Advertisement

ಧರ್ಮಸ್ಥಳದಲ್ಲಿ ಚಲುವರಾಯಸ್ವಾಮಿ ಪ್ರಮಾಣ ಮಾಡಲಿ

11:21 AM May 11, 2019 | Team Udayavani |

ಮಂಡ್ಯ/ನಾಗಮಂಗಲ: ಚಲುವರಾಯಸ್ವಾಮಿ ಸತ್ಯವಂತನೇ ಆಗಿದ್ದರೆ ಸುಮಲತಾ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡಿಲ್ಲವೆಂದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಅಥವಾ ಚುಂಚನಗಿರಿಯ ಶ್ರೀ ಕಾಲಭೈರವೇಶ್ವರಸ್ವಾಮಿ ಎದುರು ಪ್ರಮಾಣ ಮಾಡಲಿ ಎಂದು ಶಾಸಕ ಸುರೇಶ್‌ಗೌಡ ಸವಾಲು ಹಾಕಿದರು.

Advertisement

ಚುನಾವಣೆಯಲ್ಲಿ ಚಲುವರಾಯಸ್ವಾಮಿ ನಿಖೀಲ್ಗೆ ವಿರುದ್ಧವಾಗಿ ಸುಮಲತಾ ಪರ ಪ್ರಚಾರ ಮಾಡಿದ್ದಾರೆ ಎಂದು ನಾನು ಪ್ರಮಾಣ ಮಾಡುತ್ತೇನೆ. ಅದೇ ರೀತಿ ಅವರೂ ಪ್ರಮಾಣ ಮಾಡಲಿ. ಒಮ್ಮೆ ಪ್ರಮಾಣ ಮಾಡಿದರೆ ಅವರು ರಾಜಕೀಯ ವ್ಯಭಿಚಾರಿಯಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ವಾಗ್ಧಾಳಿ ನಡೆಸಿದರು.

ಇದರ ಜೊತೆಗೆ ಹಿಂದಿನ ಲೋಕಸಭಾ ಉಪ ಚುನಾವಣೆಯಲ್ಲಿ ಪುಟ್ಟರಾಜು ಅವರನ್ನು ಸೋಲಿಸಲು ಹಾಗೂ ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಲು ರಾಮಮೂರ್ತಿ ಬಳಿ ಯಾವ ಯಾವ ಹೋಟೆಲ್ನಲ್ಲಿ ಎಷ್ಟೆಷ್ಟು ಹಣ ಪಡೆದಿದ್ದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತೇನೆ. ಆ ವಿಷಯವಾಗಿಯೂ ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಅವರೂ ಪ್ರಮಾಣಕ್ಕೆ ಬರಲಿ. ಅಲ್ಲಿ ಅವರ ಸತ್ಯಾಸತ್ಯತೆಯ ದರ್ಶನ ಮಾಡಿಸುತ್ತೇನೆ ಎಂದು ಶಾಸಕ ಸುರೇಶ್‌ಗೌಡ ಮತ್ತೂಂದು ಸವಾಲು ಹಾಕಿದರು.

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಪುಟ್ಟ ರಾಜುರವರು ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸಲು ಚಲುವರಾಯಸ್ವಾಮಿ ಮತ್ತು ಆತನ ಟೀಂ ಕಾಂಗ್ರೆಸ್‌ ಪಕ್ಷದಿಂದ ಹಣ ಪಡೆದಿತ್ತು. ಪುಟ್ಟರಾಜು ಅವರ ಮೊದಲನೇ ಸೋಲಿಗೆ ಚಲುವರಾಯಸ್ವಾಮಿ ಮತ್ತು ಟೀಂ ಕಾರಣ. ಆ ಚುನಾವಣೆಯಲ್ಲಿ ರಮ್ಯಾ ಅವರಿಗೆ ಬೆಂಬಲ ನೀಡಿದ್ದರು. ಆ ಸಂದರ್ಭ ಕಾಂಗ್ರೆಸ್‌ನಿಂದ ಹಣ ಪಡೆದಿದ್ದಕ್ಕೆ ನಾನೇ ಸಾಕ್ಷಿ. ಆದರೆ, ಎರಡನೇ ಬಾರಿಯೂ ಪುಟ್ಟರಾಜು ಅವರನ್ನು ಸೋಲಿಸುವ ಹುನ್ನಾರ ನಡೆದಿತ್ತು. ಪುಟ್ಟರಾಜು ಬುದ್ಧಿವಂತರಾದರು, ಹಾಗಾಗಿ ಗೆದ್ದರು ಎಂದು ಹೇಳಿದರು.

