ಚಾಮರಾಜನಗರ: ಕಬ್ಬು ತುಂಬಿದ ಲಾರಿಯೊಂದು ಮಗುಚಿ ಪಾದಚಾರಿಗಳಿಬ್ಬರು ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ನಗರದ ಡೀವಿಯೇಷನ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಉತ್ತರ ಪ್ರದೇಶ ರಾಜ್ಯದ ಅಲಿಘರ್ ಜಿಲ್ಲೆಯ ಮಯೂರ್ (17) ಹಾಗೂ ಅತುಲ್ (17) ಮೃತಪಟ್ಟವರು. ಮತ್ತೊಬ್ಬ ಗಾಯಾಳು ಸಿಮ್‌ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದಲ್ಲಿ ಬೆಡ್‌ಶೀಟ್ ಮಾರಾಟ ಮಾಡುವ ಸಲುವಾಗಿ ಬಂದಿದ್ದ ಈ ಇಬ್ಬರೂ, ಡೀವಿಯೇಷನ್ ರಸ್ತೆಯಲ್ಲಿರುವ ಎನ್‌ಡಿಎ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಶನಿವಾರ ಸಂಜೆ 4.30 ಗಂಟೆ ವೇಳೆಯಲ್ಲಿ ಮೃತರ ಸಂಬಂಧಿಕರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಅವರನ್ನು ಕರೆತರಲು ಇಬ್ಬರು ನಡೆದು ಹೋಗುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ತಮಿಳುನಾಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಲಾರಿಯೊಂದು ಕಬ್ಬು ತುಂಬಿಕೊಂಡು ಡಿವಿಯೇಷನ್ ರಸ್ತೆಯ ಮಾರ್ಗವಾಗಿ ಸತ್ಯಮಂಗಲ ರಸ್ತೆಯತ್ತ ಹೋಗುತ್ತಿತ್ತು. ಎನ್‌ಡಿಎ ಲಾಡ್ಜ್ ಬಳಿಯ ತಿರುವಿನಲ್ಲಿ ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಕಬ್ಬು ತುಂಬಿದ್ದ ಲಾರಿ ಉರುಳಿ ಬಿತ್ತು.
ಇದೇ ವೇಳೆ ನಡೆದು ಹೋಗುತ್ತಿದ್ದ ಮಯೂರ್ ಮತ್ತು ಅತುಲ್ ಕಬ್ಬಿನ ರಾಶಿಯಡಿ ಸಿಲುಕಿದರೆ, ಲಾರಿ ಚಾಲಕ ಮತ್ತು ಕ್ಲೀನರ್ ಪರಾರಿಯಾದರು. ಸಮೀಪದ ಭುವನೇಶ್ವರಿ ವೃತ್ತದಲ್ಲಿದ್ದ ಸಂಚಾರಿ ಪೊಲೀಸರ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಗರಸಭೆಯ 2 ಜೆಸಿಬಿ ಮತ್ತು ಕ್ರೆನ್ ಬಳಸಿ ಕಬ್ಬಿನ ರಾಶಿಯನ್ನು ಅಕ್ಕಪಕ್ಕಕ್ಕೆ ತೆರವು ಮಾಡಿದರು.
ಇಬ್ಬರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಕಳುಹಿಸಿದರು. ಮಾರ್ಗಮಧ್ಯೆ ಒಬ್ಬ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದನು ಎಂದು ನಗರದ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ನಂದೀಶ್ ಕುಮಾರ್ ತಿಳಿಸಿದ್ದಾರೆ.
ಕಬ್ಬಿನ ಲಾರಿ ಉರುಳಿದ ಕೂಡಲೇ ಜನರು ಧಾವಿಸಿ ಗುಂಪುಗೂಡಿದರು. ಸ್ಥಳಕ್ಕೆ ಆಗಮಿಸಿ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಗಳ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಕಬ್ಬನ್ನು ತೆರವು ಮಾಡಿದರು.
ಸಂತೇಮರಹಳ್ಳಿ ವೃತ್ತದಿಂದ ಬರುತ್ತಿದ್ದ ವಾಹನಗಳನ್ನು ಚಿಕ್ಕಅಂಗಡಿ ಬೀದಿ ರಸ್ತೆ ಮಾರ್ಗವಾಗಿ ಭುವನೇಶ್ವರಿ ವೃತ್ತದ ಮೂಲಕ ಡಿವಿಯೇಷನ್ ರಸ್ತೆಗೆ ಕಳುಹಿಸಲಾಯಿತು.
ಈ ಸಂಬಂಧ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಎಸ್ಪಿ ಶಿವಕುಮಾರ್, ಡಿವೈಎಸ್ಪಿ ಪ್ರಿಯದರ್ಶಿನಿ ಅವರು ಭೇಟಿ ನೀಡಿ ಪರಿಶೀಲಿಸಿದರು.