Advertisement

ಕಾರ್ಗಿಲ್ ಗೆಲುವು ಸ್ಮರಣೀಯ

11:20 AM Jul 28, 2019 | Naveen |

ಚಳ್ಳಕೆರೆ: ರಾಷ್ಟ್ರದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ದೇಶಪ್ರೇಮಿಯಾಗಬೇಕು. ವಿಶ್ವದಲ್ಲಿಯೇ ವಿಶೇಷತೆಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ಇಂತಹ ಪುಣ್ಯ ನಾಡಿನಲ್ಲಿ ಜನ್ಮ ಪಡೆಯುವುದೇ ಸಂತಸದ ವಿಷಯ ಎಂದು ನಿವೃತ್ತ ಸೈನಿಕ ಶಿವಮೂರ್ತಿ ಹೇಳಿದರು.

Advertisement

ಇಲ್ಲಿನ ಹೊಂಗಿರಣ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಭದ್ರತೆಗಾಗಿ ದಿನದ 24 ಗಂಟೆಗಳ ಕಾಲ ಸೈನಿಕರು ಹೋರಾಡುತ್ತಿರುತ್ತಾರೆ. ಅದರಲ್ಲೂ ಭಯೋತ್ಪಾದನೆ, ಉಗ್ರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸುವ ನಮ್ಮ ಸೈನಿಕರು ರಾಷ್ಟ್ರದ ಹೆಮ್ಮೆಯ ವೀರ ಪುರುಷರು ಎಂದು ಬಣ್ಣಿಸಿದರು.

ಕಳೆದ 20 ವರ್ಷಗಳ ಹಿಂದೆ ಭಾರತದ ಸೈನಿಕರು ಹೋರಾಟ ನಡೆಸಿ ಜಯ ದಾಖಲಿಸಿದ ಕಾರ್ಗಿಲ್ ವಿಜಯ ರಾಷ್ಟ್ರದ ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಷಯವಾಗಿದೆ. ಸೈನಿಕರ ಬಗ್ಗೆ ವಿಶೇಷ ಗೌರವವನ್ನು ತಂದುಕೊಟ್ಟ ಜಯ ಇದಾಗಿದೆ. ಅಂದು ಸೈನಿಕರಿಗೆ ಸ್ಫೂರ್ತಿ ತುಂಬಿ ಕಾರ್ಯಚರಣೆಗೆ ಸಹಕರಿಸಿದ ಕೇಂದ್ರ ಸರ್ಕಾರದ ಸಹಕಾರವನ್ನು ಮರೆಯುವಂತಿಲ್ಲ ಎಂದರು.

ಹೊಂಗಿರಣ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾಗಪ್ಪ ಮಾತನಾಡಿ, ಪ್ರಸ್ತುತ ವರ್ಷದಿಂದ ನಮ್ಮ ವಿದ್ಯಾಸಂಸ್ಥೆ ಪ್ರಾರಂಭವಾಗಿದೆ. ಪೋಷಕರ ಸಹಕಾರದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಹೆಚ್ಚು ಗಮನ ಹರಿಸಲು ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಕಾರ್ಗಿಲ್ ವಿಜಯದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ನಿವೃತ್ತ ಸೈನಿಕ ಶರಣಪ್ಪ, ಹರೀಶ್‌ಕುಮಾರ್‌, ಸಂಸ್ಥೆಯ ಕಾರ್ಯದರ್ಶಿ ಡಿ. ದಯಾನಂದ, ಶಿವಪ್ರಸಾದ್‌, ಮುಖ್ಯ ಶಿಕ್ಷಕಿ ವೀಣಾ ರಮೇಶ್‌, ಎಸ್‌. ಉಜ್ಜಿನಪ್ಪ, ಎಂ. ವಿಜಯಕುಮಾರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೋಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಗಿಲ್ ವಿಜಯೋತ್ಸವದ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು ಸೈನಿಕರ ಪೋಷಾಕು ಧರಿಸಿ ಗಮನ ಸೆಳೆದರು.

Advertisement
Advertisement

Udayavani is now on Telegram. Click here to join our channel and stay updated with the latest news.