ಶಿಖಂಡಿ ರಾಜಕಾರಣ: ಸುಮಲತಾ ಅವರಿಗೆ ಚುನಾವಣೆಯಲ್ಲಿ ನೇರವಾಗಿ ಬೆಂಬಲಿಸಿದ್ದರೆ ಗಂಡಸ್ತನ ಅನ್ನಬಹುದಿತ್ತು. ನಾನು ತಟಸ್ಥವಾಗಿದ್ದೆ ಅಂತ ಸುಳ್ಳು ಏಕೆ ಹೇಳಬೇಕು. ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ರಮ್ಯಾ ಅವರನ್ನು ಅಭ್ಯರ್ಥಿ ಮಾಡಿದ್ದು ನಾನು ಬಹಿರಂಗವಾಗಿಯೇ ಅವರನ್ನು ಬೆಂಬಲಿಸಿದ್ದೆ. ನಾನು ಗಂಡಸು. ಅದಕ್ಕೆ ಅವರನ್ನು ನೇರವಾಗಿ ಬೆಂಬಲಿಸಿದೆ. ಅವರ ಹಾಗೇ ಓರ್ವ ಸ್ತ್ರೀಯನ್ನು ಮುಂದೆ ಬಿಟ್ಟುಕೊಂಡು ಕಳ್ಳತನದಲ್ಲಿ ಸಪೋರ್ಟ್‌ ಮಾಡಲಿಲ್ಲ. ನಾನೆಂದೂ ಶಿಖಂಡಿತನದ ರಾಜಕಾರಣ ಮಾಡಲಿಲ್ಲ ಎಂದು ಕಿಡಿಕಾರಿದರು.

Advertisement

ಏಕವಚನ ಪ್ರಯೋಗ: ಚುನಾವಣೆಗೂ ಪೂರ್ವದಲ್ಲಿ ಸುಮಲತಾ ಅವರನ್ನು ಬಿಎಸ್‌ವೈ ಮನೆಗೆ ಚುನಾವಣಾ ಚರ್ಚೆಗೆ ಕರೆದುಕೊಂಡು ಹೋದವನೇ ಚಲುವರಾಯಸ್ವಾಮಿ. ಚುನಾವಣೆ ಖರ್ಚಿಗೆ ಹಣ ಕೊಡಿಸುತ್ತಾನೆ. ನಾನು ಕಾಂಗ್ರೆಸ್‌ ನಾಯಕ ಎಂದು ಸ್ವಯಂ ಘೋಷಿಸಿಕೊಂಡಿರುವ ಈತ, ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೂತ್‌ ಮಟ್ಟದಲ್ಲಿ ತೆರಳಿ ಚುನಾವಣಾ ಪ್ರಚಾರ ಮಾಡುತ್ತಾನೆ. ಈಗ ಫ‌ಲಿತಾಂಶ ಕೈ ಕೊಟ್ಟರೆ ಎಂಬ ಭೀತಿಯಿಂದ ನಾನು ತಟಸ್ಥನಾಗಿದ್ದೆ ಎಂದು ಸುಳ್ಳಾಡುತ್ತಿದ್ದಾನೆ. ತೊಡೆ ತಟ್ಟಿ ನಮ್ಮಂತೆ ಗಂಡಸ್ತನದ ರಾಜಕಾರಣ ಮಾಡಬೇಕು. ಈ ರೀತಿ ತೆರೆಮರೆಯ ರಾಜಕಾರಣ ಸಲ್ಲದು. ಆತ ಗಂಡು ಅಲ್ಲ, ಹೆಣ್ಣು ಅಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲೆಯಲ್ಲಿ 4 ಮಂದಿ ಕಾಂಗ್ರೆಸ್‌ನಿಂದ ಹೊರಹೋಗುತ್ತಾರೆ. ಅವರ್ಯಾರು ಕಾಂಗ್ರೆಸ್‌ ಪಕ್ಷಕ್ಕೆ ಒಗ್ಗುವವರಲ್ಲ. ಅವರು ಕಾಂಗ್ರೆಸ್‌ ಪಕ್ಷಕ್ಕೆ ಸಲ್ಲದವರು ಎಂದು ನಾನು ಎಂದೋ ಸಿದ್ಧರಾಮಯ್ಯನವರಿಗೆ ಮತ್ತು ಪರಮೇಶ್ವರ್‌ರವರಿಗೆ ಕಿವಿಮಾತು ಹೇಳಿದ್ದೆ ಎಂದು ಹೇಳಿದರು.

