ಜಗತ್ತಿನಾದ್ಯಂತ 12 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೋವಿಡ್-19 ವೈರಸ್ ಸದ್ಯಕ್ಕಂತೂ ತನ್ನ ಹಾವಳಿ ನಿಲ್ಲಿಸುವ ಸೂಚನೆ ನೀಡುತ್ತಿಲ್ಲ.ಜಗತ್ತಿನ ಮೊದಲೆರಡು ಹಾಟ್‌ಸ್ಪಾಟ್‌ಗಳಾದ ಅಮೆರಿಕ ಹಾಗೂ ಭಾರತದಲ್ಲಿ ಕ್ರಮವಾಗಿ 1 ಕೋಟಿ ಹಾಗೂ 85 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಭಾರತವೊಂದರಲ್ಲೇ 8 ತಿಂಗಳಲ್ಲಿ 1 ಲಕ್ಷ 26 ಸಾವಿರ ಜನರನ್ನು ಈ ವೈರಸ್ ಬಲಿ ಪಡೆದಿದೆ.
ಅನೇಕ ದೇಶಗಳು ಕೋವಿಡ್‌ನ ಎರಡನೇ ಅಲೆಯ ಅಪಾಯ ಎದುರಿಸುತ್ತಿದ್ದರೆ, ಉಳಿದ ದೇಶಗಳಲ್ಲಿ ಅಂಥದ್ದೊಂದು ಅಲೆ ಆರಂಭವೂ ಆಗಿದೆ. ಇಂಥ ಬಿಕ್ಕಟ್ಟಿನ ಸಮಯದಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು ವರ್ಲ್x ಹೆಲ್ತ್ ಅಸೆಂಬ್ಲಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮಹಾಮಾರಿಗಳು, ಆರೋಗ್ಯ ಸಮಸ್ಯೆಗಳ ವಿಚಾರದಲ್ಲಿ ರಾಷ್ಟ್ರಗಳು ಸಿದ್ಧವಾಗಿರಬೇಕು ಎಂದು ಎಚ್ಚರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರಗಳಲ್ಲಿನ ಆರೋಗ್ಯ ಮೂಲಸೌಕರ್ಯಾಭಿವೃದ್ಧಿಯ ವಿಚಾರದ ಬಗ್ಗೆಯೂ ಈ ಚರ್ಚೆಯಲ್ಲಿ ಬೆಳಕು ಚೆಲ್ಲಲಾಗಿದೆ. ಸತ್ಯವೇನೆಂದರೆ, ಸಾಂಕ್ರಾಮಿಕವೊಂದರ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವಂಥ ಅತೀ ಸಶಕ್ತ ಆರೋಗ್ಯ ವ್ಯವಸ್ಥೆ ಯಾವ ರಾಷ್ಟ್ರದಲ್ಲೂ ಇರುವುದಿಲ್ಲವಾದರೂ ಆರೋಗ್ಯ ತುರ್ತು ಸ್ಥಿತಿಗಳನ್ನು ಬಲಿಷ್ಠವಾಗಿ ಎದುರಿಸಲು ಹೆಲ್ತ್‌ಕೇರ್ ಇನ್‌ಫ್ರಾಸc†ಕ್ಚರ್ ಬಲಿಷ್ಠವಾಗಿ ಇರಲೇಬೇಕಾಗುತ್ತದೆ.
ಕೆಲವು ರಾಷ್ಟ್ರಗಳು ಕೋವಿಡ್ ತಡೆಯುವಲ್ಲಿ ಬಹಳ ತತ್ತರಿಸಿದವಾದರೂ ಇದೇ ವೇಳೆಯಲ್ಲೇ ಅನ್ಯ ರೋಗಿಗಳಿಗೆ ಚಿಕಿತ್ಸೆಯ ಅಭಾವ ಎದುರಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ ಎನ್ನುವುದು ಗಮನಾರ್ಹ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಹೆಲ್ತ್ ಇನ್‌ಫ್ರಾಸ್ಟ್ರಕ್ಚರ್ ಬಲಿಷ್ಠವಾಗಿ ಇರುವುದು. ಇಂದು ಭಾರತದಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ, ಯಕೃತ್ತಿಗೆ ಸಂಬಂಧಿಸಿದ ರೋಗಗಳ ಚಿಕಿತ್ಸೆಗೆ ಅನೇಕ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳು ಇವೆಯಾದರೂ ಸಾಂಕ್ರಾಮಿಕದ ಸಂದರ್ಭದಲ್ಲಿ ಹೇಗೆ ಇಡೀ ಆರೋಗ್ಯ ವ್ಯವಸ್ಥೆಯ ಗಮನ ಒಂದೇ ಕಡೆ ಹೊರಳುವಂತಾಯಿತು, ಅನ್ಯ ರೋಗಿಗಳು ಪರದಾಡುವಂತಾಯಿತು ಎನ್ನುವುದನ್ನು ಗಮನಿಸಿದ್ದೇವೆ. ಸ್ವಾಸ್ಥ್ಯ ವಲಯದಲ್ಲಿ ಇನ್ನೂ ಅಪಾರ ಪ್ರಮಾಣದ ಹೂಡಿಕೆ, ಅಭಿವೃದ್ಧಿಯ ಅಗತ್ಯವಿದೆ ಎನ್ನುವುದನ್ನು ಇದು ಸಾರುತ್ತದೆ. ಆರೋಗ್ಯ ತುರ್ತುಪರಿಸ್ಥಿತಿಗಳು ಎದುರಾದಾಗ, ಅನ್ಯ ರೋಗಿಗಳಿಗೆ ತೊಂದರೆಯಾಗದಂಥ ಬಲಿಷ್ಠ ವ್ಯವಸ್ಥೆಯನ್ನು ರೂಪಿಸುವುದು ಅತ್ಯವಶ್ಯಕ ಎನ್ನುವ ಪಾಠವನ್ನು ಈಗ ಜಗತ್ತು ಕಲಿಯಬೇಕಿದೆ. ಕೋವಿಡ್-19 ಜಗತ್ತಿನ ಆರೋಗ್ಯ ವ್ಯವಸ್ಥೆಗಳನ್ನೆಲ್ಲ ಕಟಕಟೆಯಲ್ಲಿ ನಿಲ್ಲಿಸಿರುವುದು, ಬಹುದೊಡ್ಡ ಪಾಠವನ್ನು ಕಲಿಸಿರುವುದು ಸತ್ಯ. ದೇಶವಾಸಿಗಳೇ ಅಸ್ವಸ್ಥರಾದಾಗ, ದೇಶ ಸ್ವಸ್ಥವಾಗುವುದು ಸುಲಭವಲ್ಲ. ಈ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಭಾರತ ಸೇರಿದಂತೆ ಜಾಗತಿಕ ರಾಷ್ಟ್ರಗಳೆಲ್ಲ ಹೆಲ್ತ್‌ಕೇರ್ ವಲಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಲು ಮುಂದಾಗಲೇಬೇಕಿದೆ.