ಬಾಗಲಕೋಟೆ: ಜಿಲ್ಲೆಯಲ್ಲಿ ಚಾಲುಕ್ಯ ಉತ್ಸವ ಆಯೋಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಪಂ ಸಭಾ ಭವನದಲ್ಲಿ ನಡೆದ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯತ್ತ ಪ್ರವಾಸಿಗರು ಹರಿದು ಬರುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಜಿಲ್ಲೆಗೆ ಸೆಳೆಯಲು ಚಾಲುಕ್ಯ ಉತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಕೋವಿಡ್ ಕಾರಣದಿಂದ ಯಾವುದೇ ಉತ್ಸವಗಳಾಗದೇ ಅನುದಾನ ಕೂಡ ಹಾಗೆಯೇ ಉಳಿದಿದೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಚಾಲುಕ್ಯ ಉತ್ಸವ ಆಯೋಜಿಸಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಯಿಂದ ನೀಡುವ ಭೂಮಿ, ಎಜೆಎಸ್‌ಕೆ ಹಾಗೂ ಸಕಾಲ ಸೇವೆಗಳಲ್ಲಿ ಬಾಗಲಕೋಟೆ ಜಿಲ್ಲೆ ಅಕ್ಟೋಬರ್ ಮಾಹೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಸಂತೋಷದ ವಿಷಯ. ಇದಕ್ಕೆ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
Related Articles
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಯಾವುದೇ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ಅಕ್ಟೋಬರ್ ಮಾಹೆಯಿಂದ ಇಲ್ಲಿವರೆಗೆ ಒಟ್ಟಾರೆಯಾಗಿ 79,488 ಮೆಟ್ರಿಕ್ ಟನ್ ರಸಗೊಬ್ಬರಗಳು ಹಂಚಿಕೆಯಾಗಿದ್ದು ಸದ್ಯಕ್ಕೆ ಯಾವುದೇ ರಸಗೊಬ್ಬರದ ಕೊರತೆ ಇರುವುದಿಲ್ಲ ಮತ್ತು ಮುಂದೆ ಕೂಡ ಯಾವುದೇ ರಸಗೊಬ್ಬರದ ಸರಬರಾಜು, ಮಾರಾಟದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇ-ಕೆವೈಸಿ ಅಪ್ಡೇಶನ್‌ಗಾಗಿ ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರದೊಂದಿಗೆ ನವೆಂಬರ್ ಮಾಹೆಯಲ್ಲಿ ಶೇ.73 ಫಲಾನುಭವಿಗಳ ಇ ಕೆವೈಸಿ ಮಾಡಗಿದ್ದು, ಆದ್ಯತೆ ಮೇರೆಗೆ ಕ್ರಮವಹಿಸಿ ಮುಂದಿನ ಸಭೆ ಸೇರುವುದರೊಳಗಾಗಿ ಶೇ.100ರಷ್ಟು ಇ ಕೆವೈಸಿ ಮಾಡಲಾಗುವುದೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸಭೆಗೆ ಮಾಹಿತಿ ನೀಡಿದರು.
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಈಗಾಗಲೇ ಲಸಿಕಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ರೋಗಗ್ರಸ್ತ ಜಾನುವಾರುಗಳಿಗೆ ಜಿಪಂ ಅನುದಾನದಡಿ ಈ ರೋಗಕ್ಕೆ ಅವಶ್ಯವಿರುವ ಔಷಧಿ ಗಳನ್ನು ತುರ್ತಾಗಿ ಖರೀದಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಪಂಗಳ ಮೂಲಕ ಪ್ರತಿಯೊಂದು ಹಳ್ಳಿಯಲ್ಲೂ ಫಾಗಿಂಗ್ ಮತ್ತು ಸ್ಯಾನಿಟೈಜೇಶನ್ ಕೈಗೊಳ್ಳಲಾಗುತ್ತಿದ್ದು, ರೋಗ ನಿಯಂತ್ರಣದಲ್ಲಿದೆ. ಮೃತಪಟ್ಟ ಜಾನುವಾರುಗಳಿಗೆ ಸರ್ಕಾರ ನಿಗದಿಪಡಿಸಿದ ಪರಿಹಾರಧನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅರಣ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ಇತರೆ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿ ಕಾರಿ ಪಿ. ಸುನೀಲಕುಮಾರ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿ. ಭೂಬಾಲನ್, ಕೃಷ್ಣಾ ಮೆಲ್ದಂಡೆ ಯೋಜನಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡೆ, ಪ್ರೊಬೇಶನರಿ ಐಎಎಸ್ ಅಧಿಕಾರಿ ರಮೇಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಇದ್ದರು.
ಜಿಲ್ಲೆಯತ್ತ ಪ್ರವಾಸಿಗರು ಹರಿದು ಬರುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಜಿಲ್ಲೆಗೆ ಸೆಳೆಯಲು ಚಾಲುಕ್ಯ ಉತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಕೋವಿಡ್ ಕಾರಣದಿಂದ ಯಾವುದೇ ಉತ್ಸವಗಳಾಗದೇ ಅನುದಾನ ಕೂಡ ಹಾಗೆಯೇ ಉಳಿದಿದೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಚಾಲುಕ್ಯ ಉತ್ಸವ ಆಯೋಜಿಸಬೇಕು. –ಶಿವಯೋಗಿ ಕಳಸದ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