Advertisement

ಬಾಲ್ಯವಿವಾಹ ನಿರ್ಮೂಲನೆಗೆ ಶಿಕ್ಷಣವೇ ಮದ್ದು

12:12 PM Jun 09, 2019 | Naveen |

ಚಳ್ಳಕೆರೆ: ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸುವಂತೆ ಕಾನೂನು ಅವಕಾಶ ಕಲ್ಪಿಸಿದೆ. ಕಾನೂನಿನ ಸಹಕಾರವಿಲ್ಲದೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಾನೂನು ಮಾನವ ಜೀವನದ ಅವಿಭಾಜ್ಯ ಅಂಗ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್‌ ಹೇಳಿದರು.

Advertisement

ಇಲ್ಲಿನ ಎಚ್ಟಿಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬಾಲ್ಯವಿವಾಹದ ಬಗ್ಗೆ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಹಾಗೂ ಡಿವಿಜಿಯವರ ಮಂಕುತಿಮ್ಮನ ಕಗ್ಗ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನಗಳಿಂದ ಮಾನವ ಸಮಾಜಕ್ಕೆ ಕಳಂಕಪ್ರಾಯವಾದ ಬಾಲ್ಯವಿವಾಹ ಪದ್ಧತಿಯನ್ನು ದೂರ ಮಾಡುವ ಶಕ್ತಿ ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಎಲ್ಲಾ ಹೆಣ್ಣುಮಕ್ಕಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಹಿಂದೆ ನಮ್ಮ ಹಿರಿಯರು ಸಂಪ್ರದಾಯಗಳ ಆಚರಣೆ ಹಿನ್ನೆಲೆಯಲ್ಲಿ ಮಹಿಳೆಯರನ್ನು ಕೇಳದೆ, ವಯಸ್ಸನ್ನು ಲೆಕ್ಕಿಸದೆ ಮಹಿಳೆಯರ ಅಭಿಪ್ರಾಯ ಸಂಗ್ರಹಿಸದೆ ಏಕಪಕ್ಷೀಯವಾಗಿ ತಮಗೆ ತೋಚಿದ ರೀತಿಯಲ್ಲಿ ವಿವಾಹವನ್ನು ನೆರವೇರಿಸುತ್ತಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಲೌಕಿಕ‌ ಜ್ಞಾನವಿಲ್ಲದ ಹಾಗೂ ಜೀವನ ನಿರ್ವಹಿಸಲು ಸಮರ್ಥಳಾಗದ ಪುಟ್ಟ ಬಾಲಕಿಗೆ ಮದುವೆ ಎಂಬ ಹಣೆಪಟ್ಟಿ ಕಟ್ಟಿ ಜವಾಬ್ದಾರಿ ನೀಡುತ್ತಿದ್ದರು. ಬಾಲಕಿ ಹಿರಿಯರ ಮಾತಿಗೆ ಅಂಜಿ ತೋರಿಸಿದ ಗಂಡಿನೊಂದಿಗೆ ಮದುವೆಯಾಗುತ್ತಿದ್ದಳು. ಇಲ್ಲಿ ಸ್ತ್ರೀಸಮಾನತೆ ಮಾಯವಾಗಿ ಕಾನೂನಿನ ಪರಿಪಾಲನೆ ಆಗುತ್ತಿರಲಿಲ್ಲ. ಹಾಗಾಗಿ ಬಾಲ್ಯವಿವಾಹಕ್ಕೆ ಪ್ರೋತ್ಸಾಹಿಸುವ ಮತ್ತು ಬಾಲ್ಯವಿವಾಹ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಲ್ಯವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶ ನ್ಯಾಯಾಂಗ ಇಲಾಖೆಗೆ ಇದೆ. ಈ ಕಾರ್ಯಕ್ಕೆ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಕೈಜೋಡಿಸುವಂತೆ ಮನವಿ ಮಾಡಿದರು.

ನ್ಯಾಯಾಧಿಧೀಶ ಮನು ಪಾಟೀಲ್ ಮಾತನಾಡಿ, ಮಹಿಳೆಯರ ಸಂರಕ್ಷಣೆಗೆ ಹಲವಾರು ಕಾನೂನುಗಳಿದ್ದರೂ ಅವುಗಳ ಬಗ್ಗೆ ತಿಳಿಯದ ಮಹಿಳೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾಳೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತನಗೆ ರಕ್ಷಣೆ ನೀಡುವ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕಿದೆ. ಇಂತಹ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನ್ಯಾಯಾಂಗ ಇಲಾಖೆ ಮಾಡುತ್ತಿದೆ ಎಂದರು. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಜಿ.ವಿ.ಶ್ರೀರಾಮ ರೆಡ್ಡಿ, ಸಾಹಿತಿಗಳೆಂದರೆ ಬಡವರು ಎಂದೇ ಅರ್ಥ. ಡಿ.ವಿ. ಗುಂಡಪ್ಪನವರು ತಮ್ಮ ಇಡೀ ಬದುಕನ್ನು ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಮೀಸಲಿಟ್ಟರು. ಶಾಲೆಯ ಉಪಾಧ್ಯಾಯರಾಗಿ ತಮ್ಮ ಬದುಕು ಆರಂಭಿಸಿದ ಅವರು, ಕನ್ನಡ ಸಾಹಿತ್ಯ ಲೋಕ ಎಂದೂ ಮರೆಯದಂತಹ ಅಮೋಘ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು. ಬದುಕಿನ ಏರಿಳಿತವನ್ನು ಬಿಂಬಿಸುವ ಹಾಗೂ ಮೌಲ್ಯಯುತ ಬದುಕಿಗೆ ಸ್ಪರ್ಶ ನೀಡುವ ಮಂಕುತಿಮ್ಮನ ಕಗ್ಗ ಅವರ ಸಾಹಿತ್ಯದ ಶಕ್ತಿಯ ರೂಪ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಗಿರೀಶ್‌, ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ನಾಗರಾಜು, ಕಾರ್ಯದರ್ಶಿ ಹನುಮಂತಪ್ಪ ಮೊದಲಾದವರು ಪಾಲ್ಗೊಂಡಿದ್ದರು. ಪ್ರಭಾರಿ ಮುಖ್ಯಶಿಕ್ಷಕ ಎ. ರಾಜಣ್ಣ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next