Advertisement

ಚಾಮರಾಜನಗರ : ಆನ್ ಲೈನ್ ವಂಚನೆ ಪ್ರಕರಣವನ್ನು ಭೇದಿಸಿದ ಸೈಬರ್ ಠಾಣಾ ಪೊಲೀಸರು

09:02 PM May 14, 2022 | Team Udayavani |

ಚಾಮರಾಜನಗರ: ಆನ್‌ಲೈನ್ ಮೂಲಕ ಸಾಲ ನೀಡುವುದಾಗಿ 1.75 ಲಕ್ಷ ರೂ.ಗಳನ್ನು ವ್ಯಕ್ತಿಯೊಬ್ಬರಿಂದ ಕಟ್ಟಿಸಿಕೊಂಡು ವಂಚನೆ ಮಾಡಿದ ಪ್ರಕರಣವನ್ನು ನಗರದ ಸೈಬರ್ ಠಾಣೆಯ ಪೊಲೀಸರು ಭೇದಿಸಿ 1.75 ಲಕ್ಷ ರೂ.ಗಳನ್ನು ವಾಪಸ್ ಕೊಡಿಸಿರುವ ಪ್ರಕರಣ ವರದಿಯಾಗಿದೆ.

Advertisement

ತಾಲೂಕಿನ ಕುಮಚಹಳ್ಳಿ ಗ್ರಾಮದ ನಾಗಮಲ್ಲಪ್ಪ ಎಂಬವರು ಆನ್‌ಲೈನ್ ಸಾಲದ ಸುಳಿಗೆ ಸಿಲುಕಿ ವಂಚನೆಗೆ ಒಳಗಾಗಿದ್ದರು. ಇವರ ದೂರು ಆಧರಿಸಿ ಪೊಲೀಸರು ಚುರುಕಿನ ತನಿಖೆ ನಡೆಸಿ ದೊಡ್ಡ ಮೊತ್ತದ ಹಣವನ್ನು ವಾಪಸ್ ಕೊಡಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏಪ್ರಿಲ್ 14 ರಂದು ಲೈಟ್ ಸ್ಟ್ರೀಮ್ ಎಂಬ ಕಂಪನಿಯಿಅದ ನಾಗಮಲ್ಲಪ್ಪ ಅವರ ಮೊಬೈಲಿಗೆ ಸಂದೇಶವೊಅದು ಬಂದಿತ್ತು. ಅದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, 50 ಪೈಸೆ ಬಡ್ಡಿದರದಲ್ಲಿ 5 ಲಕ್ಷ ರೂ. ಸಾಲ ನೀಡುವುದಾಗಿ ಹಾಗೂ ಜಿಎಸ್ಟಿ ಮತ್ತು ಕಮೀಷನ್ ಹಣ ನೀಡಿದರೆ ಸಾಲ ಮಂಜೂರು ಮಾಡುವುದಾಗಿ ತಿಳಿಸಿದ್ದರು. ಏ.14 ರಿಂದ 17 ರವರೆಗೆ ನಾಗಮಲ್ಲಪ್ಪ ಅವರ ಬ್ಯಾಂಕ್ ಖಾತೆಯಿಂದ ಆರೋಪಿಯ ಬ್ಯಾಂಕ್ ಖಾತೆಗೆ ವಿವಿಧ ಹಂತಗಳಲ್ಲಿ 1.75 ಲಕ್ಷ ರೂ.ಗಳನ್ನು ಕಟ್ಟಿಸಿಕೊಳ್ಳಲಾಗಿತ್ತು. ಆದರೆ ಸಾಲ ಮಂಜೂರು ಮಾಡಿರಲಿಲ್ಲ. ಹಾಗಾಗಿ ನಾಗಮಲ್ಲಪ್ಪ ಸೈಬರ್ ಠಾಣೆಗೆ ಏ.21 ರಂದು ದೂರು ನೀಡಿದ್ದರು ಎಂದು ಎಎಸ್ಪಿ ತಿಳಿಸಿದರು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹಣವನ್ನು ವರ್ಗಾವಣೆ ಮಾಡಿದ್ದ ಬ್ಯಾಂಕಿನ ಖಾತೆಯ ಐಎಫ್‌ಎಸ್‌ಸಿ ಕೋಡ್ ಅನ್ನು ಪರಿಶೀಲಿಸಿದಾಗ ಅದು ಉತ್ತರ ಪ್ರದೇಶದ ಲಕ್ನೋದ ಹಜ್ರತ್ ಗಂಜ್ ನ ಖಾಸಗಿ ಬ್ಯಾಂಕ್ ಶಾಖೆಯಾಗಿತ್ತು. ಆ ಶಾಖೆಗೆ ಪೊಲೀಸರು ಇಮೇಲ್ ಮೂಲಕ ಆ ಶಾಖೆಯನ್ನು ಸಂಪರ್ಕಿಸಿ ಸದರಿ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡದಂತೆ ಸ್ಥಗಿತಗೊಳಿಸಬೇಕೆಂದು ತಿಳಿಸಿದ್ದರು.

