Advertisement
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆಗೆ ತನ್ನದೇ ಆದ ಅಸ್ಮಿತೆಯಿದೆ. ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳನ್ನು ಹೊಂದಿರುವ ನಮ್ಮ ಜಿಲ್ಲೆ ಭಾರತದದಲ್ಲಿ ಹೆಚ್ಚು ಅರಣ್ಯ ಪ್ರದೇಶ ಉಳ್ಳ ಜಿಲ್ಲೆಗಳಲ್ಲಿ ಒಂದಾಗಿದೆ. ಕಪ್ಪುಶಿಲೆ, ರೇಷ್ಮೆ, ಶ್ರೀಗಂಧ, ಜಾನಪದ ಮಹಾಕಾವ್ಯಗಳಿಂದ ಗುರುತಿಸಿಕೊಳ್ಳುತ್ತದೆ ಎಂದರು.
Related Articles
Advertisement
ತೋಂಟದ ಸಿದ್ದಲಿಂಗಯತಿಗಳು, ಪೂಜ್ಯಪಾದರು, ನಾಗಾರ್ಜುನ, ದೇವಚಂದ್ರ ಸಂಚಿಯ ಹೊನ್ನಮ್ಮ, ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿಗಳು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮೌಖಿಕ, ಜನಪದ ಕ್ಷೇತ್ರಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಮಹದೇವ ಶಂಕನಪುರ ತಿಳಿಸಿದರು.
ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಇದು ಇಷ್ಟಕ್ಕೇ ಸೀಮಿತವಾಗಬಾರದು. ಒಂದು ಭಾಷೆಯನ್ನು ಉಳಿಸಿ, ಬೆಳೆಸಲು ಅದನ್ನು ಕನ್ನಡಿಗರು ಬಳಸಬೇಕು. ಮಾತಾಡಬೇಕು. ಬರೆಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ವರಪ್ರಸಾದ್, ಹರಿದುಹಂಚಿಹೋಗಿದ್ದ ಕರ್ನಾಟಕ 1956ರಲ್ಲಿ ಏಕೀಕರಣಗೊಂಡಿತು. ಮೈಸೂರು ರಾಜ್ಯ ಎಂಬ ಹೆಸರನ್ನು 1973ರ ನ.1ರಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಕಾವೇರಿಯಿಂದ ಗೋದಾವರಿವರೆಗೆ ಇದ್ದ ನಾಡೆಂದು ಕವಿರಾಜಮಾರ್ಗಕಾರ ಹೇಳುತ್ತಾನೆ. ಆದರೆ ಇಂದು ಆತಂಕದ ಪರಿಸ್ಥಿತಿ ಇದೆ. ರಾಜ್ಯೋತ್ಸವವನ್ನು ನವೆಂಬರ್‌ನಲ್ಲಿ ಮಾತ್ರ ಆಚರಿಸದೇ ನಿತ್ಯೋತ್ಸವವಾಗಿ ಆಚರಿಸಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎ.ಎಂ. ಶಿವಸ್ವಾಮಿ ಜನಪದ ಗೀತೆಗಳನ್ನು ಹಾಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಹದೇವಪ್ಪ, ಸಹ ಪ್ರಾಧ್ಯಾಪಕರಾದ ಉಮೇಶ್, ಎಸ್ ಗುಣ, ರೂಪಶ್ರೀ, ಜಮುನಾ, ವಿದ್ಯಾರ್ಥಿನಿ ವರ್ಷಾ ಹತ್ವಾರ್ ಮತ್ತಿತರರು ಉಪಸ್ಥಿತರಿದ್ದರು.