿಸಿಕೊಂಡಿದ್ದ ಸ್ವಾಭಿಮಾನಿ

08:18 PM Jul 25, 2022 | Team Udayavani |

ಚಾಮರಾಜನಗರ: ಸ್ವಾವಲಂಬಿತನ, ಸ್ವಾಭಿಮಾನ ಮೆರೆಯುವ ಅನೇಕ ನಿದರ್ಶನಗಳಿವೆ. ಆದರೆ ಇಲ್ಲಿ ಅದೆಲ್ಲವನ್ನೂ ಮೀರಿಸುವ ಸ್ವಾವಲಂಬಿತನವನ್ನು ವೃದ್ಧರೊಬ್ಬರು ಮೆರೆದಿದ್ದಾರೆ.

Advertisement

ತಮ್ಮ ಸಾವಿಗೆ 20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು, ತಾವು ದುಡಿದ ಹಣದಲ್ಲೇ ತಮ್ಮ ಅಂತ್ಯಕ್ರಿಯೆ ನಡೆಸಬೇಕೆಂದು ಮಕ್ಕಳಿಗೆ ತಿಳಿಸಿದ್ದರು. ಅವರು ಮೃತರಾದ ಹಿನ್ನೆಲೆಯಲ್ಲಿ ಸೋಮವಾರ ಅವರಿಚ್ಛೆಯಂತೆ, ಅವರೇ ನಿರ್ಮಿಸಿದ ಸಮಾಧಿಯಲ್ಲಿ, ಅವರು ಕೂಡಿಟ್ಟಿದ್ದ ಹಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಈ ಘಟನೆ ನಡೆದಿರುವುದು ತಾಲೂಕಿನ ನಂಜೇದೇವನಪುರ ಗ್ರಾಮದಲ್ಲಿ. ಗ್ರಾಮದ ಪುಟ್ಟನಂಜಪ್ಪ (85 ವರ್ಷ) ಭಾನುವಾರ ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟರು. ಅವರಿಗೆ ಮೂವರು ಪುತ್ರರಿದ್ದಾರೆ.

ತನ್ನ ಸಾವಿನಿಂದ ಯಾರಿಗೂ ತೊಂದರೆಯಾಗಬಾರದು. ಸತ್ತ ಬಳಿಕ ಸಮಾಧಿ ನಿರ್ಮಿಸಲು ಕಷ್ಟವಾಗಬಾರದು ಎಂದು ನಿರ್ಧರಿಸಿ 20 ವರ್ಷಗಳ ಹಿಂದೆಯೇ ಅಂದರೆ, ಅವರಿಗೆ 65 ವರ್ಷಗಳಾಗಿದ್ದಾಗಲೇ ಸಮಾಧಿ ನಿರ್ಮಾಣ ಮಾಡಿಸಿದ್ದರು.

ಅವರ ಜಮೀನಿನಲ್ಲಿ ಗೋಪುರ ಶೈಲಿಯಲ್ಲಿ ಸಮಾಧಿ ನಿರ್ಮಿಸಿದ್ದರು. ತಾವೇ ಅದರೊಳಗೆ ಕುಳಿತು ಅಳತೆ ಮಾಡಿ ಸಮಾಧಿ ಕಟ್ಟಿದ್ದರು. ಇದಿಷ್ಟೇ ಅಲ್ಲ, ತಾವು ಮೃತರಾದ ಬಳಿಕ ಅಂತ್ಯಕ್ರಿಯೆಯನ್ನು ತಾನು ದುಡಿದ ಹಣದಿಂದಲೇ ಮಾಡಬೇಕಲ್ಲದೇ, 12 ದಿನದ ಕೈಲಾಸ ಗಣಾರಾಧನೆಯನ್ನೂ ತಮ್ಮ ಹಣದಿಂದಲೇ ಮಾಡಬೇಕೆಂದು ಮಕ್ಕಳಿಗೆ ಸೂಚನೆ ನೀಡಿದ್ದರು.

Advertisement

ಇದನ್ನೂ ಓದಿ : ಸಿಎಂ ಹೇಳಿಕೆ : ಜಮೀರ್ ಅಹಮದ್ ಗೆ ಬಿಸಿ ಮುಟ್ಟಿಸಿದ ಹೈಕಮಾಂಡ್

ಪುಟ್ಟನಂಜಪ್ಪ ಅವರ ಪತ್ನಿ ಕಳೆದ ವರ್ಷ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು. ಅಂತ್ಯ ಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು. ಕಳೆದ 12 ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತು ಹೋಗಿತ್ತು. ಭಾನುವಾರ ಸಂಜೆ ಮೃತಪಟ್ಟರು.

ತಮ್ಮ ತಂದೆಯ ಆಶಯದಂತೆ ಮೂವರು ಪುತ್ರರು ಅವರ ಹಣದಲ್ಲೇ, ಅವರು ಕಟ್ಟಿದ ಸಮಾಧಿಯಲ್ಲೇ ಸೋಮವಾರ ಅಂತ್ಯಕ್ರಿಯೆ ನಡೆಸಿದರು. ಈ ಮೂಲಕ ತಮ್ಮ ತಂದೆಯ ಆಸೆಯನ್ನು ನೆರವೇರಿಸಿದರು.

ನಮ್ಮ ತಂದೆಯವರು ಬಹಳ ಸ್ವಾಭಿಮಾನಿಯಾಗಿದ್ದು, ತಾವೇ ತಮ್ಮ ಸಮಾಧಿ ನಿರ್ಮಿಸಿದ್ದರು. ಅಂತ್ಯಕ್ರಿಯೆಗೆ ಹಣವನ್ನೂ ಇಟ್ಟಿದ್ದರು. ಇಂದು ಅವರಾಸೆಯಂತೆ ಅವರ ಹಣದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ತಮ್ಮ ಸಾವಿನ ನಂತರವೂ ಅವರು ವಿಶಿಷ್ಟವಾಗಿ ನಿಲ್ಲುತ್ತಾರೆ.
– ಗೌಡಿಕೆ ನಾಗೇಶ್, ಮೃತ ಪುಟ್ಟನಂಜಪ್ಪನವರ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next