ಚಳ್ಳಕೆರೆ: ತಾಲೂಕಿನೆಲ್ಲೆಡೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಕುಡಿಯುವ ನೀರಿಗಾಗಿ ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬುಡ್ನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಪ್ಪನಹಟ್ಟಿ ಗ್ರಾಮದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ಬೋರಪ್ಪನಹಟ್ಟಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 300ಕ್ಕಿಂತ ಹೆಚ್ಚಿನ ಜನರು ವಾಸವಾಗಿದ್ದಾರೆ. ಗ್ರಾಮದಲ್ಲಿದ್ದ ಒಂದೇ ಕೊಳವೆಬಾವಿಯಲ್ಲಿ ಸ್ವಲ್ಪ ನೀರು ಮಾತ್ರ ಲಭ್ಯವಿದೆ. ಕಳೆದ 20 ದಿನಗಳ ಹಿಂದೆ ಕೊಳವೆಬಾವಿಯ ಮೋಟಾರ್ ಪಂಪ್ ಸುಟ್ಟು ಹೋಗಿದ್ದರಿಂದ ಬೋರ್ ಅನ್ನು ರಿಪೇರಿಗಾಗಿ ಮೇಲೆತ್ತಲಾಗಿತ್ತು. ಗ್ರಾಮಕ್ಕೆ ನೀರು ಒದಗಿಸುವ ಕೊಳವೆಬಾವಿಯ ರಿಪೇರಿ ವಿಳಂಬವಾಗಿದ್ದರಿಮದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಕೊಳವೆಬಾವಿ ರಿಪೇರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಉಂಟಾಗಿದೆ. ಸುತ್ತಮುತ್ತಲಿನ ಕೆಲವು ತೋಟಗಳಲ್ಲಿ ಮಾತ್ರ ನೀರು ಇದ್ದು, ಗ್ರಾಮದ ಮಹಿಳೆಯರು, ಬಾಲಕಿಯರು ಹಾಗೂ ಯುವಕರು ಪ್ರತಿನಿತ್ಯ ನೀರು ತರಲು ಸೈಕಲ್ ಹಾಗೂ ಇತರೆ ವಾಹನಗಳನ್ನು ಅವಲಂಬಿಸಿದ್ದಾರೆ. ಬೋರ್‌ನ ಪಂಪ್ ಸುಟ್ಟು ಹೋದ ನಂತರ ಯಾರೂ ಈ ಬಗ್ಗೆ ಗಮನ ಹರಿಸಿರಲಿಲ್ಲ. ಕೆಲವು ಕಿಡಿಗೇಡಿಗಳು ಕೊಳವೆಬಾವಿಯೊಳಗೆ ಕಲ್ಲುಗಳನ್ನು ಹಾಕಿದ್ದಾರೆ. ಹಾಗಾಗಿ ಈ ಕಲ್ಲುಗಳನ್ನು ತೆಗೆಯುವ ತನಕ ಜನರಿಗೆ ನೀರು ಸಿಗದು. ಪಂಪ್ ಮೋಟಾರ್ ಎತ್ತಿದ ನಂತರ ಮುಂಜಾಗ್ರತಾ ಕ್ರಮವಾಗಿ ಕೊಳವೆ ಪೈಪ್‌ನ ಮೇಲ್ಭಾಗವನ್ನು ಮುಚ್ಚಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ನೀರು ತರಲು ಗ್ರಾಮದಿಂದ ತೋಟಗಳಿಗೆ ಅಲೆಯಬೇಕಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಆಗುತ್ತಿಲ್ಲ.
ಪ್ರತಿದಿನ ಬೆಳಿಗ್ಗೆಯಿಂದ ಸಂಜೆ ತನಕ ಅಲೆದಾಡಿ ನೀರು ತರಬೇಕಿದೆ. ಮಧ್ಯಾಹ್ನ ಮಾತ್ರ ವಿದ್ಯುತ್ ಸಂಪರ್ಕವಿದ್ದು, ನಂತರ ಕೈಕೊಡುವುದರಿಂದ ಗ್ರಾಮಸ್ಥರು ಬೆಳಗಿನ ವೇಳೆಯಲ್ಲೇ ನೀರು ತರಲು ಕಾದು ಕುಳಿತುಕೊಳ್ಳಬೇಕಾಗಿದೆ. ಗ್ರಾಮದಲ್ಲಿ ಒಂದೇ ಕೊಳವೆಬಾವಿ ಇದ್ದು, ಅದು ಕೆಟ್ಟರೆ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆ ಉಂಟಾಗುತ್ತದೆ. ಅದ್ದರಿಂದ ಹೆಚ್ಚುವರಿ ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.