ಇದನ್ನೂ ಓದಿ : ಮಾಹಿತಿ ನೀಡದ ನಗರಸಭೆ ಕಂದಾಯ ಅಧಿಕಾರಿಗೆ 10 ಸಾವಿರ ದಂಡ

Advertisement

ಆ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಈ ಅಕೌಂಟ್ ಅನ್ನು ಸ್ಥಗಿತಗೊಳಿಸಿ ಖಾತೆಯಲ್ಲಿ 2.39,242 ರೂ. ಇದೆ ಎಂದು ಉತ್ತರಿಸಿದ್ದರು. ನಂತರ ಪೊಲೀಸರು ನ್ಯಾಯಾಲಯದ ಆದೇಶ ಪಡೆದು ಹಣವನ್ನು ಬಿಡುಗಡೆ ಮಾಡಿಕೊಳ್ಳುವಂತೆ ನಾಗಮಲ್ಲಪ್ಪಗೆ ಸೂಚಿಸಿದ್ದರು. ಬಳಿಕ ನ್ಯಾಯಾಲಯದ ಆದೇಶವನ್ನು ಪೊಲೀಸ್ ಠಾಣೆಗೆ ಹಾಗೂ ಬ್ಯಾಂಕ್ ಶಾಖೆಗೆ ಕಳುಹಿಸಿ 1.75 ಲಕ್ಷ ರೂ.ಗಳನ್ನು ವಾಪಸ್ ಪಡೆಯಲಾಯಿತು ಎಂದು ಎಎಸ್ಪಿ ತಿಳಿಸಿದರು.

ಆನ್ಲೈನ್ ಮೂಲಕ ಸಾಲ ನೀಡುವುದಾಗಿ ಬರುವ ಸಂದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಕಡಿಮೆ ಬಡ್ಡಿಗೆ ಸಾಲ ದೊರಕುತ್ತದೆಂಬ ಕಾರಣಕ್ಕೆ ಹಣ ಕಳಹಿಸಬಾರದು. ಆನ್ಲೈನ್ ವಂಚನೆ ಬಗ್ಗೆ ಅರಿವಿರದವರು ಹೆಚ್ಚು ಹಣ ತಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾದರೆ ತಕ್ಷಣ ಸೈಬರ್ ಠಾಣೆಯ 1930ಗೆ ಕರೆ ಮಾಡಿ ದೂರು ನೀಡಬೇಕು ಎಂದು ಮನವಿ ಮಾಡಿದರು.

ಪ್ರಕರಣದ ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಪಿಐ ಮಹದೇವಶೆಟ್ಟಿ ಅವರ ನೇತೃತ್ವದಲ್ಲಿ ಎಸ್‌ಐ ಎಂ. ಮಾದೇಶ, ಎಎಸ್‌ಐ ಮಹದೇವಪ್ಪ, ಪೇದೆಗಳಾದ ಶ್ರೀನಿವಾಸಮೂರ್ತಿ, ಶಶಿಧರಮೂರ್ತಿ, ಅಬ್ದುಲ್ ಖಾದರ್ ಪಾಲ್ಗೊಂಡಿದ್ದರು. ಇವರ ಕಾರ್ಯಕ್ಕೆ ಎಸ್ಪಿ ಟಿ.ಪಿ. ಶಿವಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next