Advertisement

ಬಾಲಕಿಯನ್ನು ಚುಡಾಯಿಸಿದ ಮಗನಿಗೆ 6 ತಿಂಗಳು ಜೈಲು, ತಂದೆಗೆ 1 ವರ್ಷ ಜೈಲು ಶಿಕ್ಷೆ

08:15 PM Feb 11, 2021 | Team Udayavani |

ಚಾಮರಾಜನಗರ: ಅಪ್ರಾಪ್ತ ಶಾಲಾ ಬಾಲಕಿಯನ್ನು ಹಿಂಬಾಲಿಸಿ ಬಾಲಕಿಯ ಮನೆಯ ಮುಂದೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗ ಸೇರಿ ಮೂವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಜಿಲ್ಲೆಯ ರಾಮಾಪುರ ಠಾಣಾ ವ್ಯಾಪ್ತಿಯ ಗ್ರಾಮದ ಆನಂದ ಮತ್ತು ನಾಗೇಂದ್ರ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ಆನಂದನ ತಂದೆ ಮಾದಪ್ಪ ಅವರಿಗೆ 1 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಪ್ರಕರಣ ದಾಖಲಾಗಿತ್ತು. ಆನಂದ (20), ನಾಗೇಂದ್ರ (21) ಎಂಬುವರು ಶಾಲೆಗೆ ಹೋಗಿ ಬರುತ್ತಿದ್ದ ವೇಳೆ ಬಾಲಕಿಯನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಚುಡಾಯಿಸುತ್ತಿದ್ದರು.

ಇದನ್ನೂ ಓದಿ:ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಗೆ ಧೈರ್ಯ ತುಂಬಿದ ಶಿಕ್ಷಣ ಸಚಿವ

2018ರ ಮಾರ್ಚ್ 30ರಂದು ಬಾಲಕಿಯ ಮನೆಯ ಮುಂದೆಯೆ ಚುಡಾಯಿಸುತ್ತಿದ್ದಾಗ ಆರೋಪಿಗಳು ಕೂಗಾಡುತ್ತಿದ್ದದ್ದನ್ನು ನೋಡಿ ನೆರೆ ಹೊರೆಯವರು ಧಾವಿಸುವಷ್ಟರಲ್ಲಿ ಅಪರಾಧಿಗಳು, ಬಾಲಕಿಯ ಮನೆಯ ಮುಂದೆ ಮೋಟಾರ್ ಬೈಕ್ ಬಿಟ್ಟು ಪರಾರಿಯಾಗಿದ್ದರು. ಮರುದಿನ ಆನಂದ ಅವರ ತಂದೆ ಮಾದಪ್ಪ ಬಾಲಕಿ ಮತ್ತು ಆಕೆಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರು. ಈ ಪ್ರಕರಣದ ವಿಚಾರಣೆ ನಡೆದು ಆರೋಪ ರುಜುವಾತಾಗಿದೆ ಎಂದು ತೀರ್ಮಾನಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್ ಪುರಿ ಅವರು ಆನಂದ ಹಾಗೂ ನಾಗೇಂದ್ರ ಅವರಿಗೆ 6 ತಿಂಗಳ ಶಿಕ್ಷೆ ತಲಾ 5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಒಂದು ತಿಂಗಳ ಸಾಧಾರಣೆ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಆನಂದ ಅವರ ತಂದೆ ಮಾದಪ್ಪ ಪರೋಕ್ಷವಾಗಿ ಮಗನಿಗೆ ಕೃತ್ಯವೆಸಗಲು ಸಹಕರಿಸಿದ್ದಾರೆಂದು ಮಾದಪ್ಪನಿಗೆ ಒಂದು ವರ್ಷ ಶಿಕ್ಷೆ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಎರಡು ತಿಂಗಳ ಸಾಧಾರಣ ಸಜೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿತರು ಕಟ್ಟುವ ದಂಡವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next