ಚಳ್ಳಕೆರೆ: ಉತ್ತರ ಕರ್ನಾಟಕ ಸೇರಿದಂತೆ ನೆರೆಪೀಡಿತ ಪ್ರದೇಶಗಳ ಜನರಿಗೆ ಕೇಂದ್ರ ಸರ್ಕಾರ ಶಾಶ್ವತ ಪರಿಹಾರ ಒದಗಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಶನಿವಾರ ಚಿತ್ರದುರ್ಗದಿಂದ ಬಳ್ಳಾರಿಗೆ ತೆರಳುವ ಮಾರ್ಗ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಗೃಹ ಮತ್ತು ಹಣಕಾಸು ಸಚಿವರನ್ನು ರಾಜ್ಯಕ್ಕೆ ಕಳುಹಿಸಿ ಮಾಹಿತಿ ತರಿಸಿಕೊಂಡಿದ್ದಾರೆ. ಈಗಾಗಲೇ ಎರಡು ಹಂತದಲ್ಲಿ 2500 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಎಲ್ಲಾ ರೀತಿಯ ನೆರವು ನೀಡಲಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಿ ಧರಣಿ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಬಿ ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ನಾನು ನೆರೆಪೀಡಿತ ಪ್ರದೇಶಗಳಿಗೆ ಹಲವಾರು ಬಾರಿ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಚರ್ಚೆ ನಡೆಸಿದ್ದೇವೆ. ಆ ಭಾಗದ ಜನರು ಕೂಡ ಕೇಂದ್ರ ಸರ್ಕಾರದ ನೆರವಿನ ಬಗ್ಗೆ ಸ್ಪಷ್ಟ ಮಾಹಿತಿ ಪಡೆದಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಎರಡು ಬಾರಿ ಪ್ರತ್ಯೇಕವಾಗಿ ಹಣಕಾಸಿನ ನೆರವು ನೀಡಿದೆ. ಆದಾಗ್ಯೂ ಕಾಂಗ್ರೆಸ್ ನಾಯಕರು ನೆರೆ ಸಂತ್ರಸ್ತರ ಸಹಾನುಭೂತಿ ಗಳಿಸಲು ಹಾಗೂ ರಾಜಕೀಯ ದುರುದ್ದೇಶದಿಂದ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಯಾವುದೇ ರೀತಿಯ ಸುಳ್ಳು ಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಜೆ.ಪಿ. ಜಯಪಾಲಯ್ಯ, ತಾಪಂ ಸದಸ್ಯ ಈ. ರಾಮ ರೆಡ್ಡಿ, ಮೋಹನ್, ಸೋಮಶೇಖರ ಮಂಡಿಮಠ, ಟಿ.ಎಸ್.ಟಿ. ಪುಟ್ಟಕ್ಕ, ಹೊನ್ನೂರು ಪ್ರಕಾಶ್, ಚಿದಾನಂದ, ಇದ್ದರು.