ಹೊಸ ಖಯಾಲಿ: ನಾನು ಇನ್ನು ಇದ್ದೇನೆ ಎನ್ನುವುದನ್ನು ರುಜುವಾತು ಮಾಡುವ ಸಲುವಾಗಿ ಚಲುವರಾಯಸ್ವಾಮಿಗೆ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷನಾಗುವ ಹೊಸ ಖಯಾಲಿ ಹುಟ್ಟಿಕೊಂಡಿದೆ ಎಂದು ಕಟಕಿಯಾಡಿದ ಸುರೇಶ್‌ಗೌಡ, ನಮ್ಮ ನಾಯಕರು ಪುಟ್ಟರಾಜು. ಹಿರಿಯರು, ಮಾರ್ಗದರ್ಶಕರಾಗಿ ಡಿ.ಸಿ.ತಮ್ಮಣ್ಣನವರಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಹೇಳಿದರು.

ರಾಹುಲ್ ಪ್ರಧಾನಿಯಾಗೋದು ಇಷ್ಟವಿಲ್ಲ: ರಾಹುಲ್ಗಾಂಧಿ ಪ್ರಧಾನಮಂತ್ರಿ ಆಗಬಾರದು ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಪಿತೂರಿ ನಡೆಸುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದ ನಿಖೀಲ್ ಗೆದ್ದರೆ ಮತ ಹಾಕುವುದು ರಾಹುಲ್ ಅವರಿಗೆ. ಅದೇ ಸುಮಲತಾ ಗೆದ್ದರೆ ಯಾರಿಗೆ ಮತ ಹಾಕುತ್ತಾರೆ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ. ಮೈಸೂರಿನ ಚುನಾವಣಾ ಪ್ರಚಾರದಲ್ಲಿ ಮೋದಿಯವರು ಸುಮಲತಾ ಬೆಂಬಲಿಸಿ ಎಂದು ಸಾರಿ ಸಾರಿ ಹೇಳಿದ್ದಾರೆ. ಈಗ ನೀವೇ ಹೇಳಿ. ರಾಹುಲ್ ಪ್ರಧಾನಿ ಆಗುವುದನ್ನು ಜೆಡಿಎಸ್‌ನವರು ತಡೆಯುತ್ತಿಲ್ಲ, ಕಾಂಗ್ರೆಸ್‌ನವರೇ ತಡೆಯುತ್ತಿದ್ದಾರೆ ಎಂದು ಶಾಸಕ ಸುರೇಶ್‌ಗೌಡ ದೂಷಿಸಿದರು.

ಗೋಷ್ಠಿಯಲ್ಲಿ ಪುರಸಭಾ ಸದಸ್ಯ ಚನ್ನಪ್ಪ, ಜೆಡಿಎಸ್‌ ಮುಖಂಡ ಚೇತನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next