Advertisement

ತೆಲುಗು ಸಾಹಿತ್ಯಕ್ಕೆ ಬೇಡಿಕೆ ಜಾಸ್ತಿ!

06:15 PM Nov 02, 2019 | Naveen |

ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿರುವ ಶ್ರೀ ಕೃಷ್ಣ ರಾಜೇಂದ್ರ ಗ್ರಂಥಾಲಯ 1972 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 47 ವರ್ಷ ಪೂರೈಸಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಗ್ರಂಥಾಲಯದಲ್ಲಿ ಓದುಗರಿಗೆ ಅವಶ್ಯವಿರುವ ಹಲವಾರು ಕಾದಂಬರಿ, ಪುಸ್ತಕಗಳಿವೆ. ಒಟ್ಟು 673 ಸದಸ್ಯರಿದ್ದು, ಅವರಲ್ಲಿ 142 ಸದಸ್ಯರು ತೆಲುಗು ಭಾಷಿಕರಾಗಿದ್ದಾರೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ನಗರದಲ್ಲಿ ತೆಲುಗು ಭಾಷಿಕರು ಸಾಕಷ್ಟಿದ್ದಾರೆ. ಹಾಗಾಗಿ ತೆಲುಗು ಭಾಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಬೇಕು ಎಂಬ ಬೇಡಿಕೆ ಇದೆ.

Advertisement

ಪ್ರಸ್ತುತ ಗ್ರಂಥಾಲಯದಲ್ಲಿ 43 ಸಾವಿರ ಪುಸ್ತಕಗಳಿವೆ. ಹಿಂದಿ, ಮರಾಠಿ ಭಾಷೆ ಹೊರತುಪಡಿಸಿ ಕನ್ನಡ ಹಾಗೂ ಆಂಗ್ಲ ಭಾಷೆಯ ವೃತ್ತ ಪತ್ರಿಕೆಗಳು ಈ ಗ್ರಂಥಾಲಯದಲ್ಲಿ ಲಭ್ಯವಿವೆ. ಚಿತ್ರದುರ್ಗದ ಇತಿಹಾಸವನ್ನು ಬಿಂಬಿಸುವ ವೀರ ಮದಕರಿ ನಾಯಕರ ಆಳ್ವಿಕೆಗೆ ಸಂಬಂಧಪಟ್ಟ ಪುಸ್ತಕಗಳು, ವಿಶೇಷವಾಗಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳ ಅಗತ್ಯತೆ ಇದೆ ಎನ್ನುತ್ತಾರೆ ಓದುಗರು.

ಗ್ರಂಥಾಲಯ ವಿಶಾಲವಾದ ಕಟ್ಟಡ ಹೊಂದಿದ್ದು, ಸಾರ್ವಜನಿಕರು ಕುಳಿತು ಓದಲು ಟೇಬಲ್‌, ಕುರ್ಚಿ ವ್ಯವಸ್ಥೆ ಮಾಡಲಾಗಿದೆ. 2014-15ನೇ ಸಾಲಿನ ಶಾಸಕರ ಅನುದಾನದಡಿ 15 ಲಕ್ಷ ರೂ. ಗಳಲ್ಲಿ ಗ್ರಂಥಾಲಯದ ಕೆಳ ಭಾಗದ ಕೊಠಡಿಗಳನ್ನು ಆಧುನೀಕರಣಗೊಳಿಸಲಾಗಿದೆ. ಕಳೆದ 2017-18ನೇ ಸಾಲಿನಲ್ಲಿ ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯದ ಮೇಲ್ಮಹಡಿ ನಿರ್ಮಿಸಲಾಗಿದೆ.

ಗ್ರಂಥಾಲಯದ ಕೆಳ ಅಂತಸ್ತಿನ ತುರ್ತು ರಿಪೇರಿ ಹಿನ್ನೆಲೆಯಲ್ಲಿ ಪುಸ್ತಕವನ್ನು ನೆಲದ ಮೇಲೆ ಇಡಲಾಗಿದೆ. ಸರ್ಕಾರದಿಂದ ಇನ್ನೂ ರ್ಯಾಕ್‌ ಗಳು ಬಂದಿಲ್ಲವಾದ್ದರಿಂದ ಪುಸ್ತಕಗಳ ಜೋಡಣೆ ಆಗಿಲ್ಲ. ಪ್ರತಿ ನಿತ್ಯ ಸುಮಾರು 200ಕ್ಕೂ ಹೆಚ್ಚು ಜನ ಪತ್ರಿಕೆಗಳನ್ನು ಓದಲು ಆಗಮಿಸಿದರೆ 100ಕ್ಕೂ ಹೆಚ್ಚು ಜನ ಪುಸ್ತಕಗಳನ್ನು ಪಡೆದುಕೊಳ್ಳುತ್ತಾರೆ.

ಕಳೆದ ಸುಮಾರು 30 ವರ್ಷಗಳಿಂದ ಭೋಜರಾಜ ಎಂಬುವವರು ಸಿಪಾಯಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಟಿ. ರಾಘವೇಂದ್ರ ಎಂಬುವವರನ್ನು ಸಿಬ್ಬಂದಿಯಾಗಿ ನೇಮಕ ಮಾಡಲಾಗಿದೆ.

Advertisement

ಸಿಬ್ಬಂದಿ ಕೊರತೆ: ಗ್ರಂಥಾಲಯದಲ್ಲಿ ಸಿಬ್ಬಂದಿ ಕೊರತೆ ಇದೆ. ಗ್ರಂಥಪಾಲಕ ಡಿ. ತಿಮ್ಮರಾಯ ಮೂರು ದಿನಗಳಷ್ಟೇ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೆ ಮೂರು ದಿನಗಳ ಕಾಲ ಮೊಳಕಾಲ್ಮೂರು ಗ್ರಂಥಾಲಯಕ್ಕೆ ಪ್ರಭಾರಿ ಗ್ರಂಥಪಾಲಕರಾಗಿ ನಿಯೋಜಿಸಲಾಗಿದೆ. ಇದರಿಂದ ಓದುಗರಿಗೆ ತೊಂದರೆಯಾಗುತ್ತಿದೆ. ಎರಡು ಅಂತಸ್ತುಗಳ ಈ ಕಟ್ಟಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಗ್ರಂಥಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕಿದೆ.

ಸ್ನಾತಕೋತ್ತರ ಮತ್ತು ತಾಂತ್ರಿಕ ಪದವಿ ಅಭ್ಯಾಸ ಮಾಡಲು ಅನುಕೂಲವಾಗುವ ಪುಸ್ತಕಗಳ ವ್ಯವಸ್ಥೆ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next