Advertisement

Chamarajanagar: ಬಂಡೀಪುರ ಹುಲಿ ಕಾಡಿಗೆ ಶ್ವಾನದಳ ರಕ್ಷಣೆ

06:36 PM Dec 05, 2024 | Team Udayavani |

ಚಾಮರಾಜನಗರ: ಪೊಲೀಸ್‌ ಇಲಾಖೆಯಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಶ್ವಾನದಳ ಇರುವಂತೆಯೇ ಈಗ ಹುಲಿ ಕಾಡಿನಲ್ಲಿ ನಡೆಯುವ ಅಕ್ರಮ, ವನ್ಯಜೀವಿ ಅಪರಾಧ ಪತ್ತೆಗೆ ಅರಣ್ಯ ಇಲಾಖೆಯ “ಶ್ವಾನ ದಳ’ ಸಜ್ಜಾಗುತ್ತಿದೆ!

Advertisement

ಹೌದು, ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ಇದಕ್ಕಾಗಿ ಸುಸಜ್ಜಿತ ಶ್ವಾನ ದಳ ತರಬೇತಿ ಕೇಂದ್ರ ತೆರೆಯಲಾಗಿದ್ದು, ಇಲಾಖೆಯ ಮಟ್ಟಿಗೆ ಇದು ದೇಶದಲ್ಲೇ ಮೊದಲ ಶ್ವಾನದಳ (ಟ್ರ್ಯಾಕರ್‌ ಡಾಗ್‌) ತರಬೇತಿ ಕೇಂದ್ರವಾಗಿದೆ. 20 ಸಿಬಂದಿ (ಸ್ನಿಫ‌ರ್‌ ಡಾಗ್‌ ಕೀಪರ್ಸ್‌) ಇದ್ದು, ಅವರು 10 ತಿಂಗಳ ಕಾಲ ಬಂಡೀಪುರದಲ್ಲಿ ತರಬೇತಿ ಪಡೆಯಲಿದ್ದಾರೆ.

ಅನಂತರ ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ, ಕಾಳಿ ಅರಣ್ಯಗಳ ಆಯಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ನಿಯೋಜಿಸಲಾಗುತ್ತದೆ.

ಪ್ರತೀ ವರ್ಷ 10 ಶ್ವಾನಕ್ಕೆ ತರಬೇತಿ
ಈ ತರಬೇತಿ ಕೇಂದ್ರವು ಪ್ರತೀ ವರ್ಷ 10 ಶ್ವಾನಗಳಿಗೆ ತರಬೇತಿ ನೀಡುತ್ತದೆ. ಅವುಗಳನ್ನು ವನ್ಯಜೀವಿ ಸ್ನಿಫ‌ರ್‌ ಮತ್ತು ವನ್ಯಜೀವಿ ಅಪರಾಧ ಟ್ರಾÂಕಿಂಗ್‌ ಶ್ವಾನಗಳು ಎಂದು ಕರೆಯಲಾಗುತ್ತದೆ. ಈಗಾಗಲೇ ಪೊಲೀಸ್‌ ಇಲಾಖೆ ಈ ಶ್ವಾನಗಳನ್ನು ಬಳಸುವಲ್ಲಿ ಯಶಸ್ವಿಯೂ ಆಗಿದೆ.

ಪ್ರತ್ಯೇಕ ಘಟಕ ಇರಲಿಲ್ಲ
ಈಗಾಗಲೇ ಬಂಡೀಪುರದಲ್ಲಿ ಶ್ವಾನದ ಮೂಲಕ ತನಿಖೆ, ವನ್ಯಜೀವಿ ಬೇಟೆಗಾರರನ್ನು ಹಿಡಿಯುವ ಕಾರ್ಯ ದಶಕದಿಂದ ಇದ್ದರೂ ಪ್ರತ್ಯೇಕ ಘಟಕ ಇರಲಿಲ್ಲ. ಈ ಹಿಂದೆ ಅರಣ್ಯ ಇಲಾಖೆಯು ಬಂಡೀಪುರ ಹುಲಿಧಾಮದಲ್ಲಿ ಟ್ರಾಫಿಕ್‌ ಡಬ್ಲೂéಡಬ್ಲೂéಎಫ್ ಇಂಡಿಯಾ ಸಂಸ್ಥೆಯಿಂದ ಸ್ನಿಫ‌ರ್‌ ಡಾಗ್‌ಗಳನ್ನು ಸರಬರಾಜು ಮಾಡಿತ್ತು. ಅವುಗಳಿಗೆ 7-8 ತಿಂಗಳ ಕಾಲ ಹರ್ಯಾಣದ ಪಂಚಕುಲದಲ್ಲಿರುವ ಇಂಡೋ-ಟೈಬರ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು.

Advertisement

ಈಗ ಬಂಡೀಪುರ ಹುಲಿ ಯೋಜನೆ ಪ್ರದೇಶದಲ್ಲಿ ದ್ರೋಣ ಎನ್ನುವ ಸ್ನಿಫ‌ರ್‌ ಶ್ವಾನವೊಂದು ಈ ಬಳಗ ಸೇರಿಕೊಂಡಿದೆ. ಇದನ್ನು ಕಳೆದ ವರ್ಷ 2023ರಲ್ಲಿ ತರಬೇತಿ ಅನಂತರ ಬಂಡೀಪುರದಲ್ಲಿ ಸೇವೆಗೆ ನಿಯೋಜಿಸಲಾಗಿದೆ.

ಏನಿದು ಯೋಜನೆ?
– ಪೊಲೀಸ್‌ ಇಲಾಖೆಯಲ್ಲಿ ಅಪರಾಧಿಗಳ ಪತ್ತೆಗೆ ಶ್ವಾನದಳ ಇರುವಂತೆ, ಅರಣ್ಯ ಇಲಾಖೆಯಲ್ಲೂ ಶ್ವಾನದಳಕ್ಕೆ ತರಬೇತಿ
– ಅರಣ್ಯ, ವನ್ಯಜೀವಿ ಅಪರಾಧ ಪತ್ತೆ/ ವನ್ಯಜೀವಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಳದ ನಿಯೋಜನೆ
– ಪ್ರತೀ ವರ್ಷ ಇಡೀ ರಾಜ್ಯಕ್ಕೆ ಅರಣ್ಯ ಮತ್ತು ವನ್ಯಜೀವಿಗಳ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು 10 ಶ್ವಾನಗಳಿಗೆ ತರಬೇತಿ

ಅರಣ್ಯ ಇಲಾಖೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಹಲವಾರು ಹೊಸ ಮಾರ್ಗ ಕಂಡುಕೊಂಡಿದೆ. ಇದರಲ್ಲಿ ಶ್ವಾನದಳದ ಬಳಕೆಯೂ ಒಂದು. ಇದನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಇದು ಕರ್ನಾಟಕ ಅರಣ್ಯ ಇಲಾಖೆಗೂ ಹೆಮ್ಮೆಯ ಕ್ಷಣ.
– ಡಾ| ಪಿ. ರಮೇಶ್‌ ಕುಮಾರ್‌, ಕರ್ನಾಟಕ ಹುಲಿ ಯೋಜನೆ ನಿರ್ದೇಶಕ

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next