Advertisement

ಸೋಮಣ್ಣ , ಪುಟ್ಟರಂಗಶೆಟ್ಟಿ ಹಣಾಹಣಿ

03:32 PM May 07, 2023 | Team Udayavani |

ಚಾಮರಾಜನಗರ: ಸಾಮಾನ್ಯ ಕ್ಷೇತ್ರವಾಗಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಸಚಿವ ವಿ. ಸೋಮಣ್ಣ ಅವರ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿವರ್ತಿತವಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಇದೇ ಪ್ರಥಮ ಬಾರಿಗೆ ಸಚಿವ ವಿ. ಸೋಮಣ್ಣ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಳೆದ ಮೂರು ಬಾರಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಬಿಎಸ್‌ಪಿಯಿಂದ ಹ.ರಾ ಮಹೇಶ್‌, ಜೆಡಿಎಸ್‌ನಿಂದ ಆಲೂರು ಮಲ್ಲು ಸ್ಪರ್ಧಿಸಿದ್ದಾರೆ.

Advertisement

ಕನ್ನಡ ಚಳವಳಿಗಾರ ವಾಟಾಳ್‌ ನಾಗರಾಜ್‌ ಇದು ನನ್ನ ಕೊನೆಯ ಚುನಾವಣೆ ಎಂದು ಕಣಕ್ಕಿಳಿದಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದೆ. ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಲಿಂಗಾಯತ ಸಮಾಜಕ್ಕೆ ಸೇರಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಉಪ್ಪಾರ ಸಮುದಾಯದವರು. ಬಿಎಸ್‌ಪಿ ಅಭ್ಯರ್ಥಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು. ಈ ಕ್ಷೇತ್ರದಲ್ಲಿ ಲಿಂಗಾಯತ, ಎಸ್‌ಸಿ, ಉಪ್ಪಾರ, ನಾಯಕ, ಕುರುಬ ಸಮುದಾಯದ ಮತಗಳು ಅನುಕ್ರಮವಾಗಿ ಪ್ರಾಬಲ್ಯ ಸಾಧಿಸಿವೆ.

ಸಚಿವ ವಿ.ಸೋಮಣ್ಣ ಅವರು ಕಳೆದ ಬಾರಿಯಿಂದಲೂ ಜಿಲ್ಲೆಯಲ್ಲಿ ಸ್ಪರ್ಧಿಸಲು ಆಸಕ್ತಿ ವಹಿಸಿದ್ದರು. ಈ ಬಾರಿ ಪಕ್ಷ ಟಿಕೆಟ್‌ ನೀಡಿದೆ. ಕಳೆದ ಮೂರು ಅವಧಿಯಿಂದಲೂ ಕಾಂಗ್ರೆಸ್‌ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಬಿಜೆಪಿ ತೀವ್ರ ಪ್ರಯತ್ನ ನಡೆಸಿದೆ.

ಕ್ಷೇತ್ರದಲ್ಲಿ ಹಿಂದಿನಿಂದಲೂ ಹಿಡಿತ ಸಾಧಿಸಿರುವ ಕಾಂಗ್ರೆಸ್‌ ಕ್ಷೇತ್ರ ಕೈತಪ್ಪಿ ಹೋಗದಂತೆ ರಕ್ಷಿಸಿಕೊಳ್ಳಲು ಹೋರಾಟ ನಡೆಸಿದೆ. ವಸತಿ ಸಚಿವರೂ ಆಗಿರುವ ಸೋಮಣ್ಣ ಅವರು ಗೋವಿಂದರಾಜ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಶಾಸಕ ಪುಟ್ಟರಂಗಶೆಟ್ಟಿ ಅವರೂ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಭಿನ್ನಮತ ಶಮನವಾಗಿದೆ ಎಂಬುದು ತೋರುತ್ತಿದ್ದರೂ, ಆಂತರಿಕ ಪೆಟ್ಟಿನ ಬಗ್ಗೆ ಹೇಳುವುದು ಕಷ್ಟಕರ.

ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ 4,913 ಮತಗಳ ಅಂತರದಿಂದ ಕಾಂಗ್ರೆಸ್‌ ಗೆ ಸೋತಿದ್ದರು. ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದೆ. ಬೆಂಗಳೂರಿನ ಕಾರ್ಪೊರೆಟ್‌ ರಾಜಕಾರಣದಲ್ಲಿ ಪಳಗಿದ ಸಚಿವ ಸೋಮಣ್ಣ ಹಾಗೂ ಚಾ.ನಗರದಂಥ ಗ್ರಾಮೀಣ ಪ್ರದೇಶದ ಗ್ರಾಮಪಂಚಾಯಿತಿ ರಾಜಕಾರಣದಲ್ಲಿ ಪಳಗಿದ ಪುಟ್ಟರಂಗಶೆಟ್ಟಿ ನಡುವಿನ ಕಾದಾಟಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ. ತಮ್ಮ ಸಾಂಪ್ರದಾಯಿಕ ಮತಗಳನ್ನು ಬಿಟ್ಟು, ಎದುರಾಳಿಯ ಮತಗಳನ್ನು ಸೆಳೆಯುವತ್ತ ಬಿಜೆಪಿ ಕಾಂಗ್ರೆಸ್‌ ಪರಸ್ಪರ ತೀವ್ರ ಯತ್ನ ನಡೆಸುತ್ತಿವೆ. ದಲಿತ, ಕುರುಬ, ಉಪ್ಪಾರ ಮತಗಳನ್ನು ಸೆಳೆಯಲು ಸೋಮಣ್ಣ ಟೀಂ ತಂತ್ರಗಾರಿಕೆ ನಡೆಸುತ್ತಿದೆ. ಇತ್ತ, ಒಂದಷ್ಟಾದರೂ ಲಿಂಗಾಯತ ಮತಗಳನ್ನು ಸೆಳೆಯಲು ಪುಟ್ಟರಂಗಶೆಟ್ಟಿ ಶ್ರಮ ಪಡುತ್ತಿದ್ದಾರೆ. ಈ ಪ್ರಯತ್ನಗಳಲ್ಲಿ ಯಾರು ಹೆಚ್ಚು ಸಫ‌ಲರಾಗುತ್ತಾರೋ ಅವರು ಈ ಬಾರಿ ಗೆಲುವು ಸಾಧಿಸಲಿದ್ದಾರೆ.

Advertisement

ಲಿಂಗಾಯತ, ದಲಿತರ ಪ್ರಾಬಲ್ಯ: ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ದಲಿತ ಮತದಾರರು ಹೆಚ್ಚಾ ಕಡಿಮೆ ಸಮ ಪ್ರಮಾಣದಲ್ಲಿದ್ದಾರೆ. ಲಿಂಗಾಯತರು ಹಾಗೂ ನಾಯಕ ಸಮುದಾಯದ ಮತ ಬಲವನ್ನು ಬಿಜೆಪಿ ನೆಚ್ಚಿಕೊಂಡಿದೆ. ದಲಿತ, ಉಪ್ಪಾರ, ಕುರುಬ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ ನ ಮತಬ್ಯಾಂಕ್‌ ಆಗಿವೆ. ಬಿಎಸ್‌ಪಿ ಅಭ್ಯರ್ಥಿ ಹ.ರಾ. ಮಹೇಶ್‌ ಕಾಂಗ್ರೆಸ್‌ ನ ಮತಬ್ಯಾಂಕ್‌ಗೆ ಕಿಂಡಿ ಕೊರೆದು ಸ್ವಲ್ಪ ಮತಗಳನ್ನಾದರೂ ಸೆಳೆಯುತ್ತಾರೆ ಎಂಬ ಆತಂಕ ಕಾಂಗ್ರೆಸ್‌ ಪಕ್ಷಕ್ಕಿದೆ. ಇನ್ನೊಂದೆಡೆ ಲಿಂಗಾಯತರೇ ಆದ, ಜೆಡಿಎಸ್‌ನ ಆಲೂರು ಮಲ್ಲು, ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌, ಸರ್ವೋದಯ ಪಕ್ಷದ ಮಹೇಶ್‌ ಕುಮಾರ್‌, ಆಮ್‌ ಆದ್ಮಿ ಪಕ್ಷದ ಗುರುಪ್ರಸಾದ್‌ ತಮ್ಮ ಶಕಾöನುಸಾರ ಒಂದಷ್ಟು ಮತಗಳನ್ನು ಸೆಳೆದರೆ ಕಷ್ಟ ಎಂಬ ಆತಂಕ ಬಿಜೆಪಿಗಿದೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next