Advertisement

ಚಾಮರಾಜನಗರ : ಚಾಮುಲ್ ಚುನಾವಣೆ, ಅತಂತ್ರ ಫಲಿತಾಂಶ

09:57 PM Jun 14, 2022 | Team Udayavani |

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್)ದ 9 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ವರು, ಬಿಜೆಪಿ ಬೆಂಬಲಿತ ಇಬ್ಬರು, ಪಕ್ಷೇತರ ಇಬ್ಬರು ಹಾಗೂ ಜೆಡಿಎಸ್ ಬೆಂಬಲಿತ ಓರ್ವರು ಗೆಲುವು ಸಾಧಿಸಿದ್ದಾರೆ.

Advertisement

ಕಾಂಗ್ರೆಸ್ ನಿಂದ ನಿಕಟಪೂರ್ವ ಅಧ್ಯಕ್ಷ ಎಚ್.ಎಸ್ ನಂಜುಂಡಪ್ರಸಾದ್, ಹಾಲಿ ನಿರ್ದೇಶಕ ಎಂ. ನಂಜುಂಡಸ್ವಾಮಿ, ಶಾಹುಲ್ ಅಹಮದ್(ತೌರಿಕ್), ಶಾಸಕ ಪುಟ್ಟರಂಗಶೆಟ್ಟರ ಪುತ್ರಿ ಶೀಲಾ ಪುಟ್ಟರಂಗಶೆಟ್ಟಿ, ಬಿಜೆಪಿಯಿಂದ ಎಚ್.ಎಸ್. ಬಸವರಾಜು, ವೈ.ಸಿ. ನಾಗೇಂದ್ರ, ಬಂಡಾಯ ಬಿಜೆಪಿ ಅಭ್ಯರ್ಥಿ ಎಂ.ಪಿ. ಸುನೀಲ್, ಜೆಡಿಎಸ್‌ನಿಂದ ಮಹದೇವಸ್ವಾಮಿ( ಉದ್ದನೂರು ಪ್ರಸಾದ್) ಹಾಗೂ ಪಕ್ಷೇತರರಾಗಿ ಸದಾಶಿವಮೂರ್ತಿ ಜಯಗಳಿಸಿದ್ದಾರೆ.

ತಾಲೂಕಿನ ಕುದೇರು ಗ್ರಾಮದಲ್ಲಿರುವ ಚಾಮುಲ್‌ನ ಎಚ್.ಎಸ್.ಎಂ. ಆಡಳಿತ ಸಂಕೀರ್ಣಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಿತು. ಐದೂ ತಾಲೂಕಿನ ಮತದಾರರು ಚಾಮುಲ್ ಗೆ ಆಗಮಿಸಿ ಮತ ಚಲಾಯಿಸಿದರು. ಜಿಲ್ಲೆಯ ಹಾಲಿನ ಡೇರಿಗಳ 449 ಮತದಾರರು ನಿರ್ದೇಶಕರ ಆಯ್ಕೆಗೆ ಮತದಾನ ಮಾಡಿದ್ದರು. ಸಂಜೆ 4.45ಕ್ಕೆ ಫಲಿತಾಂಶವೂ ಹೊರಬಿತ್ತು.

ಮಹಿಳಾ ನಿರ್ದೇಶಕಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಪುತ್ರಿ ಶೀಲಾ 56 ಮತಗಳನ್ನು ಪಡೆದು ಜಯಗಳಿಸಿದ್ದರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹಾಗೂ ಚಾಮುಲ್ ಮಾಜಿ ನಿರ್ದೇಶಕಿ ಪ್ರಮೋದಾ (28) ಮತ ಪಡೆದು ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

ಇದನ್ನೂ ಓದಿ : ಅಕ್ರಮ ಸಂಬಂಧ : ಪುರುಷ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ

Advertisement

ಚಾಮರಾಜನಗರ ತಾಲೂಕಿನ 2 ನಿರ್ದೇಶಕರ ಸ್ಥಾನಗಳಲ್ಲಿ ಒಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಎಚ್.ಎಸ್.ಬಸವರಾಜು 53 ಮತಗಳನ್ನು ಪಡೆದು ಜಯಗಳಿಸಿದರು. ಪಕ್ಷೇತರ ಅಭ್ಯರ್ಥಿ ಬಸವನಪುರ ಸದಾಶಿವಮೂರ್ತಿ 40 ಮತಗಳನ್ನು ಪಡೆದು ಗೆಲುವು ದಾಖಲಿಸಿದರು. ಇನ್ನೋರ್ವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಿಲಗೆರೆ ಬಸವರಾಜು 37 ಮತಗಳನ್ನು ಪಡೆದು ಸೋಲನುಭವಿಸಿದರು. ಕಾಂಗ್ರೆಸ್ ಬೆಂಬಲಿತರಾದ ಬಿ.ಕೆ.ರವಿಕುಮಾರ್ 26 ಮತಗಳನ್ನೂ, ಆಲ್ದೂರು ರಾಜಶೇಖರ್ 22 ಮತಗಳನ್ನೂ, ಪಕ್ಷೇತರ ಅಭ್ಯರ್ಥಿಗಳಾದ ಎಂ.ಎಸ್. ರವಿಶಂಕರ್ ಮಲೆಯೂರು 35 ಮತಗಳನ್ನೂ, ಕೋಡಿಮೋಳೆ ರಾಜಶೇಖರ್ 03 ಮತಗಳನ್ನೂ, ಕುಲಗಾಣ ರವಿಕುಮಾರ್ 05 ಮತಗಳನ್ನು ಪಡೆದು ಪರಾಭವಗೊಂಡರು.

ಗುಂಡ್ಲುಪೇಟೆ ತಾಲೂಕಿನ 2 ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ಎಚ್.ಎಸ್. ನಂಜುಂಡಪ್ರಸಾದ್ 62 ಮತಗಳನ್ನು ಪಡೆದು ಭರ್ಜರಿ ಗೆಲುವು ಪಡೆದಿದ್ದಾರೆ. ಬಿಜೆಪಿಯಲ್ಲಿದ್ದರೂ ಟಿಕೆಟ್ ದೊರಕದ ಕಾರಣ ಬಂಡಾಯ ವಾಗಿ ಸ್ಪರ್ಧಿಸಿದ್ದ ಎಂ.ಪಿ.ಸುನೀಲ್ 44 ಮತಗಳನ್ನು ಪಡೆದು ಜಯಗಳಿಸಿ, ಟಿಕೆಟ್ ನೀಡದ ಬಿಜೆಪಿ ಮುಖಂಡರಿಗೆ ಸವಾಲೆಸೆದಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಎಚ್.ಎನ್.ನಟೇಶ್ (41 ಮತಗಳು) ಬಿಜೆಪಿ ಬೆಂಬಲಿತರಾದ ಕಣ್ಣೇಗಾಲ ಮಾದಪ್ಪ (42 ಮತಗಳು), ಎಂ.ಸುಜೇಂದ್ರ 42 ಮತ ಗಳಿಸಿ ಸೋಲನುಭವಿಸಿದ್ದಾರೆ.
ಹನೂರು ತಾಲೂಕಿನ 2 ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಶಾಹುಲ್ ಅಹಮ್ಮದ್ 40 ಮತಗಳನ್ನೂ, ಜೆಡಿಎಸ್‌ನ ಮಹದೇವಸ್ವಾಮಿ (ಉದ್ದನೂರು ಪ್ರಸಾದ್) 46 ಮತಗಳನ್ನೂ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ನ ಬೆಂಬಲಿತ ಹಾಗೂ ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ 36 ಬಸವರಾಜು 11, ಎಂ.ಮಹದೇವ ಪ್ರಭು 6, ಸಿ.ಸೋಮಶೇಖರ್ 4 ಮತ ಪಡೆದು ಪರಾಜಿತರಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರು ನಗರದ ವಿವಿಧ ಕಾಮಗಾರಿಗಳ ದಿಢೀರ್ ಪರಿಶೀಲನೆ ಮಾಡಿದ ಸಿಎಂ 

ಕೊಳ್ಳೇಗಾಲ ತಾಲೂಕಿನ ಒಂದು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತರಾದ ನಂಜುಂಡಸ್ವಾಮಿ 26 ಮತ ಪಡೆದು ಜಯಗಳಿಸಿದರೆ, ಎಂ.ಪುಟ್ಟಣ್ಣ 20 ಮತ ಗಳಿಸಿ ಸೋತಿದ್ದಾರೆ.

ಯಳಂದೂರು ತಾಲೂಕಿನ ಒಂದು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ವೈ.ಸಿ.ನಾಗೇಂದ್ರ 7 ಮತ ಗಳಿಸಿ ಜಯಗಳಿಸಿದರೆ, ಕಾಂಗ್ರೆಸ್ ಬೆಂಬಲಿತ ಜೆ.ಯೋಗೇಶ್ 6 ಮತ ಪಡೆದು ಸೋತಿದ್ದಾರೆ.

ಫಲಿತಾಂಶವನ್ನು ಚುನಾವಣಾಧಿಕಾರಿ ರಾಜೇಂದ್ರ ಪ್ರಸಾದ್ ಘೋಷಣೆ ಮಾಡಿದರು. ವಿಜೇತ ಅಭ್ಯರ್ಥಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಪ್ರಮಾಣ ಪತ್ರವನ್ನು ನೀಡಿದರು.

ಅಧಿಕಾರ ಯಾರಿಗೆ?
ಚಾಮುಲ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಬೆಂಬಲಿತರು ಜಯಗಳಿಸಿದ್ದರೂ, ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.
ಒಟ್ಟು ನಿರ್ದೇಶಕ ಸ್ಥಾನಗಳು 12. ಇದರಲ್ಲಿ 9ಕ್ಕೆ ಚುನಾವಣೆ ನಡೆದಿದೆ. ಇನ್ನು ಮೂರು ಸ್ಥಾನಗಳು 1 ಸರ್ಕಾರದ ನಾಮ ನಿರ್ದೇಶನ ಸದಸ್ಯ. 1 ಸಹಕಾರ ಸಂಘಗಳ ಸಹಾಯಕ ನಿಬಂಧಕರು, 1 ಕೆಎಂಎಫ್ ಎಂ.ಡಿ. ಇಂದಿನ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನಗಳಲ್ಲೂ 1 ಬಂಡಾಯ ಸ್ಥಾನದಲ್ಲೂ ಜಯಗಳಿಸಿದೆ. ನಾಮನಿರ್ದೇಶಿತರು 3 ಸ್ಥಾನಗಳಿವೆ. ಬಿಜೆಪಿಗೆ ಅಧಿಕಾರ ಹಿಡಿಯಲು ಇನ್ನೊಂದು ಸ್ಥಾನದ ಅವಶ್ಯಕತೆಯಿದೆ. ಇನ್ನೋರ್ವ ಪಕ್ಷೇತರ ಅಥವಾ ಜೆಡಿಎಸ್ ಬೆಂಬಲಿತರ ಬೆಂಬಲ ಪಡೆದರೆ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ.
ಇನ್ನು ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದರೆ, ಬಿಜೆಪಿ ಬಂಡಾಯ ಅಭ್ಯರ್ಥಿ ಸುನೀಲ್, ಪಕ್ಷೇತರ ಅಭ್ಯರ್ಥಿ ಸದಾಶಿವಮೂರ್ತಿ ಹಾಗೂ ಜೆಡಿಎಸ್‌ನ ಉದ್ದನೂರು ಪ್ರಸಾದ್ ಈ ಮೂರೂ ಜನರ ಬೆಂಬಲ ಬೇಕೇ ಬೇಕು. ಇವರಲ್ಲಿ ಯಾರೇ ಕೈ ಕೊಟ್ಟರೂ ಕೈ ಅಧಿಕಾರ ಹಿಡಿಯಲು ಸಾಧ್ಯವಿಲ್ಲ.

ಪುತ್ರಿಯನ್ನು ಗೆಲ್ಲಿಸಿಕೊಂಡು ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳದ ಪುಟ್ಟರಂಗಶೆಟ್ಟಿ
ಚಾಮರಾಜನಗರ : ಚಾಮುಲ್ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರಿ ಶೀಲಾ 56 ಮತಗಳನ್ನು ಪಡೆದು ಗೆದ್ದರು. ಆದರೆ ಶಾಸಕರ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳೂ ಪರಾಭವಗೊಂಡಿದ್ದಾರೆ.
ಮಹಿಳಾ ಕ್ಷೇತ್ರದಲ್ಲಿ ಹಾಲಿ ನಿರ್ದೇಶಕಿ ಪ್ರಮೋದಾ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈ ತಪ್ಪಿ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಇಲ್ಲಿ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪ್ರಮೋದಾಗೆ ಬೆಂಬಲ ನೀಡಿತ್ತು. ಅದರೂ ಸಹ ನೇರ ಹಣಾಹಣಿಯಲ್ಲಿ ಶಾಸಕ ಪುಟ್ಟರಂಗಶೆಟ್ಟರ ಪುತ್ರಿ ಶೀಲಾ 28 ಮತಗಳ ಭಾರಿ ಅಂತರದಲ್ಲಿ ಜಯಗಳಿಸಿದ್ದಾರೆ.

ಆದರೆ ಶಾಸಕರು ಪ್ರತಿನಿಧಿಸುವ ಚಾಮರಾಜನಗರ ತಾಲೂಕಿನಲ್ಲಿ ತಮ್ಮದೇ ಪಕ್ಷದ ಬೆಂಬಲಿತರನ್ನು ಗೆಲ್ಲಿಸಿಕೊಳ್ಳಲು ಶಾಸಕರಿಗೆ ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆಯಲ್ಲೂ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರಿಗೆ ಕಡಿಮೆ ಮತಗಳು ಬಂದಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next