Advertisement

ಚಳ್ಳಕೆರೆಯಮ್ಮನ ಅದ್ಧೂರಿ ಸಿಡಿ ಉತ್ಸವ

03:38 PM Mar 06, 2020 | Naveen |

ಚಳ್ಳಕೆರೆ: ಗ್ರಾಮದೇವತೆ ಶ್ರೀ ಚಳ್ಳಕೆರೆಯಮ್ಮನ ಸಿಡಿ ಉತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ಹರಕೆ ಹೊತ್ತವರು ಸಿಡಿ ಕಂಬವನ್ನೇರಿ ತಮ್ಮ ಹರಕೆ ತೀರಿಸಿದರು. ಶಾಸಕ ಟಿ.ರಘುಮೂರ್ತಿ ಸಿಡಿ ಉತ್ಸವದ ಮೆರವಣಿಗೆಯ ಗಾಡಿ ಏರಿ ಭಕ್ತರತ್ತ ಕೈಬೀಸಿದರು. ಮಧ್ಯಾಹ್ನ 3:30ಕ್ಕೆ ಚಳ್ಳಕೆರೆಯಮ್ಮ ದೇವಸ್ಥಾನದಿಂದ ಸಿಡಿ ಉತ್ಸವ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಆಯಗಾರರು, ತಳವಾರರು, ಶಾನಭೋಗರು ಉಪಸ್ಥಿತರಿದ್ದರು. ಸಂಪ್ರದಾಯದಂತೆ ದಲಿತ ಜೋಗತಿಯನ್ನು ಮೊದಲು ಸಿಡಿ ಕಂಬಕ್ಕೆ ಏರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಹರಕೆ ಹೊತ್ತ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಸುದೀರ್ಘ‌ವಾದ ಸಿಡಿ ಉತ್ಸವದಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಈ ಬಾರಿಯ ಸಿಡಿ ಉತ್ಸವಕ್ಕೆ ಭಕ್ತರ ಸಂಖ್ಯೆ ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದು ವಿಶೇಷ. ಚಳ್ಳಕೆರೆಯಮ್ಮ ದೇವಸ್ಥಾನದಿಂದ ನೆಹರೂ ವೃತ್ತದ ತನಕ ಜನಸಾಗರವೇ ಸೇರಿತ್ತು. ಸಿಡಿ ಉತ್ಸವದ ಎತ್ತಿನಗಾಡಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಈ ಬಾರಿಯ ಸಿಡಿ ಉತ್ಸವಕ್ಕೆ ನೂತನ ಸಿಡಿ ಕಂಬವನ್ನು ಸಿದ್ದಪಡಿಸಲಾಗಿತ್ತು. ಸಿಡಿ ಕಂಬದ ಎತ್ತಿನಗಾಡಿಯನ್ನು ಹತ್ತು ಜೊತೆ ಎತ್ತುಗಳು ಹೊತ್ತು ಸಾಗಿದವು. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಿಡಿ ಉತ್ಸವ ಎಲ್ಲರಲ್ಲೂ ಹೊಸ ಉತ್ಸಾಹ, ಸಂತೋಷವನ್ನು ಮೂಡಿಸಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಸೇರಿದ್ದರು. ಯುವಕರು ಸಿಡಿ ಸಾಗುವ ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ನಗರದ ಮುಸ್ಲಿಂ ಸಂಘಟನೆಗಳು ದಾರಿಯುದ್ದಕ್ಕೂ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದವು. ಕೆಲವರು ಮಜ್ಜಿಗೆ ವಿತರಿಸಿದರೆ, ಮತ್ತೂಂದು ಗುಂಪು ದೇವಿಗೆ ಪ್ರೀತಿಯಾದ ಅನ್ನ, ಮೊಸರನ್ನು ಭಕ್ತರಿಗೆ ನೀಡಿತು. ಉತ್ಸವದುದ್ದಕ್ಕೂ ಡೊಳ್ಳು ಕುಣಿತ, ವೀರನಾಟ್ಯ, ಕೋಲಾಟ, ಪೋತರಾಜರ ನಾಟ್ಯ, ವಿವಿಧ ಜಾನಪದ ಕಲಾ ತಂಡಗಳು ಜನರ ಗಮನ ಸೆಳೆದವು. ಸಿಡಿ ಉತ್ಸಕ್ಕೂ ಮುನ್ನ ಮುಕ್ತಿ ಬಾವುಟವನ್ನು ಹರಾಜು ಮಾಡಲಾಯಿತು. ಮುಕ್ತಿ ಬಾವುಟವನ್ನು ಹಳೇ ನಗರದ ಗ್ರಂಥಿಕೆ ಅಂಗಡಿ ಶಂಕರಪ್ಪನವರ ಮೊಮ್ಮಗ ಚಿರಂಜೀವಿ ಎಂಬುವವರು 1.10 ಲಕ್ಷ ರೂ.ಗೆ ಪಡೆದರು.

ಮುತ್ತೈದೆಯರು ದೇವಿಗೆ ಉಡಿಯಕ್ಕಿ, ಕುಪ್ಪಸ, ಸೀರೆ, ಹಸಿರು ಬಳೆ, ಅರಶಿನ, ಕುಂಕುಮವನ್ನು ನೀಡಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ನಗರಸಭಾ ಸದಸ್ಯರಾದ ಸಿ. ಶ್ರೀನಿವಾಸ್‌, ಬಿ.ಟಿ. ರಮೇಶ್‌ ಗೌಡ, ಟಿ. ಮಲ್ಲಿಕಾರ್ಜುನ, ಆರ್‌. ರುದ್ರ ನಾಯಕ, ವೆಂಕಟೇಶ್‌, ಧರ್ಮದರ್ಶಿ ಗೌಡ್ರ ಪಿ. ರಾಜಣ್ಣ, ಪಿ. ತಿಪ್ಪೇಸ್ವಾಮಿ, ಚಿತ್ರಯ್ಯನಹಟ್ಟಿ ನಾಗರಾಜ, ದಳವಾಯಿಮೂರ್ತಿ, ಚಂದ್ರಶೇಖರ್‌, ಆದಿಭಾಸ್ಕರ ಶೆಟ್ಟಿ, ಅನಂತಪ್ರಸಾದ್‌, ಮುಖಂಡರಾದ ಬಡಗಿ ಪಾಪಣ್ಣ, ಪ್ರಸನ್ನಕುಮಾರ್‌ ಮೊದಲಾದವರು ಪಾಲ್ಗೊಂಡಿದ್ದರು. ಡಿವೈಎಸ್ಪಿ ಎಸ್‌. ರೋಷನ್‌ ಜಮೀರ್‌ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಈ. ಆನಂದ, ಪಿಎಸ್‌ಐ ನೂರ್‌ ಅಹಮ್ಮದ್‌ ಪೊಲೀಸ್‌ ಬಂದೋಬಸ್ತ್ಏ ರ್ಪಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next