ಮೈಸೂರು: ಯದುವಂಶದ ಕುಡಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತ್ರಿಷಿಕಾ ಕುಮಾರಿ ದಂಪತಿಯ
ಮಗುವಿಗೆ ಫೆ.20ರಂದು ನಾಮಕರಣ ಶಾಸ್ತ್ರ ನಡೆಯಲಿದೆ.
ಅರಮನೆಯ ಕಲ್ಯಾಣಮಂಟಪದಲ್ಲಿ ಫೆ.19, 20ರಂದು ನಾಮಕರಣ ಶಾಸ್ತ್ರ ಏರ್ಪಡಿಸಲು ಪ್ರಮೋದಾದೇವಿ ಒಡೆಯರ್ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 19ರಂದು ಧಾರ್ಮಿಕ ಪೂಜೆ ವಿಧಿ ವಿಧಾನಗಳು ನಡೆಯಲಿದ್ದು, 20ರಂದು ಉತ್ತರಭಾದ್ರ ನಕ್ಷತ್ರದಲ್ಲಿ ನಾಮಕರಣ ಶಾಸ್ತ್ರ ನಡೆಯಲಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನ್ಮದಿನ (ಫೆ.20)ದಂದೇ ಮೊಮ್ಮಗನಿಗೆ ನಾಮಕರಣ ಮಾಡುತ್ತಿರುವುದು ವಿಶೇಷ. ಶ್ರೀಕಂಠದತ್ತ ಒಡೆಯರ್ ನಿಧನಾನಂತರ ಪ್ರಮೋದಾದೇವಿ ಯದುವೀರ್ ಅವರನ್ನು 2013ರಲ್ಲಿ ದತ್ತು ಸ್ವೀಕರಿಸಿ, 2016ರಲ್ಲಿ ರಾಜಸ್ಥಾನದ ಡುಂಗರ್‌ಪುರ್ ರಾಜಮನೆತನ ತ್ರಿಷಿಕಾಕುಮಾರಿಯನ್ನು ಯದುವೀರ್‌ಗೆ ವಿವಾಹ ಮಾಡಿದ್ದರು. ತ್ರಿಷಿಕಾ ಕುಮಾರಿ 2017ರ ನ.6ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಲ್ಲಿಂದ ತಾಯಿಮನೆಗೆ ತೆರಳಿದ್ದರು. ಫೆಬ್ರವರಿ ಎರಡನೇ ವಾರದಲ್ಲಿ ಮಗು-ಬಾಣಂತಿಯನ್ನು ಮೈಸೂರಿಗೆ ಕರೆತರಲಾಗುತ್ತದೆ ಎಂದು ಅರಮನೆ ಮೂಲಗಳು ತಿಳಿಸಿವೆ.