Advertisement

ಕ್ರೋಢೀಕರಣ ಸವಾಲು; ಸಿಎಂ ಕಾರ್ಯಕ್ರಮಗಳಿಗೆ ಹಣಕಾಸು ಹೊಂದಾಣಿಕೆ ಕಷ್ಟ

06:00 AM Jul 16, 2018 | |

ಬೆಂಗಳೂರು: ಬಜೆಟ್‌ ವಿಚಾರದಲ್ಲಿ ತಮ್ಮ ಬಗ್ಗೆ ವ್ಯಕ್ತವಾದ ಟೀಕೆಗೆ ಬಜೆಟ್‌ ಮೇಲಿನ ಉತ್ತರದಲ್ಲಿ ಪರಿಹಾರ ಕಲ್ಪಿಸಲು ಮುಂದಾದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರಾದರೂ ಹೆಚ್ಚುವರಿ ವೆಚ್ಚ ಸುಮಾರು 15 ಸಾವಿರ ಕೋಟಿ ರೂ. ಹೊಂದಾಣಿಕೆಗೆ ಸಂಪನ್ಮೂಲ ಕ್ರೋಢೀಕರಣ ಹೇಗೆ ಎಂಬುದಕ್ಕೆ ದಾರಿ ಹುಡುಕಿಕೊಳ್ಳದ ಕಾರಣ ಆರ್ಥಿಕ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ.

Advertisement

ಸಾಲ ಮನ್ನಾ ಸೇರಿದಂತೆ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನಕ್ಕಿಂತ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಅಂದಾಜು ಮಾಡಿದೆ. ಈ ಪೈಕಿ ಸ್ವಲ್ಪ ಮೊತ್ತವನ್ನು ವಿವಿಧ ಇಲಾಖೆಗಳಲ್ಲಿ ಹಿಂದಿನ ವರ್ಷಗಳಲ್ಲಿ ವೆಚ್ಚ ಮಾಡದೆ ಬಾಕಿ ಉಳಿಸಿಕೊಂಡು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಟ್ಟಿರುವ ಮೊತ್ತವನ್ನು ಆರ್ಥಿಕ ಇಲಾಖೆಗೆ ವಾಪಸ್‌ ಪಡೆದು ಹೊಂದಾಣಿಕೆ ಮಾಡಬಹುದು. ಆದರೂ ಕನಿಷ್ಠ 10 ಸಾವಿರ ಕೋಟಿ ರೂ. ಹೆಚ್ಚುವರಿ ಸಂಪನ್ಮೂಲ ಬೇಕಾಗಿದ್ದು, ಇದನ್ನು ಸರಿಹೊಂದಿಸಲು ಒಂದೋ ಸಾಲದ ಮೊತ್ತ ಹೆಚ್ಚಿಸಬೇಕು ಇಲ್ಲವೇ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ಕಡಿತಗೊಳಿಸಬೇಕು ಎನ್ನುತ್ತಾರೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು.

ಬಜೆಟ್‌ನಲ್ಲಿ ರೈತರ ಸುಸ್ತಿ ಬೆಳೆ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿಗಳು ಅದಕ್ಕಾಗಿ 6,500 ಕೋಟಿ ರೂ. ಒದಗಿಸಿದ್ದರು. ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿದ್ದ ಸಾಲ ಮನ್ನಾ ಬಾಬ್ತು ಬಾಕಿ 4000 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದ್ದªರಾದರೂ ಅದಕ್ಕೆ ಆಯವ್ಯಯದಲ್ಲಿ ಹಣ ತೆಗೆದಿಟ್ಟಿಲ್ಲ. ಅಷ್ಟೇ ಅಲ್ಲ, ನಂತರದಲ್ಲಿ ಒಂದು ಲಕ್ಷ ರೂ.ವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಕೂಡ ಘೋಷಿಸಿದ್ದು, ಇದಕ್ಕೆ ಹೆಚ್ಚುವರಿ 10,500 ಕೋಟಿ ರೂ. ಬೇಕು. ಇನ್ನೊಂದೆಡೆ ಬಜೆಟ್‌ನಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು 7ರಿಂದ 5 ಕೆ.ಜಿ.ಗೆ ಇಳಿಸಿ ಬಳಿಕ ಮತ್ತೆ 7 ಕೆ.ಜಿ.ಗೆ ಹೆಚ್ಚಿಸಿದ್ದಾರೆ. ಇದರ ಜತೆ ರಿಯಾಯಿತಿ ದರದಲ್ಲಿ ಸಕ್ಕರೆ ನೀಡಬೇಕಾಗಿರುವುದರಿಂದ 2000 ಕೋಟಿ ರೂ. ಹೊರೆಯಾಗುತ್ತದೆ. ಇನ್ನೊಂದೆಡೆ ಶನಿವಾರ ಕಾರ್ಯಕ್ರಮವೊಂದರಲ್ಲಿ ರಾಜ್ಯದ ವಿಕಲಚೇತನ ಹಾಗೂ ಬುದ್ಧಿಮಾಂದ್ಯರ ವಿಶೇಷ ಶಾಲೆಯ ಮಕ್ಕಳಿಗೆ ಮುಂದಿನ ತಿಂಗಳಿನಿಂದ ಮಧ್ಯಾಹ್ನದ ಬಿಸಿಯೂಟದ ಜತೆಗೆ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಲಾಗುವುದು ಎಂದೂ ಹೇಳಿದ್ದಾರೆ. ಇವೆಲ್ಲದರಿಂದಾಗಿ ಬಜೆಟ್‌ನಲ್ಲಿ ಹಂಚಿಕೆ ಮಾಡಿದ ಅನುದಾನಕ್ಕಿಂತ ಹೆಚ್ಚುವರಿ 15 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಆದಾಯ ಕ್ರೋಢೀಕರಣ ಎಷ್ಟು?:
ಆದರೆ, ಅಷ್ಟೊಂದು ಹೆಚ್ಚುವರಿ ಹೊರೆಯಾಗಿದ್ದರೂ ಸಂಪನ್ಮೂಲ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯತ್ನ ಮಾಡಿಲ್ಲ. ಡೀಸೆಲ್‌, ಮದ್ಯ, ವಿದ್ಯುತ್‌ ಬಳಕೆ ಮತ್ತು ವಾಹನ ತೆರಿಗೆ ಹೆಚ್ಚಳದ ಮೂಲಕ ಹೆಚ್ಚುವರಿಯಾಗಿ 3177 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹಾಕಿ ಕೊಳ್ಳಲಾಗಿದೆ. ಉಳಿದಂತೆ ಕೇಂದ್ರದ ಸಹಾಯಧನದಲ್ಲಿ 437 ಕೋಟಿ ರೂ. ಹೆಚ್ಚುವರಿ ನಿರೀಕ್ಷೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಸಂಪನ್ಮೂಲ ಸಂಗ್ರಹಕ್ಕೆ ಬೇರೆ ಮಾರ್ಗಗಳನ್ನು ತೋರಿಸಿಲ್ಲ.

ಮುಖ್ಯಮಂತ್ರಿಗಳು ಒಟ್ಟು 2,18,488 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದು, ಆ ಮೂಲಕ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಅನ್ನು 9307 ಕೋಟಿ ರೂ.ನಷ್ಟು ಹಿಗ್ಗಿಸಿದ್ದಾರೆ. ಅದಕ್ಕಾಗಿ 7,806 ಕೋಟಿ ರೂ. ಸಾಲದ ಜತೆಗೆ 3,177 ಕೋಟಿ ರೂ. ತೆರಿಗೆ ಹೆಚ್ಚಳದಿಂದ ಬರುವ ರಾಜಸ್ವ ಲೆಕ್ಕ ತೋರಿಸಲಾಗಿದೆ. ಆದರೆ, ಚಾಲ್ತಿ ಸಾಲ ಮನ್ನಾ, ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಏಳು ಕೆ.ಜಿ.ಗೆ ನಿಗದಿಪಡಿಸಿರುವುದರಿಂದ ಆಗುವ ಹೆಚ್ಚುವರಿ ವೆಚ್ಚಕ್ಕೆ ಬೇಕಾದ ಸಂಪನ್ಮೂಲ ಎಲ್ಲಿಂದ ಹೊಂದಾಣಿಕೆ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

Advertisement

ಇರುವ ದಾರಿಗಳೇನು?:
ವಿವಿಧ ಇಲಾಖೆಗಳಲ್ಲಿ ಹಿಂದಿನ ವರ್ಷಗಳಲ್ಲಿ ವೆಚ್ಚ ಮಾಡದೆ ಬಾಕಿ ಉಳಿಸಿಕೊಂಡು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಟ್ಟಿರುವ ಮೊತ್ತವನ್ನು ಆರ್ಥಿಕ ಇಲಾಖೆಗೆ ವಾಪಸ್‌ ಪಡೆದು ಹೊಂದಾಣಿಕೆ ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಹಣವನ್ನು ಆರ್ಥಿಕ ಇಲಾಖೆಗೆ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಗರಿಷ್ಠ 5 ಸಾವಿರ ಕೋಟಿ ರೂ. ಬರಬಹುದು ಎಂಬ ನಿರೀಕ್ಷೆಯಿದೆ.

ಇನ್ನು 2018-19ನೇ ಸಾಲಿನಲ್ಲಿ ಒಟ್ಟು 47,134 ಕೋಟಿ ಸಾಲ ಮಾಡುವ ಪ್ರಸ್ತಾಪ ಮಾಡಲಾಗಿದ್ದು, ಇದರಿಂದ ವರ್ಷಾಂತ್ಯಕ್ಕೆ ರಾಜ್ಯದ ಒಟ್ಟಾರೆ ಸಾಲದ ಮೊತ್ತ 2,92,220 ಕೋಟಿ ರೂ.ಗೆ ಏರಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಬೇಕಾದರೆ 50 ಸಾವಿರ ಕೋಟಿ ರೂ. ಗಡಿ ದಾಟಿ ಸಾಲದ ಮೊತ್ತ ಹೆಚ್ಚಿಸಬೇಕು ಇಲ್ಲವೇ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ಕಡಿತಗೊಳಿಸಿ ಅದನ್ನು ಬಳಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ ಹಣಕಾಸು ಇಲಾಖೆ ಅಧಿಕಾರಿಗಳು.

ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next