ಚಾಮರಾಜನಗರ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಶನಿವಾರ ರಸ್ತೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ನಗರದ ಸಂತೆಮರಹಳ್ಳಿ ರಸ್ತೆಯಲ್ಲಿ ಜಾಲಹಳ್ಳಿಹುಂಡಿ ಬಳಿ ರಾಷ್ಟಿÅàಯ ಹೆದ್ದಾರಿಯಲ್ಲಿ ಸಮಾವೇಶಗೊಂಡ ರೈತರು, ರಸ್ತೆ ಮೇಲೆ ಕುಳಿತು ಧರಣಿ ನಡೆಸಿದರು. ರದ್ದಾಗಲಿ ರದ್ದಾಗಲಿ ರೈತ ವಿರೋಧಿ ಕೃಷಿ ಕಾಯ್ದೆಗಳು ರದ್ದಾಗಲಿ, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ಮುಂದುವರಿಸಿದಾಗ ಪೊಲೀಸರು ಪ್ರತಿಭಟನಾನಿರತ ರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ರೈತರಿಗೆ ಮಾರಕವಾಗುವ ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ನಾಚಿಗೇಡಿನ ಸಂಗತಿ ಯಾಗಿದೆ ಎಂದು ಆರೋಪಿಸಿದರು.
ರೈತ ವಿರೋಧಿ ಕಾಯ್ದೆ ಜಾರಿಗೆ ತರಲು ಕಾರ್ಪೊರೆಟ್ ಕಂಪನಿ ಗಳು ಹುನ್ನಾರ ನಡೆಸಿ, ದೇಶದ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಒಂದೂವರೆ ವರ್ಷದ ಕಾಲ ಈ ಕಾಯ್ದೆಯನ್ನು ನಾವು ತಡೆಯಲು ಸಿದ್ಧ ಎನ್ನುತ್ತಿದೆ. ಅಂದರೆ ಈ ಕಾಯ್ದೆಯಲ್ಲಿ ಲೋಪ ಇರುವುದು ಕೇಂದ್ರ ಸರ್ಕಾರಕ್ಕೂ ಗೊತ್ತಿದೆ ಎಂದರು.
ವಿದ್ಯುತ್, ಭೂ ಸುಧಾರಣೆ ತಿದ್ದುಪಡಿ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೈತ ವಿರೋಧಿ ನೀತಿಯಿಂದಾಗಿ ರೈತವರ್ಗ ಗುಲಾಮಗಿರಿಗೆ ಸಿಲುಕಿ ಬಂಡವಾಳ ಶಾಹಿಗಳ ಕೈಕೆಳಗೆ ಮಂಡಿಯೂರಿ ಕುಳಿತು ಕೊಳ್ಳಬೇಕಾಗುತ್ತದೆ. ಇಂಥ ಕಾಯ್ದೆಗಳನ್ನು ಜಾರಿಗೊಳಿಸಲು ಆತುರ ತೋರಿಸುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ನಿಯಂತ್ರಿಸುವ ಲೋಕಪಾಲ ಕಾಯ್ದೆ, ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಲು ಆಸಕ್ತಿ ತೋರಿಸುವುದಿಲ್ಲವೇಕೆ ಎಂದು ಪ್ರಶ್ನಿಸಿದರು.
ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಎಸ್.ಪಿ.ಮಹೇಶ್, ಬ.ಮ. ಕೃಷ್ಣಮೂರ್ತಿ, ಸಿದ್ದರಾಜು ಮತ್ತಿತರರು ಈ ಚಳವಳಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ರಾಜ್ಯ ರೈತ ಸಂಘದ ವಿಭಾಗೀಯ ಸಂಚಾಲಕ ಎ.ಎಂ. ಮಹೇಶ್ ಪ್ರಭು, ಹೆಬ್ಬಸೂರು ಬಸವಣ್ಣ, ಜ್ಯೋತಿಗೌಡನಪುರ ಸಿದ್ದರಾಜು, ಜಿ.ಎಂ.ಗಾಡ್ಕರ್, ಸಂಘಸೇನ, ನಿಜಧ್ವನಿ ಗೋವಿಂದ ರಾಜು, ಮೂಡಲಪುರ ಶಿವಮೂರ್ತಿ, ನಾಗರಾಜು, ಆಲೂರು ಸಿದ್ದರಾಜು